ಕರ್ನಾಟಕ

karnataka

ETV Bharat / state

ದನ ಬೆದರಿಸುವ ಸ್ಫರ್ಧೆಯಲ್ಲಿ ತನ್ನದೇ ಛಾಪು ಮೂಡಿಸಿದ್ದ 'ಮೈಸೂರು ಹುಲಿ' ಇನ್ನಿಲ್ಲ..

ಮೈಸೂರು ಹುಲಿ ಎಂದು ಖ್ಯಾತಿ ಪಡೆದಿದ್ದ ಹೋರಿ ಸಾವು - ದನಬೆದರಿಸುವ ಸ್ಪರ್ಧೆಯಲ್ಲಿ ಘಾಪು ಮೂಡಿಸಿದ್ದ ಹೋರಿ - ಕುಸ್ತಿಪಟು ನಂಜಪ್ಪ ಗೂಳಣ್ಣನವರ್ ಅವರ ಮನೆತನಕ್ಕೆ ಸೇರಿದ್ದ ಎತ್ತು ಇನ್ನಿಲ್ಲ

mysore-huli-famed-ox-died-at-haveri
ದನ ಬೆದರಿಸುವ ಸ್ಫರ್ಧೆಯಲ್ಲಿ ಛಾಪು ಮೂಡಿಸಿದ್ದ 'ಮೈಸೂರು ಹುಲಿ' ಇನ್ನಿಲ್ಲ

By

Published : Jan 29, 2023, 3:57 PM IST

ಹಾವೇರಿ : ದನ ಬೆದರಿಸುವ ಸ್ಪರ್ಧೆಯಲ್ಲಿ ತನ್ನದೇ ಆದ ಛಾಪು ಮೂಡಿಸಿದ್ದ ಜಿಲ್ಲೆಯ ರಾಣೆಬೆನ್ನೂರಿನ ಮೈಸೂರು ಹುಲಿ ಎಂದೇ ಖ್ಯಾತಿ ಪಡೆದಿದ್ದ ಹೋರಿ ಸಾವನ್ನಪ್ಪಿದೆ. ಕಳೆದ ಹಲವು ದಿನಗಳಿಂದ ಆನಾರೋಗ್ಯದಿಂದ ಬಳಲುತ್ತಿದ್ದ ಮೈಸೂರು ಹುಲಿ ಎಂಬ ಹೆಸರಿನ ಎತ್ತು ಮೃತಪಟ್ಟಿದ್ದು, ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಅಗಲಿದೆ. ಮೈಸೂರು ಹುಲಿ ಸಾವಿಗೆ ಹೋರಿಯ ಮಾಲೀಕರು, ಅಭಿಮಾನಿಗಳು ಸಂತಾಪ ವ್ಯಕ್ತಪಡಿಸಿದ್ದಾರೆ.

ಈ ಹೋರಿಯು ರಾಣೆಬೆನ್ನೂರು ನಗರದ ಪ್ರಸಿದ್ದ ಕುಸ್ತಿಪಟು ನಂಜಪ್ಪ ಗೂಳಣ್ಣನವರ್ ಅವರ ಮನೆತನಕ್ಕೆ ಸೇರಿತ್ತು. ಕುಸ್ತಿಪಟು ನಂಜಪ್ಪ ಅವರು ಆಗಿನ ಕಾಲದಲ್ಲಿಯೇ ಕುಸ್ತಿಯಲ್ಲಿ ಖ್ಯಾತಿ ಪಡೆದು ಮೈಸೂರಿನ ಹುಲಿ ಎಂದು ಪ್ರಸಿದ್ಧರಾಗಿದ್ದರು. ಇವರ ಮನೆತನವು ಹೋರಿಯನ್ನು ಸಲುಹಿದ್ದ ಕಾರಣ ಹೋರಿಗೆ ಮೈಸೂರು ಹುಲಿ ಎಂದು ಕರೆಯಲಾಗುತ್ತಿತ್ತು.

13 ವರ್ಷಗಳಿಂದ ಹೆಸರು ಮಾಡಿದ್ದ ಹೋರಿ.. ಮೈಸೂರು ಹುಲಿ ಖ್ಯಾತಿಯ ಈ ಎತ್ತು ಕಳೆದ 13 ವರ್ಷಗಳಿಂದ ದನಬೆದರಿಸುವ ಸ್ಪರ್ಧೆಯಲ್ಲಿ ತನ್ನದೇ ಆದ ಹೆಸರು ಮಾಡಿತ್ತು. ಅಷ್ಟೇ ಅಲ್ಲದೆ ಸಾವಿರಾರು ಅಭಿಮಾನಿಗಳನ್ನು ಹೊಂದಿತ್ತು. ಹಾವೇರಿ, ದಾವಣಗೆರೆ, ಶಿವಮೊಗ್ಗ ಮತ್ತು ಗದಗ ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಮೈಸೂರು ಹುಲಿ ನೂರಾರು ಪ್ರಶಸ್ತಿಗಳನ್ನು ಪಡೆದುಕೊಂಡಿತ್ತು. ಹಲವು ಬೈಕ್, ಹತ್ತು ಅಲ್ಮೇರಾ, ಐದು ತೊಲೆ ಬಂಗಾರ ಸೇರಿದಂತೆ ಹಲವು ಬಹುಮಾನಗಳನ್ನು ಈ ಹೋರಿ ಗೆದ್ದು ಬೀಗಿತ್ತು.

ಅಖಾಡದಲ್ಲಿ ಧೂಳೆಬ್ಬಿಸುತ್ತಿತ್ತು ಮೈಸೂರು ಹುಲಿ.. ನೇರ ಕೊಂಬಗಳನ್ನು ಹೊಂದಿದ್ದ ಮೈಸೂರು ಹುಲಿ ಹೋರಿಗೆ ಸಿಂಗಾರ ಮಾಡುತ್ತಿದ್ದಂತೆ ಅಖಾಡದಲ್ಲಿ ಧೂಳೆಬ್ಬಿಸಲು ಸಜ್ಜಾಗುತ್ತಿತ್ತು. ಮೈಮೇಲೆ ಝೋಲಾ ಹಾಕಿ ಕಾಲಿಗೆ ಗೆಜ್ಜೆ ಕಟ್ಟಿ, ಕೊರಳಿಗೆ ಕೊಬ್ಬರಿ ಹಾರ ಹಾಕಲಾಗುತ್ತಿತ್ತು. ನಂತರ ಕೊಂಬುಗಳಿಗೆ ಅಂದದ ಚೌಕಕಟ್ಟಿದ ಬಳಿಕ ಆಳೆತ್ತರದ ಬಲೂನ್​ ಕಟ್ಟುತ್ತಿದ್ದಂತೆ ನೋಡುಗರ ಎದೆಯಲ್ಲಿ ಸಣ್ಣದೊಂದು ಅಳಕು ಮೂಡುಸುತ್ತಿತ್ತು. ಅಖಾಡದಲ್ಲಿ ಓಡುತ್ತಿದ್ದ ಮೈಸೂರು ಹುಲಿಯನ್ನು ಹಿಡಿಯಲು ಯಾವ ಫೈಲ್ವಾನರಿಗೂ ಸಾಧ್ಯವಾಗುತ್ತಿರಲಿಲ್ಲ. ಎಲ್ಲಿಯಾದರೂ ದನಬೆದರಿಸುವ ಸ್ಪರ್ಧೆ ನಡೆಯುತ್ತಿದೆ ಎಂದರೇ ಅಖಾಡದಲ್ಲಿ ಮೈಸೂರು ಹುಲಿ ಇದ್ದರೇ ಅದರ ಹವಾ ಬೇರೆಯದೇ ಆಗಿರುತ್ತಿತ್ತು. ಅಖಾಡದಲ್ಲಿ ಅಬ್ಬರಿಸಿದರೂ ಮನೆಯಲ್ಲಿ ಮಗುವಿನಂತೆ ಇರುತ್ತಿತ್ತು. ಚಿಕ್ಕ ಮಕ್ಕಳು ಹತ್ತಿರ ಹೋದರೂ ಏನೂ ತೊಂದರೆ ಮಾಡುತ್ತಿರಲಿಲ್ಲ. ತಮ್ಮ ಮನೆಯ ಸದಸ್ಯನಂತಿದ್ದ ಅಚ್ಚುಮೆಚ್ಚಿನ ಹೋರಿ ಸಾವನ್ನಪ್ಪಿರುವುದು ಮಾಲೀಕರಿಗೆ ತೀವ್ರ ದುಃಖವನ್ನು ಉಂಟು ಮಾಡಿದೆ.

ವಯೋಸಹಜ ಕಾಯಿಲೆಯಿಂದ ಸಾವು.. ಕಳೆದ ಕೆಲ ದಿನಗಳಿಂದ ವಯೋಸಹಜ ಕಾಯಿಲೆಗಳಿಂದ ಬಳಲುತ್ತಿದ್ದ ಮೈಸೂರು ಹುಲಿ ಹೋರಿಗೆ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಶನಿವಾರ ರಾತ್ರಿ ಚಿಕಿತ್ಸೆ ಫಲಕಾರಿಯಾಗದೆ ಹೋರಿ ಮೃತಪಟ್ಟಿದೆ. ಹೋರಿ ಸಾವನ್ನಪ್ಪಿದ ವಿಷಯ ತಿಳಿಯುತ್ತಿದ್ದಂತೆ ಸಾವಿರಾರು ಸಂಖ್ಯೆಯಲ್ಲಿ ಅಭಿಮಾನಿಗಳು ಆಗಮಿಸಿ ಹೋರಿಯ ಅಂತಿಮ ದರ್ಶನ ಪಡೆದಿದ್ದಾರೆ. ತಮ್ಮ ನೆಚ್ಚಿನ ಹೋರಿಯ ಅಗಲುವಿಕೆಗೆ ಕಂಬನಿ ಮಿಡಿಯುತ್ತಿದ್ದಾರೆ. ರಾಣೆಬೆನ್ನೂರಿನ ಮಾಲೀಕರ ಮನೆಯಲ್ಲಿ ಹೋರಿಯ ಅಂತಿಮ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ಪುಷ್ಪಗಳಿಂದ ಅಲಂಕೃತಗೊಳಿಸಿದ ವಾಹನದಲ್ಲಿ ಹೋರಿಯ ಮೃತದೇಹವಿಟ್ಟು ಅಂತಿಮಯಾತ್ರೆ ನಡೆಸಿ ಅಂತ್ಯಕ್ರಿಯೆ ನಡೆಸಲಾಗುವುದು ಎಂದು ಹೋರಿ ಮಾಲೀಕ ನಾಗಪ್ಪ ಗೂಳಣ್ಣನವರ್ ತಿಳಿಸಿದ್ದಾರೆ.

ಉತ್ತರಕರ್ನಾಟಕದ ಜಾನಪದ ಕ್ರೀಡೆಗಳಲ್ಲಿ ಒಂದಾದ ದನಬೆದರಿಸುವ ಸ್ಪರ್ಧೆಯನ್ನು ಸ್ಥಳೀಯವಾಗಿ ಕೊಬ್ಬರಿ ಹೋರಿ ಎಂದು ಕರೆಯಲಾಗುತ್ತದೆ. ಈ ಸ್ಪರ್ಧೆಗಾಗಿ ಎತ್ತುಗಳನ್ನು ವಿಶೇಷ ರೀತಿಯಲ್ಲಿ ಆರೈಕೆ ಮಾಡಿ ಸ್ಪರ್ಧೆಗಳಿಗೆ ಸಿದ್ಧಪಡಿಸಲಾಗುತ್ತದೆ. ಅಲ್ಲದೆ ಸ್ಪರ್ಧೆಯ ತಯಾರಿಯಾಗಿ ದಿನನಿತ್ಯ ಓಟ ಈಜು ಸೇರಿದಂತೆ ವಿವಿಧ ತಾಲೀಮು ಮಾಡಿಸಲಾಗುತ್ತದೆ.

ಇದನ್ನೂ ಓದಿ :ಮಿಂಚಿನ ಓಟ ನಿಲ್ಲಿಸಿದ ಸೊರಬದ ಚಾಮುಂಡಿ ಎಕ್ಸ್​ಪ್ರೆಸ್.. ಅಭಿಮಾನಿಗಳಿಂದ ಕಂಬನಿ

ABOUT THE AUTHOR

...view details