ರಾಣೆಬೆನ್ನೂರು:ಬೇಸಿಗೆ ಸಮಯದಲ್ಲಿ ಬಿಸಿಲಿನ ದಾಹ ನೀಗಿಸಲು ಸರ್ಕಾರ ಕೋಟ್ಯಂತರ ರೂಪಾಯಿ ಖರ್ಚು ಮಾಡಿ ಈಜುಕೊಳ ನಿರ್ಮಾಣ ಮಾಡಿತ್ತು. ಆದರೆ ಅಧಿಕಾರಿಗಳ ನಿರ್ಲಕ್ಷ್ಯದಿಂದ ಕೊಳವೀಗ ಪಾಳು ಬಿದ್ದಿದೆ.
ರಾಣೆಬೆನ್ನೂರು ನಗರದ ಮುನ್ಸಿಪಲ್ ಮೈದಾನದಲ್ಲಿ ಯುವ ಜನಸೇವಾ ಮತ್ತು ಕ್ರೀಡಾ ಇಲಾಖೆ ವತಿಯಿಂದ ಸುಮಾರು ಒಂದುಕೋಟಿ ರೂ. ವೆಚ್ಚದಲ್ಲಿ ಈಜುಕೊಳ ನಿರ್ಮಾಣ ಮಾಡಲಾಗಿತ್ತು. ಆದರೆ ಇದೀಗ ಸೂಕ್ತವಾದ ರಕ್ಷಣೆ ಹಾಗೂ ಬಳಕೆಯಿಲ್ಲದ ಕಾರಣ ಪಾಳು ಬಿದ್ದಿದೆ.
2017ನೇ ಸಾಲಿನಲ್ಲಿ ಅಂದು ಶಾಸಕರಾಗಿದ್ದ ಕೆ.ಬಿ.ಕೋಳಿವಾಡರವರು ಸ್ವಯಂ ಕಾಳಜಿ ವಹಿಸಿ ನಗರದ ಜನತೆಗೆ ಹಾಗೂ ಯುವಕರಿಗೆ ಈಜುಕೊಳವನ್ನು ನಿರ್ಮಾಣ ಮಾಡಿಸಿದ್ದರು. ನಂತರ ಈ ಈಜುಕೊಳವನ್ನು ಬೆಂಗಳೂರು ಮೂಲದ ಕಂಪನಿಗೆ ಟೆಂಡರ್ ನೀಡಲಾಗಿತ್ತು. ಇದೀಗ ಈ ಟೆಂಡರ್ ಮುಗಿದ ಕಾರಣ ಈಜುಕೊಳ ಸ್ಥಗಿತಗೊಂಡಿದೆ. ಇದರಿಂದ ಇಲ್ಲಿನ ವಸ್ತುಗಳು ಹಾಳಾಗುತ್ತಿದ್ದು, ಕಿಡಿಗೇಡಿಗಳು ಕಟ್ಟಡದ ಗಾಜುಗಳನ್ನು ಒಡೆದು ಹಾಕಿದ್ದಾರೆ.
ಈ ಹಿನ್ನೆಲೆ ಇದಕ್ಕೆ ಸಂಬಂಧಿಸಿದ ಅಧಿಕಾರಿಗಳು ಕೂಡಲೇ ಈಜುಕೊಳ ದುರಸ್ತಿ ಮಾಡುವ ಮೂಲಕ ಸಾರ್ವಜನಿಕ ಸೇವೆಗೆ ಒದಗಿಸಬೇಕು ಎಂಬುದು ಜನರ ಒತ್ತಾಯವಾಗಿದೆ.