ಹಾವೇರಿ: ಜಿಲ್ಲೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಆರೋಗ್ಯ ಕವಚ 108 ಆ್ಯಂಬುಲೆನ್ಸ್ ಸಿಬ್ಬಂದಿಗೆ ಕಳೆದ ಮೂರು ತಿಂಗಳಿನಿಂದ ವೇತನವಾಗಿಲ್ಲ. ಜಿಲ್ಲೆಯಲ್ಲಿ 22 ಆ್ಯಂಬುಲೆನ್ಸ್ಗಗಳಿದ್ದು ಅವುಗಳಲ್ಲಿ 85 ಸಿಬ್ಬಂದಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಆದರೆ, ಈ ಸಿಬ್ಬಂದಿಗೆ ಮೂರು ತಿಂಗಳಿನಿಂದ ವೇತನವಾಗಿಲ್ಲ. ಇದರಿಂದ ತಮ್ಮ ಜೀವನ ನಡೆಸುವುದು ಕಷ್ಟವಾಗಿದೆ ಎಂದು ಸಿಬ್ಬಂದಿ ಅಳಲು ತೋಡಿಕೊಂಡಿದ್ದಾರೆ.
ನಮಗೂ ಸಹ ವೃದ್ಧ ತಂದೆ ತಾಯಿಯರಿದ್ದಾರೆ. ಶಾಲೆಗೆ ಹೋಗುವ ಮಕ್ಕಳಿದ್ದಾರೆ. ಹೀಗಿರುವಾಗ ವೇತನವಾಗಿಲ್ಲ ಎಂದರೆ ಹೇಗೆ ಜೀವನ ನಡೆಸಬೇಕು ಎಂದು ಪ್ರಶ್ನಿಸಿದ್ದಾರೆ. ಈ ಕುರಿತಂತೆ ಅಧಿಕಾರಿಗಳನ್ನು, ಜನಪ್ರತಿನಿಧಿಗಳನ್ನು ಕೇಳಿದರೆ ಅವರಲ್ಲಿ ಸ್ಪಷ್ಟ ಉತ್ತರವಿಲ್ಲ. ಜಿವಿಕೆ ಸಂಸ್ಥೆಯ ಮುಖ್ಯಸ್ಥರನ್ನು ಕೇಳಿದರೆ ಸರ್ಕಾರದಿಂದ ಅನುದಾನ ಬಂದಿಲ್ಲ ಎನ್ನುತ್ತಿದ್ದಾರೆ. ಸರ್ಕಾರಕ್ಕೆ ಮನವಿ ಮಾಡಿದರೆ ಅವರು ಸಂಸ್ಥೆಯ ಕಾರ್ಯ ವೈಫಲ್ಯದ ಬಗ್ಗೆ ಹೇಳುತ್ತಾರೆ ಎಂದು ಸಿಬ್ಬಂದಿ ಆರೋಪಿಸಿದ್ದಾರೆ.