ಸೇಡಂ(ಕಲಬುರಗಿ) :ಎರಡು ಬಾರಿ ಸೇಡಂ ವಿಧಾನಸಭಾ ಕ್ಷೇತ್ರವನ್ನು ಪ್ರತಿನಿಧಿಸುವ ಮೂಲಕ ಜನನಾಯಕರಾಗಿದ್ದ ಮಾಜಿ ಶಾಸಕ ಹಾಗೂ ಹಿರಿಯ ರಾಜಕೀಯ ಜೀವ ಬಸವಂತರೆಡ್ಡಿ ಮೋತಕಪಲ್ಲಿ (88) ಅಸ್ತಂಗತರಾಗಿದ್ದಾರೆ.
ತಾಲೂಕಿನ ಮೋತಕಪಲ್ಲಿ ಗ್ರಾಮದವರಾದ ಬಸವಂತರೆಡ್ಡಿ ಅವರು ಕಳೆದ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ನಿನ್ನೆ ತಡರಾತ್ರಿ ಇಹಲೋಕ ತ್ಯಜಿಸಿದ್ದಾರೆ. ಮಾಜಿ ಶಾಸಕ ಬಸವಂತರೆಡ್ಡಿ ಪಾಟೀಲ ಮೋತಕಪಲ್ಲಿ ಅವರು ಒಬ್ಬ ಪುತ್ರ ಮತ್ತು ಒಬ್ಬ ಪುತ್ರಿಯನ್ನು ಅಗಲಿದ್ದಾರೆ.
ಸೇಡಂ ವಿಧಾನಸಭಾ ಕ್ಷೇತ್ರದಿಂದ ಎರಡು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದ ಅವರು, 1978ರಲ್ಲಿ ರಾಜಕೀಯ ಪ್ರವೇಶ ಮಾಡಿದ್ದರು. ಜನತಾ ಪಕ್ಷದಿಂದ ಸ್ಪರ್ಧಿಸಿ1988ರಲ್ಲಿ ಮುಧೋಳ ಜಿಲ್ಲಾ ಪಂಚಾಯತ್ ಸದಸ್ಯರಾಗಿದ್ದರು. ನಂತರ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿ 1989ರಲ್ಲಿ ಸೇಡಂನ ಶಾಸಕರಾಗಿ ಆಯ್ಕೆಯಾಗಿ, ಬಳಿಕ 1994ರಲ್ಲಿ ಸೋಲು ಕಂಡಿದ್ದರು.
ಮತ್ತೆ ಕಾಂಗ್ರೆಸ್ ಪಕ್ಷದಿಂದ 1999ರಲ್ಲಿ ಶಾಸಕರಾಗಿ ಪುನರಾಯ್ಕೆಯಾಗಿದ್ದರು. ಮಾಜಿ ಮುಖ್ಯಮಂತ್ರಿ ಎಸ್ ಎಂ ಕೃಷ್ಣ ಅವರ ಆಪ್ತ ಬಳಗದಲ್ಲಿ ಗುರುತಿಸಿಕೊಂಡಿದ್ದ ಮೋತಕಪಲ್ಲಿ ಕಳೆದ ಹತ್ತು ವರ್ಷಗಳಿಂದ ಬಿಜೆಪಿ ಪಕ್ಷದಲ್ಲಿದ್ದರು. ಮೃತರ ಅಂತ್ಯಕ್ರಿಯೆ ಅವರ ಗ್ರಾಮದ ಸ್ವಂತ ಜಮೀನಿನಲ್ಲಿ ಇಂದು ಮಧ್ಯಾಹ್ನ 3 ಗಂಟೆಗೆ ಜರುಗಲಿದೆ.