ಕಲಬುರಗಿ : ಕಬ್ಬು ಬೆಳೆಗಾರರ ಅನೇಕ ಸಮಸ್ಯೆಗಳಿಗೆ ಅಂತ್ಯ ಹಾಡಲು ಇಂದು ನಡೆಸಿದ ರೈತರ ಮತ್ತು ಸಕ್ಕರೆ ಕಾರ್ಖಾನೆಗಳ ನಡುವಿನ ಸಭೆ ಫಲಪ್ರದವಾಗಿದ್ದು, ಕಬ್ಬು ಬೆಳೆಗಾರರ ಹಿತದಲ್ಲಿ ಜಿಲ್ಲೆಯ ಮಟ್ಟಿಗೆ ಹಲವು ನಿರ್ಧಾರಗಳನ್ನು ಕೈಗೊಳ್ಳಲಾಗಿದೆ.
ಸಕ್ಕರೆ ಕಾರ್ಖಾನೆ ಮತ್ತು ರೈತರೊಂದಿಗೆ ಸಭೆ ನಡೆಸಿದ ನಂತರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಬ್ಬು ನಿಯಂತ್ರಣ ಆದೇಶ-1966ರ ನಿಯಮ 6ರ ಪ್ರಕಾರ ದ್ವಿಪಕ್ಷೀಯ ಒಪ್ಪಂದ ಕಡ್ಡಾಯವಾಗಿದೆ. ಇದನ್ನು ಕಲಬುರಗಿ ಜಿಲ್ಲೆಯಲ್ಲಿ ಪ್ರಥಮವಾಗಿ ಕಟ್ಟುನಿಟ್ಟಾಗಿ ಅನುಷ್ಠಾನಕ್ಕೆ ತರಲು ರೈತರ ಸಹಮತದೊಂದಿಗೆ ಇಂದು ನಡೆದ ಸಭೆಯಲ್ಲಿ ನಿರ್ಧರಿಸಲಾಗಿದೆ. ಒಪ್ಪಂದದ ನಮೂನೆಯನ್ನು ಡಿ.ಸಿ. ಕಚೇರಿಯಿಂದಲೇ ತಯಾರಿಸಿ ತಹಶೀಲ್ದಾರರ ಮೂಲಕ ರೈತರಿಗೆ ಮತ್ತು ಕಾರ್ಖಾನೆಗಳಿಗೆ ನೀಡಲಾಗುತ್ತದೆ.
ಇದರಿಂದ ಕಂಪನಿಗಳಲ್ಲಿ ಲಂಚಗಳಿಗೆ ಕಡಿವಾಣ ಬೀಳಲಿದ್ದು, ಅನ್ನದಾತ ರೈತನಿಗೆ ಕಿರಿಕಿರಿ ತಪ್ಪಲಿದೆ. ಒಪ್ಪಂದದಂತೆ ಕಾಲಮಿತಿಯಲ್ಲಿ ಹಣ ಸಿಗಲಿದೆ. ಪರಿಹಾರ ಕೊಟ್ಟಿಲ್ಲ, ಕಬ್ಬು ಕಟಾವಾಗಿಲ್ಲ ಎನ್ನುವ ದೂರುಗಳು ಇನ್ನು ಮುಂದೆ ಬಾರದಂತೆ ಮುನ್ನೆಚ್ಚರಿಕೆ ಕ್ರಮವಹಿಸಿದ್ದೇವೆ ಎಂದು ಜಿಲ್ಲಾಧಿಕಾರಿ ಯಶವಂತ ವಿ. ಗುರುಕರ್ ಇದೇ ವೇಳೆ, ಹೇಳಿದರು.