ಕರ್ನಾಟಕ

karnataka

ETV Bharat / state

ರಾಣೆಬೆನ್ನೂರಿನ ದೊಡ್ಡ ಕೆರೆ ಕಾಮಗಾರಿ ಮುಗಿಯೋದು ಯಾವಾಗ? ಸ್ಥಳೀಯರಿಂದ ಆಕ್ರೋಶ - ಅರಣ್ಯನಾಶ

ಕೆರೆ ಅಭಿವೃದ್ಧಿ ಜೊತೆಗೆ ಕೆರೆ ಪ್ರದೇಶವನ್ನು ಪ್ರವಾಸಿ ತಾಣ ಮಾಡೋದು ಸರ್ಕಾರದ ಉದ್ದೇಶ. ಕಳೆದ ಕೆಲವು ತಿಂಗಳಿಂದ ಕೆರೆ ಅಭಿವೃದ್ಧಿ ಕಾಮಗಾರಿ ಮಾಡಲಾಗ್ತಿದೆ. ಆದ್ರೆ, ಕಾರ್ಯವು ಮಂದಗತಿಯಲ್ಲಿ ಸಾಗ್ತಿದ್ದು, ಜನ ಹಿಡಿಶಾಪ ಹಾಕುವಂತಾಗಿದೆ.

ಕೆರೆ ಅಭಿವೃದ್ಧಿ ಕಾಮಗಾರಿ

By

Published : Jun 9, 2019, 1:10 PM IST

ಹಾವೇರಿ:ಇತ್ತಿಚೇಗೆ ಮಾನವನ ದುರಾಸೆಗೆ ಪರಿಸರ ನಾಶವಾಗುತ್ತಿದ್ದು, ಬೆಂಬಿಡದೆ ಕಾಡುವ ಬರದ ಜೊತೆ ಅರಣ್ಯ ನಾಶದಿಂದ ಒಡಲು ತುಂಬಿಕೊಂಡಿದ್ದ ಕೆರೆಗಳು ಬರಡಾಗುತ್ತಿವೆ. ಈ ಸಾಲಿಗೆ ಹಾವೇರಿ ಜಿಲ್ಲೆಯ ರಾಣೆಬೆನ್ನೂರಿನ ದೊಡ್ಡ ಕೆರೆಯೂ ಸೇರ್ಪಡೆಯಾಗ್ತಿದೆ.

ಹೌದು, ಈ ಕೆರೆ ತುಂಬಿದ್ರೆ ನಗರದ ಜನರಿಗೆ ಕುಡಿಯೋಕೆ ನೀರು ಸಿಗುತ್ತೆ. ರೈತರ ಜಮೀನುಗಳಿಗೆ ನೀರಾವರಿ ಸೌಲಭ್ಯ ಆಗುತ್ತೆ. ಆದ್ರೆ, ಕಳೆದ ಕೆಲ ವರ್ಷಗಳಿಂದ ಕೆರೆ ಅಭಿವೃದ್ಧಿ ಕಾಣದೆ ಜನರ ಪಾಲಿಗೆ ಈ ಕೆರೆ ಇದ್ದೂ ಇಲ್ಲದಂತಾಗಿದೆ.

ಕೆರೆ ಹೂಳೆತ್ತಿ, ಕೆರೆ ಅಭಿವೃದ್ಧಿ ಮಾಡಿ ಎಂದು ಜನರು ಸರ್ಕಾರದ ದುಂಬಾಲು ಬಿದ್ದಿದ್ದರು. ಇದರಿಂದ ಎಚ್ಚೆತ್ತ ಸರ್ಕಾರ ದೊಡ್ಡ ಕೆರೆಗೆ ಕಾಯಕಲ್ಪ ನೀಡಲು ಮುಂದಾಗಿದೆ. ಕೋಟಿ ಕೋಟಿ ಹಣ ಖರ್ಚು ಮಾಡಿ ಕೆರೆ ಅಭಿವೃದ್ಧಿ ಮಾಡುತ್ತಿದೆ. ಕೆರೆ ಅಭಿವೃದ್ಧಿ ಜೊತೆಗೆ ಕೆರೆ ಪ್ರದೇಶವನ್ನು ಪ್ರವಾಸಿ ತಾಣ ಮಾಡೋದು ಸರ್ಕಾರದ ಉದ್ದೇಶ. ಕಳೆದ ಕೆಲವು ತಿಂಗಳಿಂದ ಕೆರೆ ಅಭಿವೃದ್ಧಿ ಕಾಮಗಾರಿ ಮಾಡಲಾಗ್ತಿದೆ. ಆದ್ರೆ, ಹಲವಾರು ಕಾಮಗಾರಿಗಳಂತೆ ಈ ಅಭಿವೃದ್ಧಿ ಕಾರ್ಯವು ಮಂದಗತಿಯಲ್ಲಿ ಸಾಗ್ತಿದ್ದು, ಜನ ಹಿಡಿಶಾಪ ಹಾಕುವಂತಾಗಿದೆ.

ಕೆರೆ ಅಭಿವೃದ್ಧಿ ಕಾಮಗಾರಿ

ದೊಡ್ಡಕೆರೆ ಸುಮಾರು 250 ಎಕರೆಗೂ ಅಧಿಕ ವಿಸ್ತೀರ್ಣ ಹೊಂದಿದೆ. ಒಂದು ಕಾಲದಲ್ಲಿ ಈ ಕೆರೆ ಇಡೀ ನಗರದ ಜನರಿಗೆ ಕುಡಿಯೋ ನೀರು ಒದಗಿಸುತ್ತಿತ್ತು. ಕೆರೆಯ ಸುತ್ತಮುತ್ತಲಿನ ನೂರಾರು ರೈತರ ಕೃಷಿಗೆ ಸಹಕಾರಿಯಾಗಿತ್ತು. ಆದ್ರೆ, ಇತ್ತಿಚೀನ ಕೆಲವು ವರ್ಷಗಳಿಂದ ಉಂಟಾದ ಭೀಕರ ಬರದಿಂದ ಕೆರೆಯಲ್ಲಿ ನೀರಿನ ಪ್ರಮಾಣ ಸಂಪೂರ್ಣ ಕಡಿಮೆಯಾಗಿದೆ. ಈಗ ರಾಣೆಬೆನ್ನೂರು ನಗರ ಅಮೃತಸಿಟಿ ಯೋಜನೆಗೆ ಆಯ್ಕೆ ಆಗಿದೆ. ಹೀಗಾಗಿ ಈ ಯೋಜನೆಯಡಿ ಕೋಟ್ಯಂತರ ರೂ. ಅನುದಾನ ಹಾಗೂ ನಗರಸಭೆಯ ಅನುದಾನದಲ್ಲಿ ಕೆರೆ ಅಭಿವೃದ್ಧಿ ಕಾಮಗಾರಿ ಮಾಡಲಾಗ್ತಿದೆ.

ಕೆರೆ ಅಭಿವೃದ್ಧಿ ಮಾಡಿ, ಕೆರೆಗೆ ನೀರು ತುಂಬಿಸುವುದರ ಜೊತೆಗೆ ಕೆರೆಯ ಸುತ್ತ ಸುಂದರ ಉದ್ಯಾನ ನಿರ್ಮಿಸಿ ಉತ್ತಮ ಪ್ರವಾಸಿ ತಾಣ ಮಾಡೋದು ಯೋಜನೆಯ ಉದ್ದೇಶ. ಆದ್ರೆ, ಕೆರೆ ಒತ್ತುವರಿ ಆಗಿದ್ದು, ಅದನ್ನು ತೆರವು ಮಾಡಿ ಕೆರೆಗೆ ಕಂಪೌಂಡ್ ಅಥವಾ ತಂತಿ ಬೇಲಿ ನಿರ್ಮಿಸಬೇಕು ಎಂಬ ಒತ್ತಾಯ ಕೇಳಿ ಬರುತ್ತಿದೆ.

ಇತ್ತ ಮಳೆಗಾಲ ಆರಂಭವಾಗುವ ಹಿನ್ನೆಲೆಯಲ್ಲಿ ಮಂದಗತಿಯಲ್ಲಿ ಸಾಗಿರೋ ಕಾಮಗಾರಿ ಸದ್ಯಕ್ಕೆ ಮುಗಿಯೋ ಲಕ್ಷಣಗಳು ಕಾಣುತ್ತಿಲ್ಲ. ಇದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳನ್ನು ಕೇಳಿದ್ರೆ ಐದಾರು ತಿಂಗಳಲ್ಲಿ ಕೆರೆ ಅಭಿವೃದ್ಧಿ ಕಾಮಗಾರಿ ಮುಗಿಯಲಿದೆ ಎನ್ನುತ್ತಿದ್ದಾರೆ.

ABOUT THE AUTHOR

...view details