ರಾಣೇಬೆನ್ನೂರು(ಹಾವೇರಿ):ರೈತರು ಕಷ್ಟಪಟ್ಟು ಬೆವರು ಸುರಿಸಿ ಬೆಳೆದಂತ ಮೆಕ್ಕೆಜೋಳದ ಬೆಲೆ ಈ ಬಾರಿ ಕೊರೊನಾ ಪಾತಾಳಕ್ಕೆ ತಳ್ಳಿದೆ. ಹೌದು ದೇಶಾದ್ಯಂತ ಕೊರೊನಾ ಎಂಬ ಮಹಾಮಾರಿ ಇಡೀ ವ್ಯಾಪಾರ ವಹಿವಾಟು ತಲ್ಲಣಗೊಳಿಸಿದ್ದು, ಇದೀಗ ರೈತರನ್ನು ಕಾಡುತ್ತಿದೆ.
ಕಳೆದ ಆರು ತಿಂಗಳಿಂದ ಕೊರೊನಾ ವೈರಸ್ ನಡುವೆ ರೈತರು ತಮ್ಮ ಕೃಷಿ ಚಟುವಟಿಕೆಗಳನ್ನು ಮಾಡಿದ್ದಾರೆ. ಅದರಲ್ಲಿ ಮೆಕ್ಕೆಜೋಳ, ಹತ್ತಿ, ಈರುಳ್ಳಿಯಂತಹ ಪ್ರಮುಖ ಬೆಳೆಯನ್ನು ಬೆಳೆದಿದ್ದಾರೆ. ಆದರೆ, ಇದೀಗ ಬೆಲೆ ಇಲ್ಲದೆ ಪರದಾಡುವಂತಹ ಸ್ಥಿತಿ ರೈತರಿಗೆ ಬಂದಿದೆ. ಮೆಕ್ಕೆಜೋಳ ಖರೀದಿಯಲ್ಲಿ ರಾಣೇಬೆನ್ನೂರಿನ ಮಾರುಕಟ್ಟೆ ಇಡೀ ರಾಜ್ಯಕ್ಕೆ ಹೆಸರಾಗಿದೆ. ಅಂತಹ ಮಾರುಕಟ್ಟೆಯಲ್ಲಿ ಮೆಕ್ಕೆಜೋಳ ಬೆಲೆ ಮಾತ್ರ ಪಾತಾಳ ಕಂಡಿದೆ.
ಸದ್ಯ ಮಾರುಕಟ್ಟೆಯಲ್ಲಿ ಒಳ್ಳೆಯ ಮೆಕ್ಕೆಜೋಳ ಬೆಲೆ ಪ್ರತಿ ಕ್ವಿಂಟಲ್ಗೆ 1100 -1401 ರೂ.ವರೆಗೆ ಮಾರಾಟವಾಗುತ್ತಿವೆ. ಕಳೆದ ಬಾರಿ ಹೋಲಿಸಿದರೆ ಈ ಬಾರಿ ಮೆಕ್ಕೆಜೋಳ ಬೆಲೆ ಸುಮಾರು 800 ರೂ ಕುಸಿತ ಕಂಡಿದೆ. ಇದರಿಂದ ರೈತರು ತೀವ್ರ ಸಂಕಷ್ಟಕ್ಕೆ ಒಳಗಾಗುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಸರ್ಕಾರ ಈಗಾಗಲೇ ಮೆಕ್ಕೆಜೋಳಕ್ಕೆ ಪ್ರತಿ ಕ್ವಿಂಟಲ್ಗೆ 1,825 ರೂ. ಬೆಂಬಲ ಬೆಲೆ ಘೋಷಣೆ ಮಾಡಿದೆ. ಆದರೆ, ಈವರೆಗೂ ಖರೀದಿ ಕೇಂದ್ರ ತೆರೆದಿಲ್ಲ. ಇದು ಸಹ ರೈತರಿಗೆ ತೀವ್ರವಾದ ಹಿನ್ನಡೆಯಾಗಿದ್ದು, ಸರ್ಕಾರ ಜಿಲ್ಲಾಡಳಿತ ಮೂಲಕ ಖರೀದಿ ಕೇಂದ್ರ ತೆರೆಯಬೇಕು ಎಂದು ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆ ಉಪಾಧ್ಯಕ್ಷ ಜಿ.ಜಿ.ಹೊಟ್ಟಿಗೌಡ್ರ ಆಗ್ರಹಿಸಿದರು.