ಹಾವೇರಿ: ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ತಮ್ಮ ಪಕ್ಷದಲ್ಲಿರುವ ಒಳ ಜಗಳವನ್ನು ಬಗೆಹರಿಸಿಕೊಳ್ಳಲಿ ಸಾಕು. ಹಾನಗಲ್ ಚುನಾವಣೆ ಗೆಲುವಿನ ಬಗ್ಗೆ ಮಾತನಾಡುವ ಅವರು, ಸಿಂದಗಿ ಫಲಿತಾಂಶದ ಬಗ್ಗೆ ಏನ್ ಹೇಳ್ತಾರೆ ಎಂದು ಶಾಸಕ ನೆಹರು ಓಲೇಕಾರ್ ಅವರು ಪ್ರಶ್ನಿಸಿದರು.
ಹಾನಗಲ್ ಉಪಚುನಾವಣೆ ಫಲಿತಾಂಶ 2023ರ ಚುನಾವಣೆಗೆ ಮುಹೂರ್ತ ಎಂಬ ಡಿ.ಕೆ.ಶಿವಕುಮಾರ್ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, ಸಿಂದಗಿ ಉಪಚುನಾವಣೆಯ ಫಲಿತಾಂಶ ಮುಂದಿನ ಯಾವುದೇ ಚುನಾವಣೆಗಳ ಮೇಲೆ ಪ್ರಭಾವ ಬೀರುವುದಿಲ್ಲ. ಉಪಚುನಾವಣೆಯ ಫಲಿತಾಂಶಗಳು ರಾಜ್ಯದ ಚುನಾವಣೆಯನ್ನು ಬದಲಾಯಿಸುವುದಿಲ್ಲ ಎಂದರು.
ಜನತಾದರ್ಶನ ಪ್ರಾರಂಭ
ಇದೇ 8 ರಿಂದ ಪ್ರತಿ ಸೋಮವಾರ ನಗರದ ಪ್ರವಾಸಿಮಂದಿರದಲ್ಲಿ ಕ್ಷೇತ್ರದ ಜನರ ಸಮಸ್ಯೆ ಆಲಿಸಲು ಜನತಾದರ್ಶನ ಆರಂಭಿಸಲಾಗುತ್ತಿದೆ. ಜನತಾದರ್ಶನದ ವೇಳೆ ತಾಲೂಕು ಮಟ್ಟದ ಅಧಿಕಾರಿಗಳು ಸ್ಥಳದಲ್ಲಿ ಇರುತ್ತಾರೆ. ಕ್ಷೇತ್ರದ ಜನರು ತಮ್ಮ ಸಮಸ್ಯೆಗಳಿಗೆ ಇಲ್ಲಿ ಪರಿಹಾರ ಕಂಡುಕೊಳ್ಳಬಹುದು ಎಂದು ಓಲೇಕಾರ್ ತಿಳಿಸಿದರು.
ಸಮಸ್ಯೆಗಳ ಪರಿಹಾರ ಭರವಸೆ:
ಹಾವೇರಿ ನಗರದ ಚರಂಡಿ ಸಮಸ್ಯೆ, ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲಾಗುತ್ತದೆ. ದಿನದ 24 ಗಂಟೆ ಕುಡಿಯುವ ನೀರು ಪೂರೈಕೆ ಯೋಜನೆಗಳ ಬಗ್ಗೆ ಶೀಘ್ರ ಕ್ರಮ ಕೈಗೊಳ್ಳಲಾಗುವುದು. ಯೋಜನೆಗೆ ಸಮಯ ನಿಗದಿಸಿ ಗುತ್ತಿಗೆದಾರನಿಗೆ ಸಮಯ ನೀಡಲಾಗುವುದು. ಒಂದು ವೇಳೆ ನಿಗದಿತ ವೇಳೆಗೆ ಮುಗಿಸದಿದ್ದರೆ ಗುತ್ತಿಗೆದಾರರನನ್ನೇ ಬದಲಾವಣೆ ಮಾಡುವುದಾಗಿ ಓಲೇಕಾರ ಅವರು ಭರವಸೆ ನೀಡಿದರು.