ರಾಣೆಬೆನ್ನೂರು :ಉತ್ತರ ಭಾರತದಲ್ಲಿ ಗಂಗಾ ನದಿಗೆ ಗಂಗಾರತಿ ಮಾಡಲಾಗುತ್ತದೆ. ಅದೇ ರೀತಿ ದಕ್ಷಿಣ ಭಾರತದಲ್ಲಿ ತುಂಗಭದ್ರಾ ನದಿಗೆ ತುಂಗಾರತಿ ಮಾಡಲು ಫೆ.28ರಂದು ಪುಣ್ಯಕೋಟಿ ಮಠ ಸಜ್ಜಾಗಿದೆ. ರಾಣೆಬೆನ್ನೂರು ನಗರದಿಂದ 18 ಕಿ.ಮೀ ದೂರವಿರುವ ಕೋಡಿಯಾಲ ಹೊಸಪೇಟೆಯ ತುಂಗಭದ್ರಾ ನದಿಯ ದಡದ ಮೇಲೆ ನಿಂತಿರುವ ತಪೋಕ್ಷೇತ್ರ ಪುಣ್ಯಕೋಟಿ ಮಠದಲ್ಲಿ ತುಂಗಾರತಿ ಕಾರ್ಯಕ್ರಮ ನಡೆಯಲಿದೆ.
ಭೂಮಾತೆ, ಗೋಮಾತೆ, ಗಂಗಾಮಾತೆ ಸ್ಮರಿಸುವಂತಹ ನಿಸರ್ಗ ಮಾತೆಯನ್ನು ಗೌರವಿಸುವಂತಹ ಒಂದು ಕಾರ್ಯಕ್ರಮ ಇದಾಗಿದೆ. ಉತ್ತರ ಭಾರತದ ಹರಿದ್ವಾರ, ಋಷಿಕೇಶ, ಕಾಶಿ ಕ್ಷೇತ್ರಗಳಲ್ಲಿ ಐತಿಹಾಸಿಕ ಗಂಗಾನದಿಗೆ ಗಂಗಾರತಿ ಮೂಲಕ ಪೂಜಿಸಲಾಗುತ್ತದೆ.
ಅದರಂತೆ ದಕ್ಷಿಣ ಭಾರತದಲ್ಲಿ ಹರಿಯುವ ನದಿಗಳಲ್ಲಿ ಯಾವುದೇ ಆರತಿ ಬೆಳಗುತ್ತಿಲ್ಲ. ಈ ಹಿನ್ನೆಲೆ ಕೋಡಿಯಾಲ ಹೊಸಪೇಟೆ ಕ್ಷೇತ್ರದಲ್ಲಿ ಉತ್ತಾರಭಿಮುಖವಾಗಿ ಹರಿಯುತ್ತಿರುವ ತುಂಗಭದ್ರಾ ನದಿಗೆ ತುಂಗಾರತಿ ಮಾಡಲಾಗುತ್ತದೆ ಎಂದು ಪೂಜ್ಯಶ್ರೀ ಬಾಲಯೋಗಿ ಜಗದೀಶ್ವರ ಅಪ್ಪಾಜಿ ಹೇಳಿದ್ದಾರೆ.