ಕಲಬುರಗಿ:ಇತ್ತೀಚಿಗೆ ಮಕ್ಕಳಲ್ಲಿ ಮೊಬೈಲ್ ಬಳಕೆ ಹೆಚ್ಚಾಗಿದ್ದು, ಇದರಿಂದ ಮಾನಸಿಕ ಸ್ಥಿರತೆ ಕಳೆದುಕೊಂಡಿದ್ದಾರೆ. ಮೊಬೈಲ್ ಕೊರೊನಾಗಿಂತ ಅಪಾಯಕಾರಿ ಆಗಿ ಮಾರ್ಪಟ್ಟಿದೆ. ಮಕ್ಕಳಲ್ಲಿ ನೆನಪಿನ ಶಕ್ತಿ ಕಡಿಮೆಯಾಗಿದೆ. ಮಕ್ಕಳು ಮೊಬೈಲ್ ಬಳಕೆ ಮಿತವಾಗಿ ಬಳಸುವ ನಿಟ್ಟಿನಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಅಧ್ಯಯನ ನಡೆಸಲು ಆಯೋಗವು 10 ತಂಡಗಳನ್ನು ರಚಿಸಿದೆ ಎಂದು ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷ ಕೆ. ನಾಗಣ್ಣಗೌಡ ಹೇಳಿದರು.
ಕಲಬುರಗಿ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಆರ್.ಟಿ.ಇ, ಪೋಕ್ಸೋ, ಬಾಲ ನ್ಯಾಯ ಕಾಯ್ದೆ ಅನುಷ್ಠಾನ ಕುರಿತು ಜಿಲ್ಲಾ ಮಟ್ಟದ ಪ್ರಗತಿ ಪರಿಶೀಲನೆ ಸಭೆ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಈ ತಂಡದಲ್ಲಿ ವೈದ್ಯರು, ಮಕ್ಕಳ, ಪಾಲಕರು, ಸೈಕ್ಯಾಟ್ರಿಸ್ಟ್ ಇರಲಿದ್ದು, ಮೂರು ತಿಂಗಳ ಕಾಲ ರಾಜ್ಯಾದ್ಯಂತ ಅಧ್ಯಯನ ಮಾಡಿ ವರದಿ ಸಲ್ಲಿಸಲಿದ್ದಾರೆ. ವರದಿ ಆಧರಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಇತ್ತೀಚೆಗೆ ಬಾಲ್ಯ ವಿವಾಹ ಪ್ರಕರಣಗಳು ಹೆಚ್ಚುತ್ತಿವೆ. ಮಕ್ಕಳ ಸರ್ವಾಂಗೀಣ ಅಭಿವೃದ್ಧಿಗೆ ಪಾಠದ ಜೊತೆಗೆ ಆಟ, ಸಂಸ್ಕೃತಿಕ ಕಾರ್ಯಕ್ರಮದಲ್ಲಿ ಭಾಗವಹಿಸುವಿಕೆ ಬಹುಮುಖ್ಯವಾಗಿದೆ. ಈ ನಿಟ್ಟಿನಲ್ಲಿ ಕಾರ್ಯಕ್ರಮ ರೂಪಿಸುವಂತೆ ಇಂದು ನಡೆದ ಅಧಿಕಾರಿಗಳ ಸಭೆಯಲ್ಲಿ ನಿರ್ದೇಶನ ನೀಡಲಾಗಿದೆ. ಆಟೋ ಶಾಲಾ ಬಸ್ಗಳಲ್ಲಿ ಮಿತಿಗಿಂತ ಹೆಚ್ಚಿನ ಮಕ್ಕಳನ್ನು ಕರೆದೊಯ್ಯದಂತೆ ಆರ್.ಟಿ.ಒ ಮತ್ತು ಸಂಚಾರಿ ಪೊಲೀಸರು ನಿಯಂತ್ರಣ ಹಾಕಬೇಕು. ಇನ್ನು 18 ವರ್ಷದೊಳಗಿನ ಮಕ್ಕಳು ಬೈಕ್ ಚಲಾಯಿಸದಂತೆ ಕ್ರಮ ವಹಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದರು.
ಮಕ್ಕಳಿಗೆ ಪ್ರತ್ಯೇಕ ಬಸ್, ಶಿಕ್ಷಣ ಸಚಿವರೊಂದಿಗೆ ಚರ್ಚೆ: ಶಕ್ತಿ ಯೋಜನೆಯಿಂದ ಬಸ್ಗಳಲ್ಲಿ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿದ್ದು, ಮಕ್ಕಳ ಪ್ರಯಾಣ ಕಷ್ಟವಾಗಿದೆ. ಈ ನಿಟ್ಟಿನಲ್ಲಿ ಸರ್ಕಾರ ಶಾಲಾ ಮಕ್ಕಳಿಗೆ ಪ್ರತ್ಯೇಕ ಸಾರಿಗೆ ವ್ಯವಸ್ಥೆ ಕಲ್ಪಿಸಬಹುದೇ ಎಂದು ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಆಯೋಗದ ಅಧ್ಯಕ್ಷ ಕೆ. ನಾಗಣ್ಣಗೌಡ ಅವರು, ಈ ಕುರಿತು ಶಿಕ್ಷಣ ಸಚಿವರು ಮತ್ತು ಮುಖ್ಯ ಕಾರ್ಯದರ್ಶಿಯೊಂದಿಗೆ ಚರ್ಚಿಸುವೆ ಎಂದು ತಿಳಿಸಿದ್ದಾರೆ.