ಹಾವೇರಿ:ಲಿಂಗಾಯತ ಪಂಚಮಸಾಲಿಗೆ 2ಎ ಮೀಸಲಾತಿ ಏಕೆ ಸಿಗುತ್ತಿಲ್ಲ ಎಂಬುದು ಯಕ್ಷಪ್ರಶ್ನೆಯಾಗಿದೆ. ಸರ್ಕಾರ 27ರ ಒಳಗೆ ಆಡಳಿತಾತ್ಮಕ ಘೋಷಣೆ ಮಾಡಬೇಕು. ಸರ್ಕಾರ ಗಣತಿ ಕಾರ್ಯ ಮಾಡುತ್ತಿರುವುದು ಸಂತೋಷದ ವಿಚಾರ ಎಂದು ಕೂಡಲಸಂಗಮ ಪಂಚಮಸಾಲಿಪೀಠದ ಬಸವ ಜಯಮೃತ್ಯುಂಜಯ ಸ್ವಾಮೀಜಿ ತಿಳಿಸಿದರು.
ಹಾವೇರಿಯಲ್ಲಿ ಮಾತನಾಡಿದ ಅವರು, ಸರ್ಕಾರದ ಬೆಳವಣಿಗೆಯಿಂದ ನಮಗೆ ಸಿಹಿಸುದ್ದಿ ಸಿಗುವ ನಿರೀಕ್ಷೆಯಿದೆ. ಮುಖ್ಯಮಂತ್ರಿಗಳು ಕೊನೆಯ ಪಕ್ಷ ಆಯೋಗದ ವರದಿ ತರಿಸಿಕೊಂಡರೆ ನಮಗೆ ಸರ್ಕಾರದ ಬಗ್ಗೆ ನಂಬಿಕೆ ವಿಶ್ವಾಸ ಬರುತ್ತದೆ ಎಂದು ಅವರು ಹೇಳಿದರು.
ಸಿಎಂ ಬಸವರಾಜ ಬೊಮ್ಮಾಯಿ ಶಿಗ್ಗಾಂವಿ ನಿವಾಸದ ಮುಂದೆ 27ರಂದು ನಡೆಸುವ ಸತ್ಯಾಗ್ರಹ ಬಗ್ಗೆ ನಾಳೆ ನಡೆಯುವ ಸಭೆಯಲ್ಲಿ ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು. ಸಭೆಯಲ್ಲಿ ಸಚಿವ ಸಿ.ಸಿ.ಪಾಟೀಲ್ ಸೇರಿದಂತೆ ಪಂಚಮಸಾಲಿ ಮುಖಂಡರು ಪಾಲ್ಗೊಳ್ಳಲಿದ್ದಾರೆ. ಸರ್ಕಾರದ ಸ್ಪಷ್ಟ ನಿಲುವು ತಿಳಿದುಕೊಂಡು ಮುಂದಿನ ನಿರ್ಣಯ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಶಾಶ್ವತ ಹಿಂದುಳಿದ ಆಯೋಗದ ಅಧ್ಯಕ್ಷ ಜಯಪ್ರಕಾಶ್ ಹೆಗಡೆಯವರು ಸಮೀಕ್ಷೆ ಕೈಗೊಂಡಿರುವುದು ಹರ್ಷ ತಂದಿದೆ. ಸಿಎಂ ಬೊಮ್ಮಾಯಿ ಮನಸ್ಸಿನಲ್ಲಿ ಪಂಚಮಸಾಲಿಗಳಿಗೆ 2ಎ ಮೀಸಲಾತಿ ನೀಡುವ ವಿಚಾರವಿದೆ. ಆದರೆ ಯಾಕೆ ಹಿನ್ನಡೆಯಾಗುತ್ತದೆ ಎಂಬುದು ಗೊತ್ತಾಗುತ್ತಿಲ್ಲ ಎಂದು ಶ್ರೀಗಳು ಹೇಳಿದರು.
ಇದನ್ನೂ ಓದಿ:ಸಿದ್ದರಾಮಯ್ಯರ ಟೀಕೆಗೆ ಯಾವುದೇ ಅರ್ಥವಿಲ್ಲ : ಮಾಜಿ ಸಿಎಂ ಜಗದೀಶ್ ಶೆಟ್ಟರ್