ಹಾವೇರಿ: ಸಿಎಂ ಬಸವರಾಜ ಬೊಮ್ಮಾಯಿ ತವರು ಕ್ಷೇತ್ರದಲ್ಲಿ ಮತ್ತೆ ಗುಂಡಿನ ಮೊರೆತ ಕೇಳಿಬಂದಿದೆ. ಶಿಗ್ಗಾವಿ ತಾಲೂಕಿನ ಹುಲಗೂರು ಗ್ರಾಮದ ಆಜಾದ ಗಲ್ಲಿಯಲ್ಲಿರುವ ಸಲ್ಮಾ ಎಂಬ ಮಹಿಳೆಯ ಮೇಲೆ ದುಷ್ಕರ್ಮಿಗಳು ಗುಂಡು ಹಾರಿಸಿ ಪರಾರಿಯಾಗಿದ್ದಾರೆ.
ತಮ್ಮ ಮನೆ ಕಟ್ಟೆಯ ಮೇಲೆ ಕುಳಿತಿದ್ದ ಸಲ್ಮಾ ಮೇಲೆ ಬೈಕ್ನಲ್ಲಿ ಬಂದ ಮುಸುಕುಧಾರಿಗಳು ಗುಂಡು ಹಾರಿಸಿದ್ದಾರೆ. ಮುಸುಕುಧಾರಿಗಳು ಬಂದೂಕು ತೆಗೆಯುತ್ತಿದ್ದಂತೆ ಮಹಿಳೆ ಮನೆಯೊಳಗೆ ಓಡಿ ಹೋಗಿದ್ದಾರೆ. ಅದೃಷ್ಟವೆಂಬಂತೆ ಆ ಸಮಯದಲ್ಲಿ ವಿದ್ಯುತ್ ಕೂಡ ಹೋಗಿದೆ. ಗುಂಡಿನ ಸದ್ದು ಕೇಳುತ್ತಿದ್ದಂತೆ ಸುತ್ತಮುತ್ತಲಿನ ಜನರು ಮನೆ ಬಳಿ ಜಮಾಯಿಸಿದ್ದು, ಅಷ್ಟರಲ್ಲಿ ದುಷ್ಕರ್ಮಿಗಳು ಕಾಲ್ಕಿತ್ತಿದ್ದಾರೆ.
ಸಲ್ಮಾರಿಗೆ ಕೆಲವು ವರ್ಷಗಳ ಹಿಂದೆ ಮದುವೆಯಾಗಿದ್ದು ಮೂವರು ಮಕ್ಕಳಿದ್ದಾರೆ. ಪತಿ ಜೊತೆ ಜಗಳ ಮಾಡಿಕೊಂಡಿದ್ದರಿಂದ ಸಲ್ಮಾ ಎರಡು ವರ್ಷಗಳಿಂದ ಹುಲಗೂರು ಗ್ರಾಮದ ತವರು ಮನೆಯಲ್ಲೇ ವಾಸವಿದ್ದಾರೆ. ಕರೆಂಟ್ ಹೋಗಿ ಕತ್ತಲಾಗಿದ್ದರಿಂದ ಗುಂಡುಗಳು ಗೋಡೆಗೆ ತಾಗಿವೆ. ಗೋಡೆಯ ಮೇಲೆ ಆರು ಗುಂಡಿನ ಕಲೆಗಳು ಕಂಡುಬಂದಿವೆ.
ಇದನ್ನೂ ಓದಿ:ಕಲಬುರಗಿ: ಅನ್ಯಕೋಮಿನ ಯುವತಿಯನ್ನು ಪ್ರೀತಿಸಿದ ಯುವಕನ ಬರ್ಬರ ಹತ್ಯೆ
ಮನೆಯಲ್ಲಿ ಸಲ್ಮಾ, ಆಕೆಯ ಮಕ್ಕಳು, ತಂದೆ ಮತ್ತು ಅಣ್ಣತಮ್ಮಂದಿರು ಸೇರಿದಂತೆ ಒಟ್ಟು ಹದಿನಾಲ್ಕು ಸದಸ್ಯರಿದ್ದಾರೆ. ವಿಷಯ ತಿಳಿದು ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ, ಹೆಚ್ಚುವರಿ ಎಸ್ಪಿ ವಿಜಯಕುಮಾರ ಸೇರಿದಂತೆ ಪೊಲೀಸ್ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಕಳೆದ ತಿಂಗಳು ಶಿಗ್ಗಾವಿಯ ರಾಜಶ್ರೀ ಚಿತ್ರಮಂದಿರದಲ್ಲಿ ಗುಂಡು ಹಾರಿಸಿದ್ದ ಆರೋಪಿಯನ್ನು ಬಂಧಿಸಿದ ಕೆಲವೇ ದಿನಗಳಲ್ಲಿ ಮತ್ತೆ ಈ ಘಟನೆ ನಡೆದಿರುವುದು ಜನರ ಆತಂಕಕ್ಕೆ ಕಾರಣವಾಗಿದೆ.