ಕಲಬುರಗಿ:ವಾಡಿ-ಯಾದಗಿರಿ ರಾಷ್ಟ್ರೀಯ ಹೆದ್ದಾರಿ ಮೇಲೆ ಪೊಲೀಸ್ ಪೇದೆಯೊಬ್ಬರ ಮೃತದೇಹ ಪತ್ತೆಯಾಗಿದೆ. ಮೂಲತಃ ವಿಜಯಪುರ ಜಿಲ್ಲೆ ಇಂಡಿ ತಾಲೂಕು ತೆಗ್ಗಳ್ಳಿ ಗ್ರಾಮದವರಾದ, ಸದ್ಯ ವಾಡಿ ಠಾಣೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಕರಿಯಪ್ಪ (37) ಮೃತ ಕಾನ್ಸಟೇಬಲ್ ಎಂದು ಗುರುತಿಸಲಾಗಿದೆ. ಭಾನುವಾರ ತಡರಾತ್ರಿ ಘಟನೆ ನಡೆದಿದ್ದು, ಸೋಮವಾರ ಬೆಳಗಿನ ಜಾವ ಪ್ರಕರಣ ಬೆಳಕಿಗೆ ಬಂದಿದೆ. ಮೃತ ಕರಿಯಪ್ಪ ಬಳಸಿದ ಬೈಕ್ ಅಪಘಾತಕ್ಕೀಡಾದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಅಪರಿಚಿತ ವಾಹನ ಡಿಕ್ಕಿ ಹೊಡೆದಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ.
ಮೃತ ಕರಿಯಪ್ಪ ಭಾನುವಾರ ವಾಡಿ-ಯಾದಗಿರಿ ರಾಷ್ಟ್ರೀಯ ಹೆದ್ದಾರಿ ನಾಲವಾರ ಚೆಕ್ ಪೋಸ್ಟ್ ಬಳಿ ಕರ್ತವ್ಯ ನಿರ್ವಹಿಸಿದ್ದರು. ರಾತ್ರಿ 8 ಗಂಟೆ ಸುಮಾರಿಗೆ ಕರ್ತವ್ಯ ಮುಗಿಸಿ ವಾಡಿ ಪಟ್ಟಣದ ಪೊಲೀಸ್ ಕ್ವಾಟರ್ಸ್ ನಲ್ಲಿರುವ ಮನೆಗೆ ವಾಪಸ್ ಆಗಿದ್ದರು. ಆದರೆ ಮನೆವರೆಗೆ ಅಪರಿಚಿತ ಕಾರಿನಲ್ಲಿ ಡ್ರಾಪ್ ಪಡೆದಿದ್ದರು ಎಂದು ತಿಳಿದುಬಂದಿದೆ. ಹೀಗೆ ಬಂದವರು ರಾತ್ರಿ ಊಟ ಮುಗಿಸಿ ಮಲಗಿದ್ದರು. ತಡರಾತ್ರಿ ಮತ್ತೆ ಬೈಕ್ ತೆಗೆದುಕೊಂಡು ನಾಲವಾರ ಚೆಕ್ ಪೋಸ್ಟ್ ಕಡೆಗೆ ಹೋಗಿದ್ದರು ಎನ್ನಲಾಗುತ್ತಿದೆ.
ಸ್ಥಳಕ್ಕೆ ಎಸ್ಪಿ ಇಶಾ ಪಂತ್, ಡಿವೈಎಸ್ಪಿ ಸೇರಿ ಹಿರಿಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ವಾಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರ ತನಿಖೆಯ ನಂತರವೇ ಕಾನ್ಸಟೇಬಲ್ ಸಾವಿಗೆ ನಿಖರ ಕಾರಣ ತಿಳಿದು ಬರಲಿದೆ.
ಇದನ್ನೂ ಓದಿ:ಅಕ್ರಮ ಸಂಬಂಧ ಮುಚ್ಚಿಡಲು ಬಾಲಕಿ ಹತ್ಯೆ: ಮೂವರು ಆರೋಪಿಗಳ ಬಂಧನ