ಹಾವೇರಿ: ಜಿಲ್ಲೆಯ ಹಾನಗಲ್ ಪಟ್ಟಣದಲ್ಲಿನ ದಯಾಶಂಕರ ಛತ್ರಾಲಯದ ವಾರ್ಡನ್ ಹಲ್ಲೆ ಮಾಡಿದ್ದರಿಂದ ಒಂಬತ್ತು ವರ್ಷದ ಮಗು ಮೃತಪಟ್ಟಿದೆ ಅನ್ನೋ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ.
ಕಳೆದ ನಾಲ್ಕು ತಿಂಗಳ ಹಿಂದೆ ವಸತಿ ನಿಲಯಕ್ಕೆ ಪ್ರವೇಶ ಪಡೆದಿದ್ದ ವಿಜಯಕುಮಾರ್ ಹಿರೇಮಠ ಅನ್ನೋ ಬಾಲಕನಿಗೆ ಸೆಪ್ಟೆಂಬರ್ 3,2019ರಂದು ಹಾಸ್ಟೆಲ್ ವಾರ್ಡನ್ ಶ್ರವಣಕುಮಾರ್ ಎಂಬಾತ ಥಳಿಸಿದ್ದಾನೆ ಎಂಬ ಆರೋಪ ಕೇಳಿ ಬಂದಿತ್ತು.
ವಾರ್ಡನ್ ಸಿಟ್ಟಿಗೆ ಹಾರಿಹೋಯ್ತು ಪುಟ್ಟ ಬಾಲಕನ ಪ್ರಾಣ..
ಸೆಪ್ಟೆಂಬರ್ 3,2019ರ ಘಟನೆ ನಡೆದಿತ್ತಾದರೂ ಒಂದು ತಿಂಗಳ ನಂತರ ಅಂದರೆ ಅಕ್ಟೋಬರ್ 3,2019ರಂದು ಹಾನಗಲ್ ಪೊಲೀಸ್ ಠಾಣೆಯಲ್ಲಿ ವಾರ್ಡನ್ ಶ್ರವಣಕುಮಾರ್ ವಿರುದ್ಧ ಐಪಿಸಿ 323 ಕಲಂನಡಿ ದೂರು ದಾಖಲಾಗಿದೆ. ವಾರ್ಡನ್ ಬಾಲಕನಿಗೆ ಹಲ್ಲೆ ಮಾಡಿದ ನಂತರ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ಆತನನ್ನು ದಾಖಲಿಸಿ, ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರಿನ ವಾಣಿ ವಿಲಾಸ್ ಅಸ್ಪತ್ರೆಗೆ ದಾಖಲಿಸಲಾಗಿತ್ತು. ಆದ್ರೆ ಬಾಲಕ ಇವತ್ತು ಚಿಕಿತ್ಸೆ ಫಲಿಸದೆ ಬೆಂಗಳೂರಲ್ಲಿ ಮೃತಪಟ್ಟಿದ್ದಾನೆ.
ವಾರ್ಡನ್ ಮಗುವಿಗೆ ಹೊಡೆದ ವೇಳೆ ಪ್ರಕರಣ ದಾಖಲಿಸೋ ಬದಲು ವಾರ್ಡನ್ನಿಂದ ಮೃತ ಮಗುವಿನ ಸಂಬಂಧಿಯೋರ್ವರು 45 ಸಾವಿರ ರೂ. ಡಿಮ್ಯಾಂಡ್ ಮಾಡಿದ್ದರು ಎಂಬ ಆಡಿಯೋ ಲಭ್ಯವಾಗಿದೆ. ಬಾಲಕನಿಗೆ ಚಿಕಿತ್ಸೆ ಕೊಡಿಸಲು ಇಪ್ಪತ್ತರಿಂದ ಮೂವತ್ತು ಸಾವಿರ ರುಪಾಯಿ ಹಣ ಖರ್ಚಾಗುತ್ತದೆ. ಹೀಗಾಗಿ 54 ಸಾವಿರ ಹಣ ಕೊಡಿ, ಇಲ್ಲದಿದ್ರೆ ಕೇಸ್ ಮಾಡುತ್ತೇವೆ ಅಂತಾ ವಾರ್ಡನ್ ಜೊತೆಗೆ ಈ ಆಡಿಯೋದಲ್ಲಿ ಮಾತನಾಡಲಾಗಿದೆ.
ಇನ್ನು ವಾರ್ಡನ್ ಕೂಡ ಈ ಆರೋಪವನ್ನು ತಳ್ಳಿಹಾಕಿದ್ದು, ಬಾಲಕ ಚೆನ್ನಾಗಿಯೇ ಇದ್ದ ಎಂದಿದ್ದಾರೆ. ಇದಕ್ಕೆ ಛತ್ರಾಲಯದ ಅಧ್ಯಕ್ಷರು ಸಹ ಪ್ರತಿಕ್ರಿಯೆ ನೀಡಿದ್ದು, ವಾರ್ಡನ್ ಅಂಥವರಲ್ಲ. ಮಗುವಿಗೆ ಆರೋಗ್ಯ ಸಮಸ್ಯೆ ಇತ್ತು. ವಾರ್ಡನ್ ಹೊಡೆದಿದ್ದಾರೆ ಅನ್ನೋದು ಸತ್ಯಕ್ಕೆ ದೂರವಾಗಿದೆ ಅಂತಿದ್ದಾರೆ.
ಒಟ್ಟಿನಲ್ಲಿ ಪ್ರಕರಣ ದಾಖಲಾದ ನಂತರ ಹಾಸ್ಟೆಲ್ ವಾರ್ಡನ್ ನಾಪತ್ತೆ ಆಗಿದ್ದಾನೆ.