ಘಟನೆ ಬಗ್ಗೆ ಮಾಹಿತಿ ನೀಡಿದ ಪೊಲೀಸ್ ಕಮಿಷನರ್ ಚೇತನ್ ಆರ್ ಕಲಬುರಗಿ : ಬಿಸಿಲೂರು ಕಲಬುರಗಿಯಲ್ಲಿ ಮತ್ತೆ ನೆತ್ತರು ಹರಿದಿದೆ. ಖ್ಯಾತ ಟೈಲರ್ ಉದ್ಯಮಿಯ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಬರ್ಬರವಾಗಿ ಹತ್ಯೆ ಮಾಡಿದ ಘಟನೆ ನಗರದ ಮಕ್ತಂಪುರ ಬಡಾವಣೆಯಲ್ಲಿ ನಡೆದಿದೆ. ಘಟನೆ ನಡೆದ ಕೆಲವೇ ಗಂಟೆಗಳಲ್ಲಿ ಆರೋಪಿಯನ್ನು ಪತ್ತೆ ಹಚ್ಚುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಸುರೇಶ್ ಹಂಚಿ (44) ಮೃತ ವ್ಯಕ್ತಿ. ಸೂಪರ್ ಮಾರ್ಕೆಟ್ ಪ್ರದೇಶದ ಪುಠಾಣಿ ಗಲ್ಲಿಯಲ್ಲಿ ಬಿಎಸ್ ಟೈಲರ್ ಹೆಸರಿನ ಅಂಗಡಿ ಹೊಂದಿದ್ದಾರೆ. ಟೈಲರಿಂಗ್ ವೃತ್ತಿಯಲ್ಲಿ ಹೆಸರು ಮಾಡಿದ್ದ ಸುರೇಶ್, ಹತ್ತಾರು ಜನರಿಗೆ ಕೆಲಸ ಕೊಟ್ಟು ಖ್ಯಾತ ಟೈಲರ್ ಅಂತಲೇ ಫೇಮಸ್ ಆಗಿದ್ರು. ನಗರದ ಮಕ್ತಾಂಪುರ ಬಡಾವಣೆಯಲ್ಲಿ ವಾಸವಿದ್ದ ಸುರೇಶ್, ಅದೇ ಬಡಾವಣೆಯ ಭವಾನಿ ಗುಡಿಯ ಹತ್ತಿರ ಬರ್ಬರವಾಗಿ ಕೊಲೆ ಆಗಿದ್ದಾರೆ. ಮಾಜಿ ಕೆಲಸಗಾರನಿಂದಲೇ ಸುರೇಶ್ ಹತ್ಯೆಗೊಳಗಾಗಿದ್ದಾರೆ.
ಹೌದು, ಸುರೇಶ್ ಅವರ ಟೈಲರ್ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಅವಿನಾಶ ಹಿರೇಮಠ (20) ಎಂಬಾತ ಕೊಲೆ ಮಾಡಿರುವ ಆರೋಪಿ. ಮಗನ ಕಾಲೇಜ್ ಅಡ್ಮಿಷನ್ ಮಾಡಲು ಬೆಂಗಳೂರಿಗೆ ಹೋಗಿ ಬೆಳಗ್ಗೆಯಷ್ಟೇ ವಾಪಸ್ ಆಗಿದ್ದ ಸುರೇಶ್ ಎಂದಿನಂತೆ ಅಂಗಡಿಗೆ ಹೋಗಿ ಸಾಯಂಕಾಲ 6 ಗಂಟೆ ಸುಮಾರಿಗೆ ವಾಪಸ್ ಬಂದಿದ್ದಾರೆ. ಈ ವೇಳೆ ಅಡ್ಡಗಟ್ಟಿದ ದುಷ್ಕರ್ಮಿ, ಮೊದಲು ರಾಡ್ನಿಂದ ಟೈಲರ್ ತಲೆಗೆ ಬಲವಾಗಿ ಹೊಡೆದಿದ್ದು, ನೆಲಕ್ಕೆ ಬಿದ್ದ ಬಳಿಕ ಕಲ್ಲು ಎತ್ತಿ ಹಾಕಿ ಬರ್ಬರವಾಗಿ ಹತ್ಯೆ ಮಾಡಿದ್ದಾನೆ. ಬಳಿಕ, ಮೃತರ ಬೈಕ್ ತೆಗೆದುಕೊಂಡು ಪರಾರಿಯಾಗಿದ್ದ. ಇತ್ತ ರಕ್ತದ ಮಡುವಿನಲ್ಲಿ ಬಿದ್ದು ನರಳಾಡಿದ ಸುರೇಶ್ ಕೊನೆಯುಸಿರೆಳೆದಿದ್ದರು. ದುಷ್ಕರ್ಮಿಯ ಅಟ್ಟಹಾಸಕ್ಕೆ ಬಡಾವಣೆಯ ಜನರು ಬೆಚ್ಚಿಬಿದ್ದಿದ್ದಾರೆ.
ಇನ್ನು ಘಟನೆ ಕುರಿತು ಮಾಹಿತಿ ತಿಳಿಯುತ್ತಿದ್ದಂತೆ ವಿಶೇಷ ತಂಡ ರಚನೆ ಮಾಡಿದ ಪೊಲೀಸರು ಆರೋಪಿಯನ್ನು ನಗರದ ಹುಮನಾಬಾದ್ ರಿಂಗ್ ರಸ್ತೆ ಬಳಿ ಸೆರೆ ಹಿಡಿದಿದ್ದಾರೆ. ವಿಚಾರಣೆ ಬಳಿಕ ಕ್ಷುಲ್ಲಕ ಕಾಣರಕ್ಕೆ ಕೊಲೆ ನಡೆದಿದೆ ಅನ್ನೋದು ಬೆಳಕಿಗೆ ಬಂದಿದೆ.
ಕೊಲೆಯಾದ ಸುರೇಶ್ ಅವರ ಬಿಎಸ್ ಟೈಲರ್ ಅಂಗಡಿಯಲ್ಲಿ ಆರೋಪಿ ಅವಿನಾಶ ಸುಮಾರು 12 ವರ್ಷಗಳಿಂದ ಕೆಲಸ ಮಾಡುತ್ತಿದ್ದನಂತೆ. ಆದ್ರೆ, ಕಳೆದ ವರ್ಷ ಸಂಬಳ ಹೆಚ್ಚು ಮಾಡುವಂತೆ ಕೇಳಿದ್ದಕ್ಕೆ ಅವಿನಾಶ್ನನ್ನು ಸುರೇಶ್ ಕೆಲಸದಿಂದ ತೆಗೆದುಹಾಕಿದ್ದ. ಅಲ್ಲದೇ, ಸುರೇಶ್ ವಾಸವಿದ್ದ ಮಕ್ತಾಂಪುರ ಮನೆಯಲ್ಲಿಯೇ ಅವಿನಾಶ ಕೂಡ ಬಾಡಿಗೆಗೆ ಇದ್ದ. ಅಂಗಡಿಯಲ್ಲಿ ಕೆಲಸ ಬಿಟ್ಟ ಮೇಲೆ ಮನೆ ಕೂಡ ಬಿಟ್ಟು ಎದುರು ಮನೆಗೆ ಬಾಡಿಗೆಗೆ ಹೋಗಿದ್ದ. ಆಗಿನಿಂದ ಸುರೇಶ್ ಮೇಲೆ ಹಲ್ಲು ಮಸಿಯುತ್ತಿದ್ದ ಅವಿನಾಶ್ ಸಮಯ ಸಿಕ್ಕಾಗಲೆಲ್ಲಾ ಮಾಜಿ ಮಾಲೀಕನನ್ನು ಗುರಾಯಿಸುವುದು, ಜಗಳ ಮಾಡುವುದು ಮಾಡ್ತಿದ್ದನಂತೆ.
ನಾಲ್ಕು ದಿನದ ಹಿಂದೆ ಮಗನ ಕಾಲೇಜು ಅಡ್ಮಿಷನ್ ಹಿನ್ನೆಲೆ ಬೆಂಗಳೂರಿಗೆ ತೆರಳಿದ್ದ ಸುರೇಶ್ ನಿನ್ನೆ ಬೆಳಗ್ಗೆಯಷ್ಟೇ ವಾಸಪ್ ಆಗಿದ್ದರು. ಬೆಳಗ್ಗೆ ಕೂಡ ಮಾಜಿ ಮಾಲೀಕನೊಂದಿಗೆ ಆರೋಪಿ ಗಲಾಟೆ ಮಾಡಿಕೊಂಡಿದ್ದನಂತೆ. ಬಳಿಕ, ನಿನ್ನನ್ನು ಸುಮ್ಮನೆ ಬಿಡುವುದಿಲ್ಲ ಎಂದು ಬೆದರಿಕೆ ಹಾಕಿ ತೆರಳಿದ್ದನಂತೆ. ಆದ್ರೆ, ಇದೇನು ಹೊಸದಲ್ಲ ಬಿಡು ಅಂತ ಸುರೇಶ್ ಎಂದಿನಂತೆ ಅಂಗಡಿಗೆ ಹೋಗಿದ್ದಾರೆ. ಮರಳಿ ಸಾಯಂಕಾಲ ಬೈಕ್ನಲ್ಲಿ ಮನೆಗೆ ಬರುವಾಗ ಆರೋಪಿ ದುಷ್ಕತ್ಯ ಎಸಗಿದ್ದಾನೆ. ಸುರೇಶನ ಕುಟುಂಬಸ್ಥರು ನೀಡಿದ ದೂರಿನನ್ವಯ ಬ್ರಹ್ಮಪುರ ಠಾಣೆಯಲ್ಲಿ ಐಪಿಸಿ ಸೆಕ್ಷನ್ 302 ರ ಅಡಿ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಜರುಗಿಸಲಾಗಿದೆ ಎಂದು ಪೊಲೀಸ್ ಕಮಿಷನರ್ ಚೇತನ್ ಆರ್ ತಿಳಿಸಿದ್ದಾರೆ.
ಇದನ್ನೂ ಓದಿ :ಪ್ರಿಯಕರನೊಂದಿಗೆ ಸಲುಗೆ, ಗಂಡನ ಕೊಲೆಗೆ ಸುಪಾರಿ ಕೊಟ್ಟ ಸುಂದರಿ.. ಬಸ್ ಟಿಕೆಟ್ ನೀಡಿತ್ತು ಹತ್ಯೆ ಹಿಂದಿನ ಸುಳಿವು