ಹಾವೇರಿ:ಅವರಿಬ್ಬರದು ನಲವತ್ತು ವರ್ಷಗಳ ದಾಂಪತ್ಯ. ಆದರೆ, ಈ ದಾಂಪತ್ಯದಲ್ಲಿ ಅನುಮಾನ ಎಂಬ ಪಿಶಾಚಿ ಮನೆ ಮಾಡಿತ್ತು. ನಿರಂತರವಾಗಿ ಪತಿ ಮತ್ತು ಪತ್ನಿಯ ನಡುವೆ ಜಗಳವಾಗುತ್ತಿತ್ತು. ಅನೇಕ ಬಾರಿ ರಾಜಿ ಮಾಡಿಸುತ್ತಿದ್ದ ಗ್ರಾಮಸ್ಥರು, ಅವರಿಬ್ಬರ ಜಗಳ ಕಂಡು ಬೇಸತ್ತು ಹೋಗಿದ್ದರು.
ಮಂಗಳವಾರ ಸಂಜೆ ಗಂಡ, ಹೆಂಡ್ತಿ ನಡುವೆ ಮತ್ತೆ ಜಗಳ ನಡೆದಿದೆ. ಪ್ರಕರಣ ಹಾವೇರಿ ಗ್ರಾಮಾಂತರ ಪೊಲೀಸ್ ಠಾಣೆ ಮೆಟ್ಟಿಲೇರಿತ್ತು. ಇಬ್ಬರಿಗೂ ಬುದ್ಧಿ ಮಾತು ಹೇಳಿದ ಅಧಿಕಾರಿಗಳು ರಾಜಿ ಮಾಡಿಸಿ ಕಳುಹಿಸಿದ್ದರು. ಅಲ್ಲದೇ ಪತಿ ಸ್ವಲ್ಪ ಸಿಟ್ಟಿನಲ್ಲಿದ್ದಾನೆ, ತವರು ಮನೆಗೆ ಹೋಗಿ ಎಂದು ಅವರು ಮಹಿಳೆಗೆ ತಿಳಿಸಿದ್ದರು. ಅವರ ಮಾತು ಕೇಳದೆ ಮಹಿಳೆ ರಾತ್ರಿ ಗಂಡನ ಮನೆಗೆ ಬಂದಿದ್ದಾಳೆ. ಇಬ್ಬರ ನಡುವೆ ಮತ್ತೆ ಜಗಳ ಆರಂಭವಾಗಿದೆ. ಗಲಾಟೆ ತೀವ್ರ ಸ್ವರೂಪ ಪಡೆದುಕೊಂಡು ಇಬ್ಬರು ಕೈ ಕೈ ಮಿಲಾಯಿಸಿದ್ದಾರೆ. ಈ ವೇಳೆ ಪತಿ ಮಾರಕಾಸ್ತ್ರದಿಂದ ಪತ್ನಿಯ ಕುತ್ತಿಗೆ ಹೊಡೆದಿದ್ದಾನೆ. ಪತ್ನಿ ಸಾಯುತ್ತಿದ್ದಂತೆ ಪತಿ ಸಹ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಇದನ್ನೂ ಓದಿ:ನೈತಿಕ ಪೊಲೀಸ್ಗಿರಿ ಪ್ರಕರಣ: ಹಲ್ಲೆಗೊಳಗಾಗಿದ್ದ ಯುವಕನ ಸಹೋದರನಿಂದ ಪೊಲೀಸ್ ಕಮಿಷನರ್ಗೆ ದೂರು
ಅಂದ ಹಾಗೆ, ಈ ಘಟನೆ ನಡೆದಿರುವುದು ಹಾವೇರಿ ತಾಲೂಕು ಸಂಗೂರು ಗ್ರಾಮದಲ್ಲಿ. ಪ್ರಭಾಕರ (65) ಹಾಗೂ ದ್ರಾಕ್ಷಾಯಿಣಿ (60) ಮೃತರು. ಪತ್ನಿ ಮೇಲೆ ಅನುಮಾನಪಡುತ್ತಿದ್ದ ಪತಿ ನಿತ್ಯ ಜಗಳವಾಡುತ್ತಿದ್ದನು. ಇದೀಗ ಅತಿಯಾದ ಸಂಶಯ ದಂಪತಿಯನ್ನು ಬಲಿ ಪಡೆದಿದೆ. ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಸಂಬಂಧಿಕರ ಅಕ್ರಂದನ ಮುಗಿಲು ಮುಟ್ಟಿತ್ತು. ದ್ರಾಕ್ಷಾಯಿಣಿಗಾಗಿ ಸಹೋದರ ಹೊಸ ಮನೆ ಕಟ್ಟಿಸಿ ಕೊಟ್ಟಿದ್ದಾನೆ. ಆದರೆ, ಜಮೀನಿನ ಮನೆಯಲ್ಲಿ ಇರುತ್ತಿದ್ದ ಪತಿ, ಪತ್ನಿ ಅಲ್ಲಿಯೇ ಶವವಾಗಿದ್ದಾರೆ. 3.5 ಲಕ್ಷ ರೂಪಾಯಿ ವೆಚ್ಚದಲ್ಲಿ ಕಟ್ಟಿದ ಮನೆ ಇನ್ನೇನು ಮುಗಿಯುವ ಹಂತಕ್ಕೆ ಬಂದಿದೆ. ಆದರೆ ಅದರಲ್ಲಿ ವಾಸ ಮಾಡುವ ಸೌಭಾಗ್ಯ ನಮ್ಮ ಅಕ್ಕ- ಮಾವನಿಗೆ ಇಲ್ಲ ಎಂದು ದ್ರಾಕ್ಷಾಯಿಣಿ ಸಹೋದರ ಸಣ್ಣಬಸಪ್ಪ ಕಣ್ಣೀರು ಹಾಕಿದರು.