ಹಾವೇರಿ :ಕೂಡ್ಲಿಗಿ ಶಾಸಕ ಎನ್.ವೈ. ಗೋಪಾಲಕೃಷ್ಣ ಅವರು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಕ್ಕೆ ಸಚಿವ ಶ್ರೀರಾಮುಲು ಬೇಸರ ವ್ಯಕ್ತಪಡಿಸಿದ್ದಾರೆ. ಶುಕ್ರವಾರ ಹಾವೇರಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಈ ರೀತಿ ನಿರ್ಧಾರ ಕೈಗೊಂಡಿರುವುದು ನಿಜಕ್ಕೂ ಬೇಜಾರಾಗಿದ್ದು, ಗೋಪಾಲಕೃಷ್ಣ ಅವರು ಏಕೆ ಈ ಆತುರದ ನಿರ್ಧಾರ ಕೈಗೊಂಡಿದ್ದಾರೋ ಗೊತ್ತಿಲ್ಲಾ. ಅವರು ಕೂಡ್ಲಿಗಿಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಿದರೇ ಗೆಲ್ಲುತ್ತಿದ್ದರು. ಆದರೇ ಅವರ ಈ ಆತುರದ ನಿರ್ಧಾರದಿಂದ ಕಾರ್ಯಕರ್ತರಿಗೆ ನೋವಾಗಿದ್ದು, ಬಿಜೆಪಿಗೂ ಮುಜುಗರವಾಗಿದೆ ಎಂದು ಹೇಳಿದರು.
ಗೋಪಾಲಕೃಷ್ಣ ಅವರು ರಾಜಕೀಯದಲ್ಲಿ ಬಹಳಷ್ಟು ಅನುಭವ ಇದ್ದವರು ಆರು ಬಾರಿ ವಿಧಾನಸಭೆ ಆಯ್ಕೆಯಾಗಿದ್ದವರು. ಪಕ್ಷಕ್ಕೆ ರಾಜೀನಾಮೆ ನೀಡಿರುವುದು ಖಂಡಿತವಾಗಿಯೂ ಕಾರ್ಯಕರ್ತರಿಗೆ ನೋವಾಗಿದೆ. ಆದರೆ ಅವರು ಪಕ್ಷ ಬಿಟ್ಟ ನಂತರ ಬಿಜೆಪಿ ಆ ಕ್ಷೇತ್ರದಲ್ಲಿ ಗೆಲ್ಲಲಿದೆ ಅವರ ನಿರ್ಧಾರ ನಮಗೂ ನೋವು ತಂದಿದೆ ಎಂದು ಸಚಿವರು ತಿಳಿಸಿದರು.
ಇತ್ತೀಚಿಗೆ ನಾನು ಬಿಜೆಪಿಯ ಹಲವು ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಿದ್ದರಿಂದ ಅವರ ಜೊತೆ ಹೆಚ್ಚು ಸಮಯ ಮಾತನಾಡಲು ಸಾಧ್ಯವಾಗಿರಲಿಲ್ಲ. ಹಾಗಾಗಿ ಅವರು ಮುಂದೆ ಯಾವ ಪಕ್ಷಕ್ಕೆ ಹೋಗುತ್ತಾರೆ ಎಂಬುದು ಗೊತ್ತಿಲ್ಲಾ. ಅವರು ರಾಜೀನಾಮೆ ನೀಡಿ ಈಗ ನನ್ನ ಕಡೆ ಆರು ಜನ ಇದ್ದಾರೆ ಎನ್ನುವುದು ಸುಳ್ಳು. ಯಾವ ಬೇಸರದಿಂದ ಹೋಗಿದ್ದಾರೆ ಎಂಬುದು ಗೊತ್ತಿಲ್ಲಾ. ಈಗಾಗಲೇ ನಮ್ಮ ಸರ್ಕಾರ ಕೂಡ್ಲಿಗಿಯಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನ ಮಾಡಿದೆ. ಕ್ಷೇತ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಾಗಿನಿಂದ ಅಭಿವೃದ್ಧಿ ಮಂತ್ರ ಜಪಿಸಿದೆ. ಹೀಗಿರುವಾಗ ನಮ್ಮ ಜೊತೆ ಆರು ಜನ ಇದ್ದಾರೆ ಎನ್ನುವುದು ಗಾಳಿಯಲ್ಲಿ ಗುಂಡು ಹಾರಿಸುವ ಕೆಲಸ ಎಂದು ಸಚಿವ ಶ್ರೀರಾಮುಲು ಹೇಳಿದರು.