ಕಲಬುರಗಿ: "ಇತ್ತೀಚೆಗೆ ನಡೆದ ಕಾಂಗ್ರೆಸ್ ಶಾಸಕಾಂಗ ಪಕ್ಷದ (ಸಿಎಲ್‌ಪಿ) ಸಭೆಯಲ್ಲಿ ಆತ್ಮಗೌರವಕ್ಕೆ ಧಕ್ಕೆಯಾದಲ್ಲಿ ನಾನು ರಾಜೀನಾಮೆ ನೀಡುವುದಾಗಿ ಹೇಳಿರುವುದು ನಿಜ" ಎಂದು ಆಳಂದ ಕಾಂಗ್ರೆಸ್ ಶಾಸಕ ಬಿ.ಆರ್.ಪಾಟೀಲ್ ಒಪ್ಪಿಕೊಂಡಿದ್ದು, ಮುಖ್ಯಮಂತ್ರಿಗೆ ಪತ್ರ ಬರೆದಿದ್ದಕ್ಕೆ ನಾನಂತೂ ಕ್ಷಮೆ ಯಾಚಿಸಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಭಾನುವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, "ನಾನೂ ಕೂಡ ಮಾಧ್ಯಮಗಳು ಮತ್ತು ಪತ್ರಿಕೆಗಳ ವರದಿಗಳನ್ನು ನೋಡಿದ್ದೇನೆ. ಯಾರು ಕ್ಷಮೆ ಕೇಳಿದ್ದಾರೆಂದು ನನಗೆ ತಿಳಿದಿಲ್ಲ. ಆದರೆ ನಾನು ಕ್ಷಮೆ ಕೇಳಿಲ್ಲ, ಕ್ಷಮೆ ಯಾಚಿಸುವುದಿಲ್ಲ. ಕ್ಷಮೆ ಕೇಳಲು ನಾನು ಏನಾದರೂ ಅಪರಾಧ ಮಾಡಿದ್ದೇನೆಯೇ? ಅಥವಾ ದೊಡ್ಡ ತಪ್ಪು ಮಾಡಿದ್ದೇನೆಯೇ?" ಎಂದು ಗೃಹ ಸಚಿವ ಜಿ.ಪರಮೇಶ್ವರ ಸೇರಿದಂತೆ ಕೆಲವು ಸಚಿವರು "ಸಿಎಂಗೆ ಪತ್ರ ಬರೆದವರು ಸಿಎಲ್‌ಪಿ ಸಭೆಯಲ್ಲಿ ಕ್ಷಮೆ ಕೇಳಿದ್ದಾರೆ" ಎಂಬ ಹೇಳಿಕೆಗೆ ಪಾಟೀಲ್ ಉತ್ತರಿಸಿದ್ದಾರೆ.
ತಮ್ಮ ಕ್ಷೇತ್ರಗಳಲ್ಲಿ ಅಭಿವೃದ್ಧಿ ಕಾಮಗಾರಿಗಳನ್ನು ಅನುಷ್ಠಾನಗೊಳಿಸದಿರುವ ಬಗ್ಗೆ ಕಳವಳ ವ್ಯಕ್ತಪಡಿಸಿ ಸುಮಾರು 30ಕ್ಕೂ ಹೆಚ್ಚು ಶಾಸಕರು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಪಕ್ಷದ ನಾಯಕತ್ವಕ್ಕೆ ಪತ್ರ ಬರೆದಿದ್ದಾರೆ ಎಂಬ ವರದಿಗಳ ನಡುವೆ ಕಳೆದ ಗುರುವಾರ ಸಂಜೆ ನಡೆದ ಸಿಎಲ್‌ಪಿ ಸಭೆ ಮಹತ್ವ ಪಡೆದುಕೊಂಡಿತ್ತು.
"ಕೆಲವು ಸಚಿವರ ವರ್ತನೆ ಮತ್ತು ನಡತೆ ಕೆಲವು ಶಾಸಕರಲ್ಲಿ ಅಸಮಾಧಾನ ಮೂಡಿಸಿದೆ" ಎಂದ ಪಾಟೀಲ್, ಇದನ್ನು ಸರಿಪಡಿಸದಿದ್ದಲ್ಲಿ ಹೋರಾಟ ಮುಂದುವರಿಸುವುದಾಗಿಯೂ ಎಚ್ಚರಿಸಿದ್ದಾರೆ. ಆದಾಗ್ಯೂ ಗುರುವಾರ ನಡೆದ ಶಾಸಕಾಂಗ ಪಕ್ಷದ ಸಭೆ ಮತ್ತು ಅಲ್ಲಿ ನಡೆದ ಚರ್ಚೆಯಿಂದ ನಾನು ತೃಪ್ತರಾಗಿದ್ದೇನೆ ಎಂದು ಹೇಳಿಕೊಂಡಿದ್ದಾರೆ.
"ನಮ್ಮ ಪಕ್ಷದಲ್ಲಿ ಆಂತರಿಕ ಪ್ರಜಾಪ್ರಭುತ್ವವಿದೆ. ಶಾಸಕಾಂಗ ಪಕ್ಷದ ಸಭೆಗೆ ಮನವಿ ಮಾಡುವ ಹಕ್ಕು ನಮಗಿದೆ. ಅದರಂತೆ ನಾಯಕರು ಸಭೆ ಕರೆದಿದ್ದಾರೆ. ಸಭೆಯಲ್ಲಿ ಮುಕ್ತ ಮತ್ತು ವಿವರವಾದ ಚರ್ಚೆ ನಡೆದಿದೆ. ನಾನು ಆ ಚರ್ಚೆಯಿಂದ ತೃಪ್ತಿ ಹೊಂದಿದ್ದೇನೆ. ಆದರೆ ಕ್ಷಮೆ ಕೇಳಲು ನಾನು ಹೇಡಿಯಲ್ಲ, ನಾನು ಯಾವುದೇ ತಪ್ಪು ಮಾಡಿದ್ದರೆ, ಕ್ಷಮೆ ಯಾಚಿಸುತ್ತೇನೆ" ಎಂದರು.
ಹಲವಾರು ಶಾಸಕರು ಅಸಮಾಧಾನಗೊಂಡು, ತಮ್ಮ ಕ್ಷೇತ್ರಗಳಲ್ಲಿ ಕೆಲಸ ಮಾಡಲು ಸಾಧ್ಯವಾಗುತ್ತಿಲ್ಲ. ಅವರು ವಿನಂತಿ ಮಾಡಿಕೊಂಡಂತೆ ಸರ್ಕಾರಿ ನೌಕರರ ವರ್ಗಾವಣೆಯನ್ನೂ ಮಾಡಿಲ್ಲ ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿ ಸಿಎಂಗೆ ಪತ್ರ ಬರೆದಿದ್ದರು. ಪಕ್ಷದ ಮೂಲಗಳ ಪ್ರಕಾರ, ಸಿಎಂಗೆ ಪತ್ರ ಬರೆದಿರುವ ಶಾಸಕರಲ್ಲೊಬ್ಬರಾದ ಪಾಟೀಲ್, ಶಾಸಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದ ಸಚಿವರ ವಿರುದ್ಧ ಸಿಎಲ್‌ಪಿ ಸಭೆಯಲ್ಲಿ ವಾಗ್ದಾಳಿ ನಡೆಸಿದ್ದಾರೆ. ತಮಗೆ ಪತ್ರ ಬರೆಯುವ ಅಗತ್ಯವೇನಿತ್ತು ಎಂದು ಸಿದ್ದರಾಮಯ್ಯ ಅವರು ಪ್ರಶ್ನಿಸಿದಾಗ, ಪಾಟೀಲರು ತಮ್ಮ ಹಕ್ಕು ಪ್ರತಿಪಾದಿಸಿದ್ದಾರೆ ಎಂದು ತಿಳಿದುಬಂದಿದೆ.
ನಮ್ಮಲ್ಲಿ ಯಾವುದೇ ಅಸಮಾಧಾನವಿಲ್ಲ ಎಂದು ಹೇಳಿರುವ ಪಾಟೀಲ್, ಕೆಲವು ಶಾಸಕರು ಸೇರಿ ಕೆಲವು ವಿಷಯಗಳ ಬಗ್ಗೆ ಚರ್ಚೆ ಮಾಡುವ ಉದ್ದೇಶದಿಂದ ಶಾಸಕಾಂಗ ಪಕ್ಷದ ಸಭೆ ಕರೆಯುವಂತೆ ಮನವಿ ಮಾಡಿದ್ದೆವು. ಸಭೆಯಲ್ಲಿ ರಾಜೀನಾಮೆ ನೀಡುವುದಾಗಿ ಹೇಳಿದ್ದೀರಾ ಎಂಬ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿ, "ಒಂದು ಹಂತದಲ್ಲಿ ಒಂದು ಮಾತು ಹೇಳಿದ್ದೆ, ಆತ್ಮಗೌರವಕ್ಕೆ ಧಕ್ಕೆಯಾದರೆ ರಾಜೀನಾಮೆ ನೀಡುತ್ತೇನೆ ಎಂದಿದ್ದೆ" ಎಂದರು.
ಆದರೆ ಯಾವ ಸಂದರ್ಭದಲ್ಲಿ ಇಂತಹ ಹೇಳಿಕೆ ನೀಡಿದಿರಿ ಎಂಬುದನ್ನು ವಿವರಿಸಲು ಹಿಂದೇಟು ಹಾಕಿದ್ದ ಶಾಸಕರು, "ಇದನ್ನು ಮಾಧ್ಯಮಗಳಲ್ಲಿ ಬಹಿರಂಗವಾಗಿ ಚರ್ಚಿಸಲು ಸಾಧ್ಯವಿಲ್ಲ, ನಾವು ಆಂತರಿಕವಾಗಿ ಚರ್ಚಿಸಿದ್ದೇವೆ. ಕೆಲ ಸಚಿವರ ವರ್ತನೆ, ನಡತೆ ಕೆಲವು ಶಾಸಕರಲ್ಲಿ ಅಸಮಾಧಾನ ಮೂಡಿಸಿದೆ. ಸಿಎಂ, ಸಚಿವರಿಗೆ ಸಲಹೆ ಕೊಟ್ಟಿದ್ದಾರೋ ಇಲ್ಲವೋ ಗೊತ್ತಿಲ್ಲ. ಅವರು ಸರಿಯಾಗಿ ಸ್ಪಂದನೆ ನೀಡದೇ ಇದ್ದರೆ ನಮ್ಮ ಹೋರಾಟ ಇದ್ದೇ ಇರುತ್ತದೆ" ಎಂದು ಎಚ್ಚರಿಸಿದ್ದಾರೆ.
ಇದನ್ನೂ ಓದಿ:ಶಾಸಕ ಬಿ ಆರ್ ಪಾಟೀಲ್ ಕ್ಷಮೆ ಯಾರೂ ಕೇಳಿಲ್ಲ: ಇಂಧನ ಸಚಿವ ಕೆ ಜೆ ಜಾರ್ಜ್