ಹಾವೇರಿ: ಫಲವತ್ತಾಗಿ ಬೆಳೆದು ನಿಂತಿದ್ದ ಭತ್ತ ನೀರು ಪಾಲಾಗಿದ್ದಕ್ಕೆ (crop destroyed due to heavy rain) ಕಂಗಾಲಾದ ರೈತನೊಬ್ಬ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವ ಘಟನೆ ಹಾವೇರಿ ಜಿಲ್ಲೆ ರಾಣೆಬೆನ್ನೂರು ತಾಲೂಕಿನ ಹೊಳೆಆನ್ವೇರಿಯಲ್ಲಿ ನಡೆದಿದೆ. ರೈತನ ಆಕ್ರೋಶದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
'ನಮ್ಗ ಸ್ವಲ್ಪ ಎಣ್ಣಿ ಕೊಟ್ಟು ನೀವು ಆರಾಮಾಗಿರಿ': ಕಷ್ಟ ಕೇಳಲು ಬಾರದ ಅಧಿಕಾರಿಗಳು, ಜನಪ್ರತಿನಿಧಿಗಳ ವಿರುದ್ಧ ರೈತನ ಆಕ್ರೋಶ
ಕಳೆದ ಮೂರು ನಾಲ್ಕು ದಿನಗಳಿಂದ ಹಾವೇರಿ ಜಿಲ್ಲೆಯಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಗೆ ಬೆಳೆ ಹಾನಿ (crop destroyed due to heavy rain) ಉಂಟಾಗಿದ್ದು, ಇದರಿಂದ ರೈತರು ಕಂಗಾಲಾಗಿದ್ದಾರೆ. ಭತ್ತದ ಗದ್ದೆಗಳು ಕೆರೆಯಂತಾಗಿದ್ದು, ಫಸಲು ನಾಶವಾಗಿದೆ. ಸಂಕಷ್ಟದಲ್ಲಿ ರೈತರಿದ್ದರು ನೋಡಲು ಬಾರದ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ವಿರುದ್ಧ ರೈತರೊಬ್ಬರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಗ್ರಾಮದ ರೈತ ಮಹೇಶ ಚಿಗರಿ ಅಸಾಯಕತೆ ವ್ಯಕ್ತಪಡಿಸಿದ ರೈತ. ನಮಗೆ ಕುಡಿಯಲು ಎಣ್ಣಿ (ವಿಷ) ಕೊಡ್ರಿ, ಎಣ್ಣಿ ಕೊಟ್ರ ನಾವು ತಣ್ಣಗಾಗುತ್ತೇವೆ. ಆಗ ನೀವು ಆರಾಮಾಗಿ ಖುರ್ಚಿ ಮೇಲೆ ಕುಳಿತುಕೊಳ್ಳಿ. ಆರ್ಸಿಸಿ ಮನೆಯಲ್ಲಿ ಬೆಚ್ಚಗೆ ಕುಳಿತಿದ್ದೀರಿ, ರೈತರು ಉಳಿದಾರೋ ಸತ್ತಾರೋ ಅಂತಾ ಬಂದು ನೋಡ್ರಿ. ಇಲ್ಲ ನಮ್ಮನ್ನ ಹೊಳೆಗಾದ್ರೂ ಹೋಗ್ರಿ, ಮಳೆಯಲ್ಲಾದ್ರೂ ಹೋಗ್ರಿ ಅನ್ನಿ ಅಂತಾ ನೋವಿನಿಂದ ಆಕ್ರೋಶ ವ್ಯಕ್ತಪಡಿಸಿದ್ದಾನೆ.
ನಿರಂತರವಾಗಿ ಬೀಳ್ತಿರೋ ಮಳೆಯಿಂದ ಮಹೇಶ್ ಚಿಗರಿ ಜಮೀನು ಸಂಪೂರ್ಣ ಹಾಳಾಗಿದೆ. ಭತ್ತದ ಜಮೀನಿನಲ್ಲಿ ನೀರು ನಿಂತು ಕೆರೆಯಂತಾಗಿದೆ. ಬೆಳೆಗಳು ಜಲಾವೃತಗೊಂಡಿದ್ರೂ ರೈತರ ಕಷ್ಟ ಕೇಳಲು ಬಾರದ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳ ನಡೆಗೆ ಮಹೇಶ್ ಈ ರೀತಿ ಆಕ್ರೋಶ ಹೊರಹಾಕಿದ್ದಾನೆ.