ಕಲಬುರಗಿ:ಕಾಡಿನಿಂದ ನಾಡಿಗೆ ಆಗಮಿಸಿರುವ ಚಿರತೆಯು ಮೂರು ಹಸುಗಳನ್ನು ಕೊಂದುಹಾಕಿರುವ ಘಟನೆ ಚಿಂಚೋಳಿ ತಾಲೂಕಿನಲ್ಲಿ ನಡೆದಿದೆ.
ಚಿಂಚೋಳಿಯಲ್ಲಿ ಮೂರು ಹಸುಗಳನ್ನು ತಿಂದು ತೇಗಿದ ಚಿರತೆ
ಚಿಂಚೋಳಿ ತಾಲೂಕಿನಲ್ಲಿ ಚಿರತೆಯು ಮೂರು ಹಸುಗಳನ್ನು ಕೊಂದುಹಾಕಿರುವ ಘಟನೆ ನಡೆದಿದೆ. ಚಿರತೆ ಪ್ರತ್ಯಕ್ಷದಿಂದ ಗ್ರಾಮದ ಜನತೆ ಆತಂಕಗೊಂಡಿದ್ದಾರೆ.
ತೆಲಂಗಾಣದ ಕುಸರಂಪಳ್ಳಿಯ ಗೊಟ್ಟಂಗೊಟ್ಟಿ ಅರಣ್ಯ ಪ್ರದೇಶದಲ್ಲಿನ ಚಿರತೆ ಚಿಂಚೋಳಿ ವನ್ಯಜೀವಿ ಧಾಮ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ಕಾಣಿಸಿಕೊಳ್ಳುತ್ತಿದೆ. ಚಿರತೆ ನಾಡಿಗೆ ಬಂದಿರುವುದನ್ನು ಈಗಾಗಲೇ ಕೆಲ ದನ ಕಾಯುವ ಹುಡುಗರು ನೋಡಿದ್ದಾರೆ. ಇದೀಗ ಪಡಿಯಾಲಾ ತಾಂಡಾ, ಕುಸ್ರಂಪಳ್ಳಿ ತಾಂಡಾದಲ್ಲಿ ಮೂರು ಹಸುಗಳನ್ನು ತಿಂದು ತೇಗಿದೆ. ಚಂದ್ರಂಪಳ್ಳಿ ಜಲಾಶಯದ ಹಿಂಬದಿಯ ಪ್ರದೇಶದಲ್ಲಿಯೂ ಚಿರತೆ ಕಾಣಿಸಿಕೊಂಡಿದ್ದು, ಐನೋಳ್ಳಿಯ ಕಾಶಿರಾಮ್ ತಾಂಡಾದಲ್ಲಿ ನಾಯಿಯೊಂದನ್ನು ಸಹ ತಿಂದು ಹಾಕಿದೆ ಎನ್ನಲಾಗುತ್ತಿದೆ.
ಚಿರತೆ ಹಾವಳಿಯಿಂದ ಗ್ರಾಮದ ಜನತೆ ಬೆಚ್ಚಿಬಿದ್ದಿದ್ದಾರೆ. ಸ್ಥಳಕ್ಕೆ ವಲಯ ಅರಣ್ಯಾಧಿಕಾರಿ ಸಂಜೀವ ಕುಮಾರ ಚವ್ಹಾಣ್ ಮತ್ತು ಅರಣ್ಯ ರಕ್ಷಕ ಸಿದ್ದಾರೂಢ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸದ್ಯ ಚಿರತೆಯ ಹೆಜ್ಜೆ ಗುರುತು ಪತ್ತೆಗೆ ಸಿಬ್ಬಂದಿ ಮುಂದಾಗಿದ್ದು, ಈ ಪ್ರದೇಶದ ಗ್ರಾಮಗಳಲ್ಲಿ ಡಂಗೂರ ಸಾರಿ ಜಾಗೃತಿ ಮೂಡಿಸುತ್ತಿದ್ದಾರೆ.