ಕಲಬುರಗಿ: ಬೆಂಗಳೂರಿನಲ್ಲಿ ವಾಸವಿದ್ದ ಕಲಬುರಗಿ ಮೂಲದ ವಲಸೆ ಕಾರ್ಮಿಕರು, ವಿದ್ಯಾರ್ಥಿಗಳನ್ನು ಕೆಎಸ್ಆರ್‌ಟಿಸಿ ಬಸ್ ಗಳ ಮುಖಾಂತರ ಕರೆತರಲಾಗುತ್ತಿದೆ.
ಬೆಂಗಳೂರಿನಿಂದ ವಲಸೆ ಕಾರ್ಮಿಕರನ್ನು, ವಿದ್ಯಾರ್ಥಿಗಳನ್ನು ಹೊತ್ತು ಹೊರಟ 64 ಬಸ್ಸುಗಳು ಬೆಂಗಳೂರಿನಿಂದ ಒಟ್ಟು 64 ಬಸ್ಸುಗಳನ್ನು ಕಲಬುರಗಿ ಕಾರ್ಮಿಕರನ್ನು ಮರಳಿ ಜಿಲ್ಲೆಗೆ ತಲುಪಿಸುವ ಸಲುವಾಗಿ ನಿಯೋಜಿಸಿದ್ದು, ತಲಾ ಒಂದರಲ್ಲಿ 30 ಜನ ಪ್ರಯಾಣಿಕರಂತೆ ಕಾರ್ಮಿಕರನ್ನು ಕರೆದೊಯ್ಯಲಾಗುತ್ತಿದೆ. ಈಗಾಗಲೇ ಕಲಬುರಗಿ ಕೇಂದ್ರ ಬಸ್ ನಿಲ್ದಾಣಕ್ಕೆ 30ಕ್ಕೂ ಅಧಿಕ ಬಸ್ಸುಗಳು ತಲುಪಿವೆ. ಇನ್ನುಳಿದ ಬಸ್ಸುಗಳು ಆಗಮಿಸುತ್ತಿವೆ.
ಇನ್ನೂ ಬಸ್ ನಲ್ಲಿ ಆಗಮಿಸಿದ ಪ್ರಯಾಣಿಕರಿಗೆ ಕಡ್ಡಾಯವಾಗಿ ಸ್ಕ್ರೀನಿಂಗ್ ಹಾಗೂ ರೋಗ ನಿರೋಧಕ ರಾಸಾಯನಿಕ ಸಿಂಪಡಣೆ ಮಾಡಲಾಗುತ್ತಿದೆ. ಕೈಮೇಲೆ ಸೀಲು ಹೊಡೆಯುವ ಮೂಲಕ 14 ದಿನಗಳ ಕಾಲ ಹೋಂ ಕ್ವಾರಂಟೈನ್ ನಲ್ಲಿ ಇರುವಂತೆ ಸೂಚಿಸಲಾಗುತ್ತಿದೆ. ನಂತರ ಪ್ರಯಾಣಿಕರು ತಮ್ಮ ಗ್ರಾಮಗಳಿಗೆ ತೆರಳಲು ಈಶಾನ್ಯ ಸಾರಿಗೆ ಸಂಸ್ಥೆಯ ಕಲಬುರಗಿ ಘಟಕದ ಬಸ್ಸುಗಳನ್ನು ವ್ಯವಸ್ಥೆ ಮಾಡಲಾಗಿದೆ.
ಇತ್ತ ಈಗಾಗಲೇ ಕಲಬುರಗಿ ಕೇಂದ್ರ ಬಸ್ ನಿಲ್ದಾಣಕ್ಕೆ ಆಗಮಿಸಿದ ಕಾರ್ಮಿಕರು, ವಿದ್ಯಾರ್ಥಿಗಳು ತಮ್ಮೂರಿಗೆ ಬಂದು ಸೇರಿದ ಖುಷಿಯಲ್ಲಿ ನಿಟ್ಟುಸಿರು ಬಿಡುತ್ತಿದ್ದಾರೆ.