ಹಾವೇರಿ: ಜಿಲ್ಲೆಯ ಬ್ಯಾಡಗಿ ತಾಲೂಕಿನ ಸುಕ್ಷೇತ್ರ ಗುಡ್ಡದ ಮಲ್ಲಾಪುರದಲ್ಲಿ ವಿಶಿಷ್ಟವಾದ ಹುಚ್ಚೇಶ್ವರ ಮಠ (Hucheshwar Math, Haveri) ಇದೆ. ಇಲ್ಲಿ ಮನುಷ್ಯರೂಪಿ ಸ್ವಾಮೀಜಿಗಳನ್ನು ಪಟ್ಟಾಧಿಕಾರ ಮಾಡುವುದಿಲ್ಲ. ಬದಲಿಗೆ ವೃಷಭರೂಪಿ ಎತ್ತುಗಳಿಗೆ ಸ್ವಾಮೀಜಿ ಪಟ್ಟ ಕಟ್ಟಲಾಗುತ್ತದೆ.
ಹೌದು, ಮಠದಲ್ಲಿ ಹಿರಿಯ ಮತ್ತು ಕಿರಿಯ ಮೂಕಪ್ಪ ಸ್ವಾಮೀಜಿಗಳು ಎಂಬ ಇಬ್ಬರು ಮಠಾಧೀಶರು ಇರುತ್ತಾರೆ. ಕಿರಿಯ, ಹಿರಿಯ ಸ್ವಾಮೀಜಿಗಳು ಲಿಂಗೈಕ್ಯರಾದ ನಂತರ ಅವರು ಮಠದ ಭಕ್ತರ ಮನೆಯಲ್ಲಿ ಜನಿಸುತ್ತಾರೆ ಎಂಬುದು ನಂಬಿಕೆ. ಅದರಂತೆಯೇ ಇಲ್ಲಿನ ಹಿರಿಯ ಸ್ವಾಮೀಜಿ ಕೆಲ ತಿಂಗಳ ಹಿಂದಷ್ಟೇ ಲಿಂಗೈಕ್ಯರಾಗಿದ್ದರು. ಇದೀಗ ಅವರು ಕಬ್ಬೂರು ಗ್ರಾಮದ ಭಕ್ತರ ಮನೆಯೊಂದರಲ್ಲಿ ಜನಿಸಿದ್ದಾರೆ ಎನ್ನಲಾಗಿದೆ.
ಇನ್ನು ಜನಿಸಿರುವುದು ಮೂಕಪ್ಪ ಶ್ರೀಗಳು ಹೌದೋ, ಅಲ್ಲವೋ ಎನ್ನುವುದಕ್ಕೆ ಮಠದ ಧರ್ಮಾಧಿಕಾರಿಗಳು ಹಲವು ಪರೀಕ್ಷೆ ನಡೆಸುತ್ತಾರೆ. ಪರೀಕ್ಷೆಯಲ್ಲಿ ಮೂಕಪ್ಪ ಶ್ರೀಗಳು ಮರು ಜನನ ಹೊಂದಿದ್ದಾರೆಯೇ ಎಂದು ಧರ್ಮಾಧಿಕಾರಿಗಳು ತೀರ್ಮಾನಿಸಲಿದ್ದಾರೆ. 9 ತಿಂಗಳ ನಂತರ ಕರುವಿಗೆ ಪಟ್ಟಾಧಿಕಾರ ಮಾಡಲಾಗುತ್ತದೆ. ಈ ಪಟ್ಟಾಧಿಕಾರಕ್ಕೆ ಶ್ರೀಶೈಲ ಸ್ವಾಮೀಜಿಗಳು ಸಾನಿಧ್ಯ ವಹಿಸುತ್ತಾರೆ.
ನಿನ್ನೆ ಕಿರಿಯ ಶ್ರೀಗಳ ಪಟ್ಟಾಧಿಕಾರ ಮಹೋತ್ಸವ (Pattadhikara Ceremony) ನಡೆಸಲಾಯಿತು. ಈ ಅಭೂತಪೂರ್ವ ಕಾರ್ಯಕ್ರಮಕ್ಕೆ ವಿವಿಧ ಮಠಾಧೀಶರು, ಸಾವಿರಾರು ಭಕ್ತರು ಸಾಕ್ಷಿಯಾದರು.
ಹುಚ್ಚೇಶ್ವರ ಮಠದಲ್ಲಿ ಪಟ್ಟಾಧಿಕಾರ ಸಮಾರಂಭ 16 ನೇ ಶತಮಾನದಲ್ಲಿ ಶ್ರೀಶೈಲದಿಂದ ಹುಚ್ಚೇಶ್ವರಸ್ವಾಮೀಜಿ ಚಕ್ಕಡಿಯಲ್ಲಿ ಬಂದಿದ್ದರಂತೆ. ಅವರು ಲಿಂಗೈಕ್ಯರಾಗುವ ವೇಳೆ ಇನ್ಮುಂದೆ ಮನುಷ್ಯರೂಪಿ ಸ್ವಾಮೀಜಿಗಳ ಬದಲು ತಮ್ಮ ಜೊತೆ ಚಕ್ಕಡಿ ಹೊತ್ತು ತಂದಿದ್ದ ಎತ್ತುಗಳನ್ನೇ ಮುಂದಿನ ಸ್ವಾಜೀಜಿಗಳನ್ನಾಗಿ ಮಾಡಿ ಎಂದು ತಿಳಿಸಿದ್ದರಂತೆ. ಹಾಗಾಗಿ ಅಂದಿನಿಂದ ಇಂದಿನವರೆಗೂ ಇಲ್ಲಿ ಎತ್ತುಗಳನ್ನೇ ಸ್ವಾಮೀಜಿಗಳನ್ನಾಗಿ ಮಾಡಿ ಪೂಜಿಸಲಾಗುತ್ತದೆ. ಮಠಕ್ಕೆ ಧರ್ಮಾಧಿಕಾರಿ ಇದ್ದು, ಅವರು ಮಠದ ಆಡಳಿತ ನಡೆಸುತ್ತಾರೆ.