ಹಾವೇರಿ: ಪ್ರಸ್ತುತ ಸನ್ನಿವೇಶ ನೋಡಿದ್ರೆ ದೇಶಕ್ಕೆ ಜನಪರ ರಾಜಕಾರಣದ ಅವಶ್ಯಕತೆ ಇದೆ. ಸಂವಿಧಾನದ ಚೌಕಟ್ಟಿನಲ್ಲಿ ನಡೆಯುವ ರಾಜಕಾರಣ, ಸಂವಿಧಾನ ಸಂಸ್ಥೆಗಳ ಸಂರಕ್ಷಣಾ ರಾಜಕಾರಣ ಬೇಕು ಎಂದು ಎಸ್ ಆರ್ ಹಿರೇಮಠ ಅಭಿಪ್ರಾಯಪಟ್ಟರು. ಮತದಾರರನ್ನು ಜಾಗೃತಗೊಳಿಸಲು ರಾಜ್ಯದಲ್ಲಿ ಮುಂದಿನ ವರ್ಷ ಸಮಾಜ ಪರಿವರ್ತನಾ ಸತ್ಯಾಗ್ರಹ ಯಾತ್ರೆ ನಡೆಸಲಾಗುತ್ತದೆ ಎಂದೂ ಅವರು ಪ್ರಕಟಿಸಿದರು.
ಹಾವೇರಿಯಲ್ಲಿ ಮಾತನಾಡಿದ ಅವರು, ಎಲ್ಲಿಯವರೆಗೆ ಪ್ರಜೆಗಳು ಸುಧಾರಿಸುವುದಿಲ್ಲವೋ ಅಲ್ಲಿಯವರೆಗೆ ರಾಜಕೀಯ ಸ್ಥಿತಿಯೂ ಸಹ ಇದೇ ರೀತಿ ಇರುತ್ತದೆ. ಮತದಾರರು ಜಾಗರೂಕರಾಗಬೇಕು. ರಾಜಕೀಯ ಪಕ್ಷಗಳ ನಾಯಕರು ನಾಚಿಕೆ, ಮಾನ, ಮರ್ಯಾದೆ ಬಿಟ್ಟಿದ್ದಾರೆ. ಕೇವಲ ಬೆರಳೆಣಿಕೆಯಷ್ಟು ಮಂದಿ ಉತ್ತಮರಿದ್ದಾರೆ. ದೇಶ ಗಂಭೀರ ಪರಿಸ್ಥಿತಿಯಲ್ಲಿದ್ದು, ಇದಕ್ಕೆ ರಾಜಕೀಯ ಪಕ್ಷಗಳ ಮನಸ್ಥಿತಿಯೇ ಕಾರಣ ಎಂದರು.
ಇದನ್ನೂ ಓದಿ:ಸ್ವಾಮಿಗಳು ಹಾಗೂ ರಾಜಕಾರಣಿಗಳ ನಡುವೆ ಅಪವಿತ್ರ ಮೈತ್ರಿ: ಎಸ್ಆರ್ ಹಿರೇಮಠ ಕಿಡಿ
ದೇಶದಲ್ಲಿ ಪ್ರಧಾನಿ ಸೇರಿದಂತೆ ಪ್ರಮುಖ ನಾಯಕರ ಆಯ್ಕೆಯನ್ನು ಬಂಡವಾಳಶಾಹಿಗಳು ಮಾಡುತ್ತಿದ್ದಾರೆ. ರಾಜಕೀಯ ಪಕ್ಷಗಳ ಚುನಾವಣೆಗೆ ಯಾರು ಹಣ ನೀಡುತ್ತಾರೋ ಅವರ ಕಡೆ ರಾಜಕೀಯ ನೇತಾರರು, ಸರ್ಕಾರಗಳಿವೆ. ದೇಶದ ಜ್ವಲಂತ ಸಮಸ್ಯೆಗಳನ್ನು ಪರಿಹರಿಸುವ ಬದಲು ಜಾತಿ ಜಾತಿಗಳ ನಡುವೆ ವಿಷಬೀಜ ಬಿತ್ತುತ್ತಿದ್ದಾರೆ. ಯಾವ ರಾಜಕೀಯ ಪಕ್ಷದಲ್ಲಿಯೂ ಸಹ ನೈತಿಕತೆ ಇಲ್ಲ. ಸಂವಿಧಾನದ ಸ್ವಾಯತ್ತ ಸಂಸ್ಥೆಗಳನ್ನು ಸರ್ಕಾರಗಳು ತಮಗೆ ಬೇಕಾದ ರೀತಿಯಲ್ಲಿ ಬಳಕೆ ಮಾಡುತ್ತಿವೆ. ದೇಶದ ನಿಜವಾದ ಮಾಲೀಕರಾದ ಪ್ರಜೆಗಳು ಎಲ್ಲಿಯವರೆಗೆ ಎದ್ದು ನಿಲ್ಲುವುದಿಲ್ಲವೋ ಅಲ್ಲಿಯವರೆಗೆ ಈ ವ್ಯವಸ್ಥೆ ಸರಿಯಾಗುವುದಿಲ್ಲ ಎಂದು ವಾಗ್ದಾಳಿ ನಡೆಸಿದರು.