ಉದ್ಘಾಟನೆಗೆ ಕಾಯುತ್ತಿರುವ ಹಾವೇರಿ ಮೆಡಿಕಲ್ ಕಾಲೇಜು ಹಾವೇರಿ :ಸುಮಾರು 400 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಹಾವೇರಿ ಮೆಡಿಕಲ್ ಕಾಲೇಜನ್ನು ಅದಷ್ಟು ಬೇಗ ಉದ್ಘಾಟನೆ ಮಾಡುವಂತೆ ಸರ್ಕಾರಕ್ಕೆ ಸಾರ್ವಜನಿಕರು ಆಗ್ರಹಿಸಿದ್ದಾರೆ. 2023ರ ಎಪ್ರಿಲ್‌ನಲ್ಲಿ ಮೆಡಿಕಲ್ ಕಾಲೇಜು ಲೋಕಾರ್ಪಣೆಗೊಳ್ಳಬೇಕಾಗಿತ್ತು. ಆದರೆ ಚುನಾವಣೆ ನೀತಿ ಸಂಹಿತಿ ಜಾರಿಗೆ ಬಂದಿದ್ದರಿಂದ ಉದ್ಘಾಟನೆಯನ್ನು ಮುಂದೂಡಲಾಗಿತ್ತು. ಪ್ರಸ್ತುತ ಅಧಿಕಾರದಲ್ಲಿರುವ ಕಾಂಗ್ರೆಸ್ ಸರ್ಕಾರ ಈಗಾಗಲೇ ಕಾಮಗಾರಿ ಪೂರ್ಣಗೊಂಡಿರುವ ಮೆಡಿಕಲ್ ಕಾಲೇಜು ಅನ್ನು ಉದ್ಘಾಟಿಸಲು ಏಕೆ ಮುಂದಾಗುತ್ತಿಲ್ಲ? ಎಂದು ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ.
ಜಿಲ್ಲೆಯಲ್ಲಿ ಮೆಡಿಕಲ್ ಕಾಲೇಜು ಇಲ್ಲದೇ ಇಲ್ಲಿಯ ರೋಗಿಗಳನ್ನು ದೂರದ ದಾವಣಗೆರೆ ಮತ್ತು ಹುಬ್ಬಳ್ಳಿ ಕಿಮ್ಸ್ಗೆ ಕಳಿಸಿಕೊಡಲಾಗುತ್ತಿದೆ. ಕೆಲವೊಂದು ರೋಗಿಗಳು ದಾರಿ ಮಧ್ಯದಲ್ಲಿಯೇ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಹಾಗಾಗಿ ಇಲ್ಲಿ ನಿರ್ಮಾಣಗೊಂಡಿರುವ ಮೆಡಿಕಲ್ ಕಾಲೇಜು ಆರಂಭವಾದರೆ ಜಿಲ್ಲೆಯ ಜನರ ಪ್ರಾಣಹಾನಿ ತಪ್ಪಿಸಬಹುದು ಎನ್ನುತ್ತಿದ್ದಾರೆ ಇಲ್ಲಿನ ಬಿಜೆಪಿ ಜಿಲ್ಲಾಧ್ಯಕ್ಷ ಸಿದ್ದರಾಜ್ ಕಲಕೋಟಿ.
ಹಾವೇರಿ ಜಿಲ್ಲೆ ನೂತನವಾಗಿ ಆರಂಭವಾದಾಗ ನಗರದಿಂದ ದೂರ 8 ಕಿ.ಮೀ ದೂರದ ಕೆರಿಮತ್ತಿಹಳ್ಳಿ ಗ್ರಾಮದಲ್ಲಿ ಎಸ್ಪಿ ಕಚೇರಿ ನಿರ್ಮಾಣಗೊಂಡಿತ್ತು. ಇದು ಜನರಿಗೆ ಮತ್ತು ಸಿಬ್ಬಂದಿಗೆ ತಲೆನೋವಾಗಿ ಪರಿಣಮಿಸಿತ್ತು. ಇದನ್ನರಿತ ಸರ್ಕಾರ ಎಸ್ಪಿ ಕಚೇರಿಯನ್ನು ಹಾವೇರಿ ನಗರದ ಹೃದಯಭಾಗದಲ್ಲಿರುವ ಹಳೆಯ ಕೋರ್ಟ್ ಕಟ್ಟಡಕ್ಕೆ ಸ್ಥಳಾಂತರಿಸಿತ್ತು. ಅಲ್ಲದೆ ಅಂದಿನ ಸಿಎಂ ಬಸವರಾಜ ಬೊಮ್ಮಾಯಿ ಸರ್ಕಾರ ಹಳೆಯ ಪಿಬಿ ರಸ್ತೆಯಲ್ಲಿ ಸುಮಾರು 19 ಕೋಟಿ ರೂಪಾಯಿ ಖರ್ಚು ಮಾಡಿ ನೂತನ ಎಸ್ಪಿ ಕಚೇರಿ ನಿರ್ಮಾಣಕ್ಕೆ ಮುಂದಾಗಿತ್ತು. ಸರ್ಕಾರದ ನಿರ್ದೇಶನದ ಮೇರೆಗೆ ಎಸ್ಪಿ ಕಚೇರಿ ಸಹ ನಿರ್ಮಾಣಗೊಂಡಿದೆ.
ಆದರೆ, ನಿರ್ಮಾಣವಾಗಿ ತಿಂಗಳು ಕಳೆದರೂ ಎಸ್ಪಿ ಕಚೇರಿಯ ಉದ್ಘಾಟನೆಗೆ ಕಾಲ ಕೂಡಿ ಬಂದಿಲ್ಲ. ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಮಹಾತ್ಮ ಗಾಂಧೀಜಿ ಆಗಮಿಸಿದ್ದ ಐತಿಹಾಸಿಕ ಸ್ಥಳದಲ್ಲಿ ಸುಮಾರು 3 ಕೋಟಿ ರೂಪಾಯಿ ಖರ್ಚು ಮಾಡಿ ಗಾಂಧಿ ಭವನ ನಿರ್ಮಿಸಲಾಗಿದೆ. ಗಾಂಧಿ ಭವನ ನಿರ್ಮಾಣವಾಗಿ ಆರು ತಿಂಗಳಾದರೂ ಈ ಭವನಕ್ಕೆ ಉದ್ಘಾಟನೆಯ ಭಾಗ್ಯ ಕೂಡಿ ಬಂದಿಲ್ಲ. ಇದೇ ರೀತಿ ನಿರ್ಮಾಣಗೊಂಡಿರುವ ವಿಜ್ಞಾನ ಭವನ, ಪೊಲೀಸ್ ವಸತಿಗೃಹಗಳ ಕಾಮಗಾರಿ ಪೂರ್ಣಗೊಂಡಿದ್ದರೂ ಸಹ ಉದ್ಘಾಟನೆಯಾಗಿಲ್ಲ. ಜಿಲ್ಲೆಯ ಜನರ ಅನುಕೂಲಕ್ಕಾಗಿ ಆಡಳಿತ ಯಂತ್ರ ಚುರುಕಾಗಲಿ. ಕಟ್ಟಡಗಳನ್ನು ಉದ್ಘಾಟಿಸಿ ಸಾರ್ವಜನಿಕರಿಗೆ ಮುಕ್ತಗೊಳಿಸುವ ಮೂಲಕ ಆಡಳಿತ ಯಂತ್ರ ಚುರುಕುಗೊಳಿಸುಬೇಕು ಎಂದು ಸಿದ್ದರಾಜ್ ಕಲಕೋಟಿ ಒತ್ತಾಯಿಸಿದ್ದಾರೆ.
1998 ರಲ್ಲಿ ಅಖಂಡ ಧಾರವಾಡ ಜಿಲ್ಲೆಯಿಂದ ಬೇರ್ಪಟ್ಟು ಹಾವೇರಿ ನೂತನ ಜಿಲ್ಲೆಯಾಯಿತು. ಹಾವೇರಿಯಲ್ಲಿಯೇ ಇದ್ದ ಹಲವು ಕಚೇರಿಗಳಲ್ಲಿ ನೂತನ ಜಿಲ್ಲಾ ಕಚೇರಿಗಳು ಕಾರ್ಯನಿರ್ವಹಿಸಲಾರಂಭಿಸಿದವು. ಆದರೆ ಜಿಲ್ಲಾ ಕೇಂದ್ರ ಹಾವೇರಿಯಲ್ಲಿ ವೈದ್ಯಕೀಯ ಮಹಾವಿದ್ಯಾಲಯ ಇಲ್ಲ ಎಂಬುದು ಜನರದ್ದು ಒಂದೇ ಕೊರಗಾಗಿತ್ತು. ಇದಕ್ಕಾಗಿ ಸಾಕಷ್ಟು ಹೋರಾಟ ಮಾಡಿದ್ದರಿಂದ 2013 ರಲ್ಲಿ ಬಿಜೆಪಿ ಸರ್ಕಾರ ಹಾವೇರಿಗೆ ಮೆಡಿಕಲ್ ಕಾಲೇಜು ಮಂಜೂರು ಮಾಡಿತ್ತು.
ಆದರೆ 2013 ರಲ್ಲಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರ ಹಾವೇರಿ ಜಿಲ್ಲೆಗೆ ಮಂಜೂರಾಗಿದ್ದ ಮೆಡಿಕಲ್ ಕಾಲೇಜನ್ನು ಗದಗ ಜಿಲ್ಲೆಗೆ ವರ್ಗಾಯಿಸಿತ್ತು. ಆದರೆ 2020 ರಲ್ಲಿ ಬಿಜೆಪಿ ಸರ್ಕಾರ ಅಂದಿನ ಸಿಎಂ ಬಿ ಎಸ್ ಯಡಿಯೂರಪ್ಪ ಅವರು ಹಾವೇರಿಗೆ ನೂತನ ಮೆಡಿಕಲ್ ಕಾಲೇಜು ಮಂಜೂರು ಮಾಡಿದ್ದರು. ನಂತರ ಬಂದ ಹಾವೇರಿ ಜಿಲ್ಲೆಯವರೇ ಆದ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಮೆಡಿಕಲ್ ಕಾಲೇಜಿಗೆ ಅನುದಾನ ನೀಡಿ ಕಟ್ಟಡದ ಕಾಮಗಾರಿ ಚುರುಕುಗೊಳಿಸಿದ್ದರು. ಅಂದುಕೊಂಡಂತೆ ಆಗಿದ್ದರೆ ಈ ಸಾಲಿನಲ್ಲಿ ಕಾಲೇಜು ಲೋಕಾರ್ಪಣೆಗೊಳ್ಳಬೇಕಾಗಿತ್ತು. ಆದರೆ ಚುನಾವಣೆ ನೀತಿ ಸಂಹಿತಿ ಜಾರಿಗೆ ಬಂದಿದ್ದರಿಂದ ಉದ್ಘಾಟನೆ ಮುಂದಕ್ಕೆ ಹಾಕಲಾಯಿತು. ಇದೀಗ ಕಾಂಗ್ರೆಸ್ ಸರ್ಕಾರ ಮೆಡಿಕಲ್ ಕಾಲೇಜು ಉದ್ಘಾಟನೆ ಮಾಡುವುದಕ್ಕೆ ಹಿಂದೇಟು ಹಾಕುತ್ತಿದೆ ಎಂದು ಸ್ಥಳೀಯರಾದ ಶಶಿಧರ್ ಎಂಬುವರು ಆರೋಪಿಸಿದ್ದಾರೆ.
ಇದನ್ನೂ ಓದಿ :ವಸತಿ ಶಾಲೆ ವಿದ್ಯಾರ್ಥಿಗಳನ್ನು ಮಲದ ಗುಂಡಿಗೆ ಇಳಿಸಿ ಕ್ಲೀನಿಂಗ್; ಕೋಲಾರದಲ್ಲಿ ಅಮಾನವೀಯ ಘಟನೆ