ವಿಧಾನ ಪರಿಷತ್ ಸದಸ್ಯ ಬಿ ಕೆ ಹರಿಪ್ರಸಾದ್ ಕಲಬುರಗಿ:ನಾನು ಪಕ್ಕಾ ಕಾಂಗ್ರೆಸ್‍ನವನು, ಒಂದೇ ಒಂದೂ ದಿನ ಬೇರೆ ಪಕ್ಷದ ಕಡೆ ನಾನು ನೋಡಿದವನಲ್ಲ, ಮಂತ್ರಿ ಆಗೋದು ನನಗೆ ದೊಡ್ಡ ವಿಚಾರ ಅಲ್ಲ, ಮಂತ್ರಿ ಆಗೋದು ನನಗೆ ಮುಖ್ಯ ಇಲ್ಲ. ಆದರೆ ಸಣ್ಣ ಸಣ್ಣ ಸಮುದಾಯಗಳಿಗೂ ರಾಜಕೀಯದಲ್ಲಿ ಅವಕಾಶ ಸೀಗಬೇಕು, ಅದಕ್ಕಾಗಿ ನಾನು ಬೀದಿಗಿಳಿದು ಹೋರಾಟ ಮಾಡಲು ಸಿದ್ಧ ಎಂದು ವಿಧಾನ ಪರಿಷತ್ ಸದಸ್ಯ ಬಿ ಕೆ ಹರಿಪ್ರಸಾದ್ ಹೇಳಿದ್ದಾರೆ.
ಕಲಬುರಗಿಯಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡುತ್ತಿದ್ದ ಅವರು, ತಮಗೆ ಮಂತ್ರಿ ಸ್ಥಾನ ಸಿಗದಿರುವ ವಿಚಾರವಾಗಿ ಪ್ರತಿಕ್ರಿಯಿಸಿ, ಜವಾನನಿಂದ ಹಿಡಿದು ದಿವಾನವರೆಗೆ ಒಂದೇ ಜಾತಿಯವರನ್ನ ಹಾಕಿಕೊಳ್ಳಲು ಆಗಲ್ಲ. ಎಲ್ಲಾ ವರ್ಗದವರಿಗೂ ಅವಕಾಶ ಕೊಡೋದು ಇಂದಿನವರು ಇಂದಿರಾಗಾಂಧಿಯವರನ್ನ ನೋಡಿ ಕಲಿಬೇಕು ಎಂದು ಹೇಳಿದ್ರು.
ಹಿಂದುಳಿದ ವರ್ಗ ಮತ್ತು ಹಿಂದುಳಿದ ಜಾತಿ ನಡುವೆ ಬಹಳ ವ್ಯತ್ಯಾಸ ಇದೆ. ರಾಜ್ಯದಲ್ಲಿ ಹಿಂದುಳಿದ ವರ್ಗಗಳ ಬಗ್ಗೆ ಕಾಳಜಿ ವಹಿಸಿ, ಕಾರ್ಯಕ್ರಮಗಳನ್ನು ಮಾಡಿ. ಜನ ಜಾಗೃತಿ ಮತ್ತು ರಾಜಕೀಯ ಪ್ರಜ್ಞೆ ಮೂಡಿಸಿರುವಂತಹ ಕೀರ್ತಿ ಯಾರಿಗಾದರೂ ಇದ್ದರೆ ಅದು ದೇವರಾಜ ಅರಸು ಅವರು. ಕೆಲವೇ ಕೆಲವು ಸಮುದಾಯಗಳು ಅಧಿಕಾರವನ್ನು ಅನುಭವಿಸಿತ್ತಿವೆಯೇ ವಿನಃ ಪ್ರತಿ ಸಮುದಾಯಕ್ಕೂ ಅಧಿಕಾರ ವಿಕೇಂದ್ರೀಕರಣ ಆಗುತ್ತಿಲ್ಲ. ಅದು ಆಗಬೇಕು ಎಂದು ಹರಿಪ್ರಸಾದ್ ಹೇಳಿದ್ರು.
ಹಿಂದುಳಿದ ವರ್ಗದವರಿಗಾಗಿ ದೇವರಾಜ ಅರಸು, ಬಂಗಾರಪ್ಪನವರು, ಜರ್ನಾದನ ಪೂಜಾರಿ, ಕಾಗೋಡು ತಿಮ್ಮಪ್ಪನವರು, ವೀರಪ್ಪ ಮೊಯ್ಲಿಯವರು ಕೆಲಸ ಮಾಡಿದ್ದಾರೆ. ಸಣ್ಣ ಸಮುದಾಯಗಳು ಅಂತವರಿಗೆ ಎಂಪಿಗಳು, ಎಂಎಲ್ಎಗಳನ್ನಾಗಿ ಮಾಡಲಿಕ್ಕಾಗುವುದಿಲ್ಲ. ಇಂತವರನ್ನು ಹುಡುಕಿ ವಿಧಾನಸೌಧ ನಮ್ಮದು ಎಂಬ ಭಾವನೆ ಬರಬೇಕಾದರೆ, ಈ ರಾಷ್ಟ್ರ, ರಾಜ್ಯ, ಸರ್ಕಾರ ಎಂಬ ಭಾವನೆ ಬರಬೇಕಾದರೆ ಅವರಿಗೂ ಸಹ ಪಾಲನ್ನು ಕೊಡಬೇಕು ಎಂದು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿಯವರು ಹೇಳಿದ್ದಾರೆ. ಅದಕ್ಕೆ ನಾನು ಬೆಂಬಲ ನೀಡುತ್ತೇನೆ ಎಂದು ಹೇಳಿದರು.
ಬಿಜೆಪಿ ಬಂದ ಮೇಲೆ ಘೋಷಣೆಗಳಿಗೆ ಏನೂ ಕಮ್ಮಿಯಿಲ್ಲ. ಒನ್ ನೇಷನ್ ಒನ್ ಎಲೆಕ್ಷನ್, ಒನ್ ನೇಷನ್ ಒನ್ ಎಜುಕೇಷನ್ ಹೀಗೆ ಅನೇಕ ಘೋಷಣೆಗಳನ್ನು ಮಾಡಿದ್ದಾರೆ. ಮುಂದೆ ಒನ್ ನೇಷನ್ ಒನ್ ಲೀಡರ್ ಅಂದರು ಅನ್ನಬಹುದು. ಬಿಜೆಪಿಯು ರಾಷ್ಟ್ರದಲ್ಲಿನ ವೈವಿಧ್ಯತೆಯನ್ನ ಹಾಳು ಮಾಡುತ್ತಿದ್ದು, ವಿವೇಕಾನಂದರ ಆಶಯದ ವಿರುದ್ಧ ಬಿಜೆಪಿ ನಿರ್ಧಾರ ಕೈಗೊಳ್ಳುತ್ತಿದೆ. ಒನ್ ನೇಷನ್ ಒನ್ ಎಲೆಕ್ಷನ್ ಈ ದೇಶದಲ್ಲಿ ನಡೆತಕ್ಕಂತದ್ದಲ್ಲ ಎಂದು ಬಿ ಕೆ ಹರಿಪ್ರಸಾದ್ ಹೇಳಿದ್ರು.
ಕಾಂಗ್ರೆಸ್ ಪಕ್ಷ ವೈಜ್ಞಾನಿಕ ನೆಲಗಟ್ಟಲ್ಲಿ ಅಚಲ ನಂಬಿಕೆ ಇಟ್ಟುಕೊಂಡಿದೆ. ನಾವು ಬಿಜೆಪಿಯವರ ಹಾಗೆ ಮೂಢನಂಬಿಕೆ ಇಟ್ಟುಕೊಂಡಿಲ್ಲ. ಮಲ್ಲಿಕಾರ್ಜುನ ಖರ್ಗೆ ಅವರು 1981ರಲ್ಲಿ ಕಂದಾಯ ಸಚಿವರಾಗಿದ್ದಾಗ ಪೀಣ್ಯದಲ್ಲಿ ಇಸ್ರೋಗೆ ಜಾಗ ಕೊಟ್ಟರು. ಅದನ್ನು ನಾವ್ಯಾರೂ ಮರೆಯೋಕೆ ಆಗಲ್ಲ, ನಾವು ಅದರ ಪ್ರಚಾರ ತೆಗೆದುಕೊಂಡಿರಲಿಲ್ಲ. ನಾವು ಬಿತ್ತಿರೋ ಬೀಜದ ಮರದ ಹಣ್ಣನ್ನು ಈಗ ಬಿಜೆಪಿಯವರು ತಿನ್ನುತ್ತಿದ್ದಾರೆ. ಇನ್ನೂ ಚಂದ್ರಯಾನದಲ್ಲಿ ಕಾರ್ಯನಿರ್ವಹಿಸಿದ್ದ ಬಹುತೇಕ ವಿಜ್ಞಾನಿಗಳು ಹಿಂದುಳಿದ ವರ್ಗಕ್ಕೆ ಸೇರಿದವರೆಂದು ಹರಿಪ್ರಸಾದ್ ತಿಳಿಸಿದರು.
ಇದನ್ನೂ ಓದಿ:ಶಾಸಕ ರಾಯರೆಡ್ಡಿಯಿಂದ ಸಿಎಂಗೆ ಮತ್ತೊಂದು ಪತ್ರ: ಸಮಸ್ಯೆ ಆಲಿಸದ ಜೆಸ್ಕಾಂ ಅಧಿಕಾರಿಗಳ ಜೊತೆ ಸಭೆ ಕರೆಯುವಂತೆ ಮನವಿ