ಹಾವೇರಿ: ಕೈಗಾರಿಕಾ ಕಾರಿಡಾರ್‌ಗೆ ರೈತರ ಜಮೀನು ಸ್ವಾಧೀನಪಡಿಸಿಕೊಳ್ಳಲಾಗುತ್ತಿದೆ ಎಂದು ಆರೋಪಿಸಿ ಹಾವೇರಿ ಜಿಲ್ಲೆ ಬ್ಯಾಡಗಿ ತಾಲೂಕಿನ ಮೋಟೆಬೆನ್ನೂರು, ಅಳಲಗೇರಿ ಮತ್ತು ಅರಬಗೊಂಡ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು. ಪ್ರತಿಭಟನೆ ನಿಮಿತ್ತ ಮೋಟೆಬೆನ್ನೂರು ಗ್ರಾಮದಿಂದ ಬ್ಯಾಡಗಿ ತಹಶೀಲ್ದಾರ್ ಕಚೇರಿವರೆಗೆ ಪಾದಯಾತ್ರೆ ನಡೆಸಿದರು. ಸುಮಾರು 50 ಕ್ಕೂ ಅಧಿಕ ಎತ್ತಿನಗಾಡಿಗಳ ಮೂಲಕ ತಹಶೀಲ್ದಾರ್ ಕಚೇರಿಗೆ ಆಗಮಿಸಿದ ರೈತರು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಬ್ಯಾಡಗಿ ತಾಲೂಕಿನ ಅಳಲಗೇರಿ, ಅರಬಗೊಂಡ ಮತ್ತು ಮೋಟೆಬೆನ್ನೂರು ಗ್ರಾಮದ ಸುಮಾರು 360 ರೈತರಿಗೆ ಸೇರಿದ ಜಮೀನು ವಶಪಡಿಸಿಕೊಳ್ಳಲು ಈಗಾಗಲೇ ನೊಟೀಸ್ ನೀಡಲಾಗಿದೆ. ರೈತರು ಪ್ರಾಣವನ್ನಾದರೂ ನೀಡುತ್ತೇವೆ ಒಂದಿಂಚೂ ಭೂಮಿ ನೀಡುವುದಿಲ್ಲ ಎಂದು ಪಟ್ಟು ಹಿಡಿದರು. ಸರ್ಕಾರದ ರೈತವಿರೋಧಿ ನೀತಿಗೆ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ನಮ್ಮ ಜಮೀನಿನಲ್ಲಿ ತೋಟಗಾರಿಕಾ ಬೆಳೆಗಳು ಸೇರಿದಂತೆ ವಿವಿಧ ಬೆಳೆಗಳನ್ನ ಬೆಳೆಯುತ್ತಿದ್ದೇವೆ. ಅಡಕೆ, ತೆಂಗು, ಗಂಧ, ಮೆಕ್ಕೆಜೋಳ ಶೇಂಗಾ ಸೋಯಾಬಿನ್ ಸೇರಿದಂತೆ ವಿವಿಧ ಬೆಳೆಗಳನ್ನು ಬೆಳೆದು ಜೀವನ ಸಾಗಿಸುತ್ತಿದ್ದೇವೆ ಎಂದು ರೈತರು ತಿಳಿಸಿದರು.
ಭೂಮಿ ವಿಚಾರಕ್ಕೆ ಬಂದರೆ ನಾವು ಸುಮ್ಮನಿರುವುದಿಲ್ಲ: ತಮ್ಮ ಪೂರ್ವಜರಿಂದ ಭೂಮಿ ನಮಗೆ ಬಂದಿದ್ದು ಜಮೀನು ಫಲವತ್ತಾಗಿದೆ. ಈ ಭೂಮಿಯನ್ನು ಕೊಟ್ಟು ನಾವು ಎಲ್ಲಿಗೆ ಹೋಗಬೇಕು ಎಂದು ರೈತರು ಪ್ರಶ್ನಿಸಿದರು. ನಮ್ಮ ಪೂರ್ವಜರ ಅಂತ್ಯಕ್ರಿಯೆ ಸಹ ಇದೇ ಜಮೀನಿನಲ್ಲಿ ಮಾಡಿದ್ದೇವೆ. ಸರ್ಕಾರಕ್ಕೆ ಬೇಕಾದರೆ ಪಕ್ಕದಲ್ಲಿ ಜಾಲಿ ಗಿಡಗಳು ಬೆಳೆದಿರುವ 640 ಎಕರೆ ಕಾಡುಭೂಮಿಯನ್ನ ತಗೆದುಕೊಳ್ಳಲಿ. ಆದರೆ, ನಮ್ಮ ಭೂಮಿ ವಿಚಾರಕ್ಕೆ ಬಂದರೆ ನಾವು ಸುಮ್ಮನಿರುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸರ್ಕಾರ ರಾಷ್ಟ್ರೀಯ ಹೆದ್ದಾರಿ 48 ರ ಅಕ್ಕಪಕ್ಕದಲ್ಲಿರುವ ಫಲವತ್ತಾದ ಜಮೀನುಗಳ ಮೇಲೆ ಸರ್ಕಾರ ಕಣ್ಣು ಹಾಕಿದೆ. ಕೈಗಾರಿಕೋದ್ಯಮಿಗಳ ಆಮೀಷಕ್ಕೆ ಬಲಿಯಾಗದೇ ರೈತರ ಜಮೀನು ರೈತರಿಗೆ ಬಿಡಬೇಕು ಎಂದು ರೈತರು ಒತ್ತಾಯಿಸಿದರು. ಸ್ಥಳಕ್ಕಾಗಮಿಸಿದ ಭೂಸ್ವಾಧಿನಾಧಿಕಾರಿ ಶೇಖರ್ ಜಿ.ಡಿ. ರೈತರ ಭೂಮಿ ಸ್ವಾಧೀನಪಡಿಸಿಕೊಂಡಾಗಿಲ್ಲ.
ಸ್ವಾಧೀನಪಡಿಸಿಕೊಳ್ಳಲು ನಿಮ್ಮ ಒಪ್ಪಿಗೆ ಇಲ್ಲದಿದ್ದರೆ ಯಾರಿಗೂ ಸಹ ಜಮೀನು ವಶಪಡಿಸಿಕೊಳ್ಳಲು ಸಾಧ್ಯವಿಲ್ಲ. ರೈತರ ಪ್ರತಿಭಟನೆ ಮತ್ತು ಭೂಮಿ ನೀಡುವುದಿಲ್ಲಾ ಎಂಬ ವಿಚಾರವನ್ನು ಸರ್ಕಾರಕ್ಕೆ ತಿಳಿಸುತ್ತೇನೆ. ಸರ್ಕಾರದ ನಿರ್ಣಯದ ಮೇಲೆ ಮುಂದಿನ ನಡೆ ಇಡುವಂತೆ ರೈತರಿಗೆ ಅವರು ತಿಳಿಸಿದರು.
ಇದನ್ನೂ ಓದಿ;ಬಿಬಿಎಂಪಿ ವ್ಯಾಪ್ತಿಯ ಮತದಾರರ ಪಟ್ಟಿಯಲ್ಲಿ ಕಾನೂನಿನ ಎಲ್ಲ ನಿಯಮಗಳ ಉಲ್ಲಂಘನೆ: ಎನ್ ಆರ್ ರಮೇಶ್