ಹಾವೇರಿ: ದಾವಣಗೆರೆಯಿಂದ ಹುಬ್ಬಳ್ಳಿಯವರೆಗೆ ಇದ್ದ ರಾಷ್ಟ್ರೀಯ ಹೆದ್ದಾರಿ ನಾಲ್ಕನ್ನು ಚತುಷ್ಪಥ ರಸ್ತೆಯಿಂದ ಷಟ್ಪಥವಾಗಿ ಮಾರ್ಪಡಿಸಲಾಗಿದೆ. ಬಹುತೇಕ ಕಾಮಗಾರಿ ಮುಕ್ತಾಯವಾಗಿದ್ದು, ಕೆಲವೊಂದು ಸಣ್ಣಪುಟ್ಟ ಕೆಲಸಗಳು ಬಾಕಿ ಉಳಿದಿವೆ. ಆದರೆ ಹಾವೇರಿ ಮತ್ತು ರಾಣೆಬೆನ್ನೂರು ನಡುವೆ ಬರುವ ಮೋಟೆಬೆನ್ನೂರು ಗ್ರಾಮಕ್ಕೆ ನಿರ್ಮಿಸಲಾಗುತ್ತಿರುವ ಮೇಲ್ಸೇತುವೆ ಕಾಮಗಾರಿ ಅರ್ಧಕ್ಕೆ ನಿಂತಿದೆ. ಗ್ರಾಮಕ್ಕೆ ಸಮರ್ಪಕ ಸರ್ವೀಸ್ ರಸ್ತೆ ಸಹ ನಿರ್ಮಾಣಗೊಂಡಿಲ್ಲ. ಪರಿಣಾಮ ಗ್ರಾಮದ ರೈತರು, ಸಾರ್ವಜನಿಕರು, ಪ್ರಯಾಣಿಕರು ನಿತ್ಯ ಪ್ರಾಣಭಯದಲ್ಲೇ ಓಡಾಡುವ ಸ್ಥಿತಿ ನಿರ್ಮಾಣವಾಗಿದೆ.
ಈ ಕುರಿತಂತೆ ಅಧಿಕಾರಿಗಳಿಗೆ, ಜನ ಪ್ರತಿನಿಧಿಗಳಿಗೆ ಹಲವು ಬಾರಿ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಆರೋಪಿಸುತ್ತಾರೆ ಸ್ಥಳೀಯರು. ಆದಷ್ಟು ಬೇಗ ಸೇತುವೆ ಸಂಪರ್ಕ ಕಲ್ಪಿಸಿ ಗ್ರಾಮಕ್ಕೆ ಸರ್ವೀಸ್ ರಸ್ತೆ ಮಾಡಿಕೊಡಿ, ಇಲ್ಲವಾದಲ್ಲಿ ಪ್ರತಿಭಟನೆಯ ಹಾದಿ ಹಿಡಿಯಬೇಕಾಗುತ್ತದೆ ಎಂದು ಸರ್ಕಾರಕ್ಕೆ ಎಚ್ಚರಿಕೆ ರವಾನಿಸಿದ್ದಾರೆ.
ರಾಷ್ಟ್ರೀಯ ಹೆದ್ದಾರಿ ನಾಲ್ಕನ್ನು ಚತುಷ್ಪಥದಿಂದ ಷಟ್ಪಥವಾಗಿ ನಿರ್ಮಿಸಲಾಗಿದೆ. ಪ್ರತಿ ಗ್ರಾಮಕ್ಕೂ ರಸ್ತೆ ಮೇಲ್ಸೇತುವೆ ನಿರ್ಮಿಸಿ ವಾಹನ ಸವಾರರಿಗೆ ಅನುಕೂಲ ಕಲ್ಪಿಸಲಾಗಿದೆ. ಆದರೆ ಮೋಟೆಬೆನ್ನೂರು ಗ್ರಾಮದ ಮೇಲ್ಸೇತುವೆ ಕಾಮಗಾರಿಗೆ ಮಾತ್ರ ಗರಬಡಿದಿದೆ. ಕಾಮಗಾರಿ ಟೆಂಡರ್ ಮುಗಿದಿದ್ದು, ಗುತ್ತಿಗೆದಾರರು ಜಾಗ ಖಾಲಿ ಮಾಡಿದ್ದಾರೆ. ಸೇತುವೆ ಕಾರ್ಯ ಅರ್ಧಕ್ಕೆ ನಿಂತಿದ್ದು, ಸರ್ವೀಸ್ ರಸ್ತೆಯನ್ನು ಸಹ ಸರಿಯಾಗಿ ನಿರ್ಮಿಸಿಲ್ಲ. ಪರಿಣಾಮ ಗ್ರಾಮ ದಾಟಲು ಎರಡು ಕಿ.ಮೀ ದೂರವನ್ನು ತಗ್ಗುದಿಣ್ಣೆಗಳಲ್ಲಿ ವಾಹನಗಳನ್ನು ದಾಟಿಸುವ ಅನಿವಾರ್ಯತೆ ಸವಾರರಿಗೆ ಎದುರಾಗಿದೆ.