ಕಲಬುರಗಿ : ಪ್ರಧಾನಮಂತ್ರಿ ನರೇಂದ್ರ ಮೋದಿ ವಿರುದ್ಧ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ವಿಷ ಸರ್ಪ ಹೇಳಿಕೆ ಖಂಡನಾರ್ಹ. ಈ ಹೇಳಿಕೆಯಿಂದ ಶೇ.10 ರಷ್ಟು ಮತಗಳು ಕಾಂಗ್ರೆಸ್ ಕೈಬಿಡಲಿವೆ. ಮೇ. 10 ರಂದು ಮತದಾರರೇ ಕಾಂಗ್ರೆಸ್ ಗೆ ತಕ್ಕ ಉತ್ತರ ನೀಡಲಿದ್ದಾರೆ ಎಂದು ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ ವಾಗ್ದಾಳಿ ನಡೆಸಿದ್ದಾರೆ.
ಕಮಲಾಪುರ ಪಟ್ಟಣದಲ್ಲಿ ಬಿಜೆಪಿ ಸಮಾವೇಶದಲ್ಲಿ ಮಾತನಾಡಿದ ಬಿಎಸ್ ಯಡಿಯೂರಪ್ಪ, ಪ್ರಧಾನಿ ನರೇಂದ್ರ ಮೋದಿಯನ್ನು ಇಡೀ ವಿಶ್ವವೇ ಮೆಚ್ಚಿಕೊಂಡಿದೆ. ಅಮೆರಿಕದಂತ ಪ್ರಗತಿಶೀಲ ದೇಶ ಆರ್ಥಿಕ ಕಷ್ಟ ಎದುರಿಸುವ ದಿನಮಾನದಲ್ಲಿ ದೇಶದ ಆರ್ಥಿಕ ಸುಧಾರಣೆ ತಂದಿದ್ದಾರೆ. ವಿಶ್ರಾಂತಿ ಪಡೆಯದೇ ಮೋದಿ ಅವರು ದೇಶದ ಪ್ರಗತಿಗಾಗಿ ಶ್ರಮಿಸುತ್ತಿದ್ದಾರೆ. ಇಂತಹವರನ್ನು ವಿಷ ಸರ್ಪಕ್ಕೆ ಹೋಲಿಸಿರುವ ಮಲ್ಲಿಕಾರ್ಜುನ ಖರ್ಗೆ ಹೇಳಿಕೆ ಖಂಡನಾರ್ಹ. ಇವರ ಹೇಳಿಕೆಯಿಂದ ಜನ ಕೆರಳಿದ್ದಾರೆ. ಮೇ 10 ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸ್ಪಷ್ಟವಾದ ಉತ್ತರ ನೀಡಲಿದ್ದಾರೆ ಎಂದು ಕಿಡಿಕಾರಿದರು.
ರಾಜ್ಯದಲ್ಲಿ ಬಿಜೆಪಿ ಪರ ಅಲೆ ಎದ್ದಿದೆ : ಜಾತಿ ಹೆಸರಿನಲ್ಲಿ ವಿಷ ಬಿಜ ಬಿತ್ತಿ, ಹಣ ಹೆಂಡ, ತೋಳ್ಬಲ, ಅಧಿಕಾರ ಬಲದಿಂದ ಕಾಂಗ್ರೆಸ್ ಗೆಲ್ಲುವ ಕಾಲ ಮುಗಿದಿದೆ. ಒಬ್ಬ ಗ್ರಾಮ ಪಂಚಾಯತ್ ಅಧ್ಯಕ್ಷ ಕೂಡಾ ರಾಜೀನಾಮೆ ನೀಡಲಾರದ ದಿನಗಳಲ್ಲಿ ಸಿಎಂ ಹುದ್ದೆಗೆ ನಾನು ರಾಜೀನಾಮೆ ನೀಡಿದ್ದೇನೆ. ಆದರೂ ರಾಜ್ಯದಲ್ಲಿ ತಿರುಗಾಡಿ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸಲು ಪ್ರಯತ್ನ ಮಾಡುತ್ತಿದ್ದೇನೆ. ಈಗಾಗಲೇ ರಾಜ್ಯದಲ್ಲಿ ಬಿಜೆಪಿ ಪರ ಅಲೆ ಎದ್ದಿದೆ. ಮೋದಿ ಬಂದು ಹೋದ ಮೇಲೆ ಮತ್ತಷ್ಟು ಗಾಳಿ ಬೀಸಲಿದೆ. 140 ಸೀಟು ಗೆದ್ದು ಅಧಿಕಾರಕ್ಕೆ ಬರಲಿದ್ದೇವೆ ಎಂದು ಬಿಎಸ್ ಯಡಿಯೂರಪ್ಪ ವಿಶ್ವಾಸ ವ್ಯಕ್ತಪಡಿಸಿದರು.