ಕರ್ನಾಟಕ

karnataka

ಚಿಂಚೋಳಿಯಲ್ಲಿ ಕಳವಾದ ಸಾರಿಗೆ ಬಸ್ ತೆಲಂಗಾಣದಲ್ಲಿ ಪತ್ತೆ: ರಸ್ತೆ ಬದಿ ಬಸ್ ಬಿಟ್ಟು ಕಳ್ಳ ಪರಾರಿ

By

Published : Feb 21, 2023, 7:46 PM IST

Updated : Feb 21, 2023, 7:57 PM IST

ಕಲಬುರಗಿಯಲ್ಲಿ ಕಳವಾದ ಬಸ್​​ ತೆಲಂಗಾಣದಲ್ಲಿ ಪತ್ತೆ - ಚಿಂಚೋಳಿ ಬಸ್​ ನಿಲ್ದಾಣದಿಂದ ಕಳವಾಗಿದ್ದ ಬಸ್​​ - ತೆಲಂಗಾಣದ ಭೂ ಕೈಲಾಸ ದೇವಸ್ಥಾನದ ಸಮೀಪ ಪತ್ತೆ - ಬಸ್​ ಸ್ಥಳದಲ್ಲಿಯೇ ಬಿಟ್ಟು ಕಳ್ಳ ಪರಾರಿ

bidar-bus-theft-case-bus-found-in-telangana
ಕರ್ನಾಟಕದಲ್ಲಿ ಕಳವಾದ ಸಾರಿಗೆ ಬಸ್ ತೆಲಂಗಾಣದಲ್ಲಿ ಪತ್ತೆ: ರಸ್ತೆ ಬದಿ ಬಸ್ ಬಿಟ್ಟು ಪರಾರಿಯಾದ ಕಳ್ಳ

ಚಿಂಚೋಳಿಯಲ್ಲಿ ಕಳವಾದ ಸಾರಿಗೆ ಬಸ್ ತೆಲಂಗಾಣದಲ್ಲಿ ಪತ್ತೆ: ರಸ್ತೆ ಬದಿ ಬಸ್ ಬಿಟ್ಟು ಕಳ್ಳ ಪರಾರಿ

ಕಲಬುರಗಿ : ಜಿಲ್ಲೆಯ ಚಿಂಚೋಳಿ ಬಸ್ ನಿಲ್ದಾಣದಿಂದ ಇಂದು ಮುಂಜಾನೆ ಕಳವಾಗಿದ್ದ ಕಲ್ಯಾಣ ಕರ್ನಾಟಕ ಸಾರಿಗೆ ಬಸ್ ಪಕ್ಕದ ತೆಲಂಗಾಣದಲ್ಲಿ ಪತ್ತೆ ಆಗಿದೆ. ಕಳವಾದ ಬಸ್​​ನ ಜಾಡು ಹಿಡಿದು ಹೋದ ಪೊಲೀಸರು ತೆಲಂಗಾಣದ ಪ್ರಸಿದ್ದ ಭೂಕೈಲಾಸ ದೇವಸ್ಥಾನ ಸಮೀಪದ ಅಂತಾರಾಮ ತಾಂಡಾ ಬಳಿ ಬಸ್​ ಅನ್ನು ಪತ್ತೆ ಹಚ್ಚಿದ್ದಾರೆ.‌ ರಸ್ತೆ ಬದಿಯ ಗುಂಡಿಯಲ್ಲಿ ಬಸ್​​​​ನ ಚಕ್ರ ಸಿಲುಕಿದ್ದರಿಂದ ಬಸ್​ ಅನ್ನು ಅಲ್ಲಿಯೇ ಬಿಟ್ಟು ಕಳ್ಳ ಪರಾರಿಯಾಗಿದ್ದಾನೆ.

ಘಟನೆ ವಿವರ: ಇಂದು ಬೆಳಗಿನ ಜಾವ ಸುಮಾರು 3:30ಕ್ಕೆ ಕಲಬುರಗಿ ಜಿಲ್ಲೆಯ ಚಿಂಚೋಳಿ ಬಸ್ ನಿಲ್ದಾಣದಲ್ಲಿ ನಿಲ್ಲಿಸಿದ್ದ ಬಸ್​ ಅನ್ನು ಕಳ್ಳನೊಬ್ಬ ಕದ್ದೊಯ್ದಿದ್ದ. ಬೈಕ್​ ಕಾರು ಕಳ್ಳತನ ಸಾಮಾನ್ಯ ಸಂಗತಿ. ಆದರೆ, ಸರ್ಕಾರಿ ಬಸ್​ ಅನ್ನೇ ಕದ್ದೊಯ್ದಿದ್ದು ರಾಜ್ಯದ ಜನರ ಅಚ್ಚರಿಗೆ ಕಾರಣವಾಗಿತ್ತು.

ನಿನ್ನೆ ಬೀದರ್​ನಿಂದ ಚಿಂಚೋಳಿಗೆ ಆಗಮಿಸಿದ್ದ ಸಾರಿಗೆ ಬಸ್​​​​ ಅನ್ನು ರಾತ್ರಿ 9:15 ಕ್ಕೆ ಇಲ್ಲಿನ ನಿಲ್ದಾಣದಲ್ಲಿ ಚಾಲಕ ನಿಲ್ಲಿಸಿದ್ದ. ಬೆಳಗಿನ ಜಾವ ಆಗಮಿಸಿದ್ದ ಕಳ್ಳ ಬಸ್​ನೊಂದಿಗೆ​ ಪರಾರಿಯಾಗಿದ್ದ. ಬೆಳಗ್ಗೆ ಬಸ್​ ಚಾಲಕ ಸ್ಥಳಕ್ಕೆ ಬಂದು ನೋಡಿದಾಗ ಬಸ್​ ಕಳ್ಳತನ ಆಗಿರುವುದು ಗಮನಕ್ಕೆ ಬಂದಿದೆ. ಈ ಕಳವಾದ ಬಸ್​​ ಮಿರಿಯಾನ ಮಾರ್ಗವಾಗಿ ತಾಂಡೂರ್​ ಮೂಲಕ ತೆಲಂಗಾಣದ ಕಡೆಗೆ ಸಾಗಿರುವುದು ಸಿಸಿಟಿವಿ ದೃಶ್ಯಾವಳಿಯಲ್ಲಿ ಸೆರೆಯಾಗಿತ್ತು. ಬಸ್ ಕಳವಾದ ಬಗ್ಗೆ ಸಾರಿಗೆ ಅಧಿಕಾರಿಗಳು ಪೊಲೀಸರಿಗೆ ದೂರು ನೀಡಿದ್ದು, ಬಸ್ ಪತ್ತೆಗಾಗಿ ಎರಡು ವಿಶೇಷ ತಂಡಗಳನ್ನು ರಚಿಸಿ ಹುಡುಕಾಟ ನಡೆಸಲಾಗಿತ್ತು. ಇನ್ನೊಂದೆಡೆ ಕೆಕೆಆರ್​ಟಿಸಿ ಅಧಿಕಾರಿಗಳು ಕೂಡ ಬೀದರ್​ನ ಎರಡು ತಂಡ ಮತ್ತು ಕಲಬುರಗಿಯ ಎರಡು ತಂಡಗಳನ್ನು ರಚಿಸಿಕೊಂಡು ಚಿಂಚೋಳಿ, ತಾಂಡೂರ್ ಮತ್ತು ತೆಲಂಗಾಣ ಭಾಗದಲ್ಲಿ ಬಸ್ ಪತ್ತೆ ಕಾರ್ಯದಲ್ಲಿ ತೊಡಗಿದ್ದರು.

ಕೆಕೆಆರ್‌ಟಿಸಿ ಎಂಡಿ ರಾಚಪ್ಪ ಹೇಳಿದ್ದೇನು?:ಈ ಬಗ್ಗೆ ಪ್ರತಿಕ್ರಿಯಿಸಿದ್ದ ಕೆಕೆಆರ್‌ಟಿಸಿ ಎಂಡಿ ರಾಚಪ್ಪ, ಮುಂಜಾನೆ 3:30ರ ಹೊತ್ತಿಗೆ ಬಸ್​ ಕಳ್ಳತನ ಆಗಿರುವುದು ಬೆಳಕಿಗೆ ಬಂದಿದೆ. ಈ ಬಗ್ಗೆ ಚಿಂಚೋಳಿ ಪೊಲೀಸರಿಗೆ ದೂರು ನೀಡಿದ್ದು, ಜಿಲ್ಲಾ ವರಿಷ್ಠಾಧಿಕಾರಿಗಳಿಗೂ ಮಾಹಿತಿ ನೀಡಲಾಗಿದೆ. ಬೀದರ್​ ಮತ್ತು ಕಲಬುರಗಿಯಿಂದ ನಾಲ್ಕು ತಂಡ ರಚಿಸಿ ಬಸ್​ ಹುಡುಕಾಟ ಆರಂಭಿಸಿದ್ದೆವು. ಸದ್ಯದ ತೆಲಂಗಾಣ ರಾಜ್ಯದಲ್ಲಿಯೇ ಬಸ್ ಇರುವುದು ಬಹುತೇಕ ಖಚಿತಗೊಂಡಿದೆ. ಶೀಘ್ರವೇ ಬಸ್ ಸಿಗಲಿದೆ ಎಂದು ತಿಳಿಸಿದ್ದರು.

ತೆಲಂಗಾಣದಲ್ಲಿ ಬಸ್​ ಪತ್ತೆ:ಬೀದರ್ ಡಿಪೋ ನಂಬರ್- 2ಕ್ಕೆ ಸೇರಿದ KA-38 F-971 ನೋಂದಣಿಯ ಬಸ್ ಕಳ್ಳತನವಾಗಿತ್ತು. ಬಸ್ ಕದ್ದೊಯ್ದ ದೃಶ್ಯ ಇಲ್ಲಿನ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿತ್ತು. ಟೋಲ್ ನಾಕಾ ಹಾಗೂ ರಸ್ತೆ ಬದಿಯ ಅಂಗಡಿಗಳಲ್ಲಿನ ಸಿಸಿಟಿವಿ ದೃಶ್ಯಗಳನ್ನು ಆಧರಿಸಿ ಪೊಲೀಸರು ಕೊನೆಗೂ ತೆಲಂಗಾಣ ರಾಜ್ಯದಲ್ಲಿ ಬಸ್​ ಪತ್ತೆ ಹಚ್ಚಿದ್ದಾರೆ. ಸದ್ಯ ಬಸ್ ಪತ್ತೆಯಾದರೂ ಕಳ್ಳ ಮಾತ್ರ ಪತ್ತೆ ಆಗಿಲ್ಲ. ಕಳ್ಳನ ಪತ್ತೆಗೆ ಪೊಲೀಸರು ಕಾರ್ಯಾಚರಣೆ ಮುಂದುವರೆಸಿದ್ದಾರೆ‌. ಕಳ್ಳ ಸಿಕ್ಕ ಮೇಲಷ್ಟೇ ಬಸ್ ಕದ್ದ ಕಾರಣ ತಿಳಿದುಬರಲಿದೆ.‌ ಈ ಕುರಿತು ಚಿಂಚೋಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಇದನ್ನೂ ಓದಿ :ಕೆಕೆಆರ್​ಟಿಸಿ ಡಿಪೋ ಬಸ್​ ಕಳ್ಳತನ: ಸಿಸಿಟಿವಿಯಲ್ಲಿ ದೃಶ್ಯ ಸೆರೆ.. ಬಸ್​​​ಗಾಗಿ ತೀವ್ರ ಶೋಧ!

Last Updated : Feb 21, 2023, 7:57 PM IST

ABOUT THE AUTHOR

...view details