ಹಾವೇರಿ: ಎತ್ತುಗಳನ್ನು ಮೈತೊಳೆಯಲು ಹೋಗಿದ್ದ ಬಾಲಕರಿಬ್ಬರು ಕೆರೆಯಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ರಾಣೆಬೆನ್ನೂರು ತಾಲೂಕಿನ ಕಾಕೋಳ ಗ್ರಾಮದಲ್ಲಿ ನಡೆದಿದೆ.
ಎತ್ತುಗಳ ಮೈ ತೊಳೆಯಲು ಕೆರೆಗೆ ಹೋದ ಬಾಲಕರು ಸಾವು
ರಾಣೆಬೆನ್ನೂರು ತಾಲೂಕಿನ ಕಾಕೋಳ ಗ್ರಾಮದಲ್ಲಿ ಎತ್ತುಗಳ ಮೈ ತೊಳೆಯಲು ಕೆರೆಗೆ ಹೋಗಿದ್ದ ಬಾಲಕರಿಬ್ಬರು ಕಾಲು ಜಾರಿ ಬಿದ್ದು ಸಾವನ್ನಪ್ಪಿದ್ದಾರೆ.
ಬಾಲಕರು ಸಾವು
ಮಾಲತೇಶ ಹೊಟ್ಟಿನಿಂಗಣ್ಣನವರ(11) ಹಾಗೂ ಚಂದ್ರು ಹಡಗಲಿ(13) ಮೃತ ಬಾಲಕರು. ಶಾಲೆಗೆ ರಜೆ ಇರುವ ಕಾರಣ ಗ್ರಾಮದ ಕೆರೆಯಲ್ಲಿ ಎತ್ತುಗಳ ಮೈತೊಳೆಯಲು ಹೋಗಿದ್ದಾಗ ಕಾಲು ಜಾರಿ ಕೆರೆಗೆ ಬಿದ್ದು ಮೃತಪಟ್ಟಿದ್ದಾರೆ.
ತಕ್ಷಣ ಗ್ರಾಮಸ್ಥರು ಬಾಲಕರನ್ನು ಮೇಲೆತ್ತಿದರೂ ಕೂಡಾ ನೀರು ಕುಡಿದಿದ್ದ ಪರಿಣಾಮ ಮೃತಪಟ್ಟಿದ್ದಾರೆ. ಸ್ಥಳದಲ್ಲಿ ಕುಟುಂಬದ ಸದಸ್ಯರ ಆಕ್ರಂದನ ಮುಗಿಲು ಮುಟ್ಟಿತ್ತು. ರಾಣೆಬೆನ್ನೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.