ರಾಣೆಬೆನ್ನೂರು: ಕಠಿಣ ಲಾಕ್ಡೌನ್ ನಿಯಮ ಉಲ್ಲಂಘನೆ ಮಾಡಿ ರಸ್ತೆಗೆ ಇಳಿದಿದ್ದ ಬೈಕ್ ಸವಾರರಿಗೆ ರಾಣೆಬೆನ್ನೂರು ಪೊಲೀಸರು ಒಂದು ಕಿ.ಮೀ. ಬೈಕ್ ನೂಕಿಸಿ ಪರೇಡ್ ಮಾಡಿಸಿದ್ದಾರೆ.
ರಾಜ್ಯ ಸರ್ಕಾರ ಇಂದಿನಿಂದ ರಾಜ್ಯಾದ್ಯಂತ ಕಠಿಣ ಲಾಕ್ಡೌನ್ ನಿಯಮ ಜಾರಿಗೆ ತಂದಿದ್ದು, ಸಾರ್ವಜನಿಕರು ಯಾವುದೇ ಕಾರಣಕ್ಕೂ ವಾಹನಗಳಲ್ಲಿ ಬರಬಾರದು ಎಂದು ತಿಳಿಸಿದೆ.
ಆದರೂ ರಾಣೆಬೆನ್ನೂರಲ್ಲಿ ಕೆಲವರು ನಿಯಮ ಉಲ್ಲಂಘಿಸಿ ಬೈಕ್ನಲ್ಲಿ ಬಂದಿದ್ದನ್ನು ಕಂಡ ಪೊಲೀಸರು ಬೈಕ್ ಸವಾರರನ್ನು ನಿಲ್ಲಿಸಿ ಅವರನ್ನು ಬೈಕ್ನಿಂದ ಕೆಳಗೆ ಇಳಿಸಿ ಸುಮಾರು ಒಂದು ಕಿ.ಮೀ. ತಳ್ಳಿಸಿ ಅವರನ್ನು ದಂಡಿಸಿದ್ದಾರೆ.
ಬೈಕ್ ನೂಕಿಸಿ ಪರೇಡ್ ಮಾಡಿಸಿದ ಪೊಲೀಸರು ಅಲ್ಲದೆ ರಾಣೆಬೆನ್ನೂರು ಶಹರ ಠಾಣೆ ಪೊಲೀಸರು ಸುಮಾರು 200 ಬೈಕ್ಗಳನ್ನು ವಶಪಡಿಸಿಕೊಂಡಿದ್ದಾರೆ. ಲಾಕ್ಡೌನ್ ಕುರಿತು ಜಿಲ್ಲಾಧಿಕಾರಿ ಸಂಜಯ ಶೆಟ್ಟಣ್ಣನವರ ಮಾತನಾಡಿ, ರಾಜ್ಯ ಸರ್ಕಾರ ಕೊರೊನಾ ನಿಯಂತ್ರಣ ಮಾಡಲು ಕಠಿಣ ನಿಯಮಗಳನ್ನು ಜಾರಿಗೆ ತಂದಿದೆ.
ಈ ನಡುವೆ ಯಾವೊಬ್ಬ ಸಾರ್ವಜನಿಕರು ಹೊರಗಡೆ ಬರಬಾರದು ಎಂದು ಜನರಿಗೆ ಮನವಿ ಮಾಡಿದರು. ನಂತರ ಅಧಿಕಾರಿಗಳು ನಗರದಲ್ಲಿ ಜಾಥಾ ಮಾಡುವ ಮೂಲಕ ಕೋವಿಡ್ ಬಗ್ಗೆ ಜಾಗೃತಿ ಮೂಡಿಸಿದರು.