ರಾಣೆಬೆನ್ನೂರ: ದಿನ ನಿತ್ಯ ವಾಣಿಜ್ಯ ವ್ಯವಹಾರಕ್ಕೆ ಗ್ರಾಮೀಣ ಹಾಗೂ ಹೊರ ಜಿಲ್ಲೆಯಿಂದ ಸಾವಿರಾರು ಜನರು ನಗರಕ್ಕೆ ಆಗಮಿಸುತ್ತಾರೆ. ಈ ನಡುವೆ ವಾಹನ ಸವಾರರ ಬಳಕೆಯೂ ಕೂಡ ಅಧಿಕವಾಗಿದ್ದು, ಸಂಚಾರ ದಟ್ಟಣೆಯೂ ದಿನದಿಂದ ದಿನಕ್ಕೂ ಹೆಚ್ಚಾಗಿದೆ. ಇಂತಹ ಜನಸಂದಣಿಯ ಪ್ರಮುಖ ವೃತ್ತಗಳಲ್ಲಿ ಸಂಚಾರಿ ದೀಪಗಳೇ ಇಲ್ಲವೆಂಬುದು ಶೋಚನೀಯ.
ಸಂಚಾರಿ ದೀಪವೆ ಇಲ್ಲ ಇನ್ನೂ ಸವಾರರು ನಿಯಮ ಪಾಲನೆ ಮಾಡುವುದು ಹೇಗೆ? - ಪೊಲೀಸ್ ಇಲಾಖೆ
ಏಷ್ಯಾದಲ್ಲಿ ಬೀಜೋತ್ಪಾದನೆ ಮೂಲಕ ಹೆಸರು ಮಾಡಿರುವ ರಾಣೇಬೆನ್ನೂರ ನಗರದಲ್ಲಿ ಸಂಚಾರಿ ದೀಪಗಳು ಸರಿಯಾಗಿ ಕೆಲಸ ಮಾಡುತ್ತಿಲ್ಲ. ಇನ್ನೂ ಸವಾರರು ರೂಲ್ಸ್ ಪಾಲನೆ ಮಾಡುವುದು ಹೇಗೆ ಎಂಬುದು ಸಾರ್ವಜನಿಕರ ಪ್ರಶ್ನೆಯಾಗಿದೆ.
ನಗರದಲ್ಲಿ ಪ್ರಮುಖವಾಗಿ ಅಂಚೆ ವೃತ್ತ, ಅಶೋಕ ವೃತ್ತ, ದುರ್ಗಾ ವೃತ್ತ, ಕೋರ್ಟ್ ಸೇರಿದಂತೆ ಪ್ರಮುಖ ಆರು ವೃತ್ತಗಳು ಅಧಿಕ ಸಂಚಾರ ದಟ್ಟಣೆ ಹೊಂದಿವೆ. ಇವುಗಳಲ್ಲಿ ಪೊಲೀಸ್ ಇಲಾಖೆಯೂ ಈವರೆಗೂ ಕೂಡ ಸಂಚಾರಿ ದೀಪಗಳನ್ನು ಅಳವಡಿಸಿಲ್ಲ. ನೆಪ ಮಾತ್ರಕ್ಕೆ ಬಸ್ ನಿಲ್ದಾಣ ಹತ್ತಿರ ಮಾತ್ರ ಒಂದು ಸಂಚಾರಿ ದೀಪ ಮಾತ್ರ ನಿಯಮ ಪಾಲಿಸುವಂತಾಗಿದೆ. ನಗರದ ಹಲಗೇರಿ ವೃತ್ತದ ಮಾರ್ಗದಲ್ಲಿ ಸಾವಿರಾರು ವಾಹನಗಳು ಓಡಾಡುತ್ತವೆ. ಆದರೆ, ಸಂಚಾರಿ ದೀಪಗಳು ಇದ್ದರೂ ಸಹ ಅವು ಸರಿಯಾಗಿ ಕಾರ್ಯ ನಿರ್ವಹಿಸುತ್ತಿಲ್ಲ. ವಾಹನ ಸವಾರರು ಅಡ್ಡಾದಿಡ್ಡಿ ಹೋಗುತ್ತಿದ್ದು, ಅಪಘಾತಕ್ಕೆ ಆಹ್ವಾನ ನೀಡಿದಂತಾಗಿದೆ.
ಕ್ಯಾರೆ ಎನ್ನದ ಪೊಲೀಸ್ ಇಲಾಖೆ:
ನಗರ ಸಂಚಾರ ಮುಕ್ತವಾಗಿ ಹಾಗೂ ಸರಿಯಾದ ಪಾಲನೆ ನೀಡಬೇಕಾದ ಇಲಾಖೆ ಸಂಚಾರಿ ದೀಪಗಳ ಬಗ್ಗೆ ಗಮನಹರಿಸುತ್ತಿಲ್ಲ. ಈ ನಡುವೆ ಇತ್ತೀಚೆಗೆ ಸರ್ಕಾರ ಹೊರಡಿಸಿರುವ ದುಬಾರಿ ದಂಡ ಶುಲ್ಕದ ಬಗ್ಗೆ ಪೊಲೀಸ್ ಇಲಾಖೆ ಸವಾರರಿಗೆ ಸಿಕ್ಕಾಪಟ್ಟೆ ದಂಡ ಹಾಕುತ್ತಿದೆ. ಆದರೆ, ಸಂಚಾರಿ ದೀಪದ ಬಗ್ಗೆ ಪೊಲೀಸರು ಯಾಕೆ ಯೋಚನೆ ಮಾಡುತ್ತಿಲ್ಲ ಎಂಬದು ಸಾರ್ವಜನಿಕರ ಪ್ರಶ್ನೆಯಾಗಿದೆ.