ಹಾವೇರಿ: ಜಿಲ್ಲೆಯ ಹೊರಭಾಗದಲ್ಲಿರುವ ಅಜ್ಜಯ್ಯನ ದೇವಸ್ಥಾನದ ಮುಂಭಾಗದಲ್ಲಿಂದು ರಾಜ್ಯಮಟ್ಟದ ಹೋರಿ ಬೆದರಿಸುವ ಸ್ಪರ್ಧೆ ನಡೆಯಿತು. ಸ್ಪರ್ಧೆಗೆ ಉತ್ತರ ಕರ್ನಾಟಕದ ವಿವಿಧ ಜಿಲ್ಲೆಗಳಿಂದ ನೂರಾರು ಹೋರಿಗಳನ್ನು ಮಾಲೀಕರು ಕರೆತಂದಿದ್ದರು. ಸುಮಾರು 500 ಮೀಟರ್ ಉದ್ದದ ಆಖಾಡದಲ್ಲಿ ಎತ್ತುಗಳನ್ನು ಓಡಿಸಲಾಯಿತು.
ಮೂರು ವಿಭಾಗಗಳಲ್ಲಿ ಸ್ಪರ್ಧೆ ನಡೆಯಿತು. ಬಲೋನ್, ಗಗ್ಗರಿ ಮತ್ತು ಸಾದಾ ವಿಭಾಗಗಳಲ್ಲಿ ಹೋರಿಗಳ ಸ್ಪರ್ಧೆ ಏರ್ಪಡಿಸಲಾಗಿತ್ತು. ಪೀಪಿ ವಿಭಾಗದಲ್ಲಿ ಎತ್ತುಗಳಿಗೆ ಆಳೆತ್ತರದ ಬಲೋನ್ ಕಟ್ಟಲಾಗಿತ್ತು. ಸಾದಾದಲ್ಲಿ ಹೋರಿಗಳಿಗೆ ಮುಖಚಟ್ಟು, ಕೊಬ್ಬರಿ ಹೋರಿಗೆ ಸಾಮಾನ್ಯ ಅಲಂಕಾರ ಮಾಡಲಾಗಿತ್ತು. ಗಗ್ಗರಿ ವಿಭಾಗದಲ್ಲಿ ಹೋರಿಗಳ ಮೈಮೇಲೆ ಒಣ ಕೊಬ್ಬರಿಗಳಿಂದ ಅಲಂಕರಿಸಲಾಗಿತ್ತು. ಹೋರಿಗಳಿಗೆ ಬಲೋನ್, ಹೂವುಗಳ ಕೊಂಬಣಸು, ಜೋಲಾ, ಕಾಲ್ಗೆಜ್ಜೆ, ಕೊರಳುಗಂಟೆ ಕೊಬ್ಬರಿ ಗಿಟುಕ ಮತ್ತು ಮುಖಚಟ್ಟುಗಳಿಂದ ವಿಶೇಷ ಅಲಂಕರ ಮಾಡಲಾಗಿತ್ತು. ಕೆಲವು ಹೋರಿಗಳ ಕೋಡುಗಳಿಗೆ ಬಣ್ಣ ಬಳಿಯಲಾಗಿತ್ತು. ಹೋರಿಗಳ ಹೆಸರಿರುವ ನಾಮಫಲಕಗಳು ವಿಶೇಷವಾಗಿ ಗಮನ ಸೆಳೆದವು.
ಸೋಲಿಲ್ಲದ ಸರದಾರ, ಅನಾಹುತ, ಮೈಲಾರಿ, ಮದಗಜ, ಕಿಲಾಡಿ ಆಂಬ್ಯುಲೆನ್ಸ್ ಸೇರಿದಂತೆ ವಿವಿಧ ಹೆಸರುಗಳ ಹೋರಿಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಮುಂಜಾನೆಯಿಂದ ಆರಂಭವಾದ ಈ ಸ್ಪರ್ಧೆ ಸಂಜೆಯವರೆಗೂ ಮುಂದುವರೆಯಿತು. ವಿಜೇತ ಎತ್ತುಗಳಿಗೆ ಬೈಕ್, ಬಂಗಾರ, ಫ್ರಿಡ್ಜ್, ಟಿಜೋರಿ ಸೇರಿದಂತೆ ವಿವಿಧ ವಸ್ತುಗಳನ್ನು ಬಹುಮಾನವಾಗಿ ನೀಡಲಾಗಿದೆ. ಸ್ಫರ್ಧೆಗಾಗಿ ಮಾಲೀಕರು ಎತ್ತುಗಳನ್ನು ಕಟುಮಸ್ತಾಗಿ ಬೆಳೆಸಿ ತಂದಿದ್ದರು. ಈ ಹೋರಿಗಳಿಗೆ ದಿನನಿತ್ಯ ಹುರುಳಿಕಾಳು, ಮೆಕ್ಕೆಜೋಳದ ಹಿಟ್ಟು ತಿನ್ನಿಸಿ ಸ್ಪರ್ಧೆಗೆ ತಯಾರು ಮಾಡಲಾಗುತ್ತದೆ. ಅಲ್ಲದೇ ಏಳೆಂಟು ಕಿ.ಮಿ ಓಡಿಸಲಾಗುತ್ತದೆ. ಕೆರೆ, ಹೊಂಡಗಳಲ್ಲಿ ಈಜು ಹೊಡೆಸಬೇಕು. ಹೋರಿಗೆ ಆಯಾಸವಾಗದಂತೆ ಓಡಿಸಿದ ನಂತರ ಸ್ಪರ್ಧೆಗೆ ತರಲಾಗುತ್ತದೆ. ಸ್ಪರ್ಧೆಯ ವಿಜೇತ ಎತ್ತುಗಳನ್ನು ಗ್ರಾಮಕ್ಕೆ ಕರೆದೊಯ್ಯುತ್ತಿದ್ದಂತೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಲಾಗುತ್ತದೆ.