ಹಾವೇರಿ :ಆಸ್ತಿ ವಿಚಾರಕ್ಕೆ ಸಂಬಂಧಿಸಿದಂತೆ ಜಿಲ್ಲೆಯ ಹಾನಗಲ್ ತಾಲೂಕಿನ ಬಾಳಂಬೀಡ ಗ್ರಾಮದಿಂದ ಇದೇ ತಿಂಗಳು 14 ರಂದು ಅಪಹರಣಕ್ಕೊಳಗಾಗಿದ್ದ 98 ವರ್ಷ ವಯಸ್ಸಿನ ವೃದ್ಧೆ ಪತ್ತೆಯಾಗಿದ್ದಾರೆ. ನಿನ್ನೆ ತಡರಾತ್ರಿ ಆರೋಪಿಗಳು ವೃದ್ಧೆಯನ್ನ ಗ್ರಾಮಕ್ಕೆ ತಂದು ಬಿಟ್ಟು ಹೋಗಿದ್ದಾರೆ. ಸದ್ಯ ಅಜ್ಜಿ ಆಡೂರು ಪೊಲೀಸ್ ಠಾಣೆಯಲ್ಲಿದ್ದಾರೆ.
ಹಾವೇರಿ: ಆಸ್ತಿ ವಿಚಾರಕ್ಕೆ ಅಪಹರಣಕ್ಕೊಳಗಾಗಿದ್ದ ವೃದ್ಧೆ ಪತ್ತೆ - ವೃದ್ಧೆ ಪತ್ತೆ
ಆಸ್ತಿ ವಿಚಾರಕ್ಕೆ ಸಂಬಂಧಿಸಿದಂತೆ ಅಪಹರಣಕ್ಕೆ ಒಳಗಾಗಿದ್ದ ವೃದ್ಧೆ ಪತ್ತೆಯಾಗಿದ್ದಾರೆ. ನಿನ್ನೆ ತಡರಾತ್ರಿ ಆರೋಪಿಗಳು ವೃದ್ಧೆಯನ್ನು ತಂದು ಹಾವೇರಿ ಜಿಲ್ಲೆಯ ಬಾಳಂಬೀಡ ಗ್ರಾಮದಲ್ಲಿ ಬಿಟ್ಟು ಹೋಗಿದ್ದಾರೆ. ಪ್ರಕರಣ ಸಂಬಂಧ ಐದು ಜನರ ವಿರುದ್ಧ ದೂರು ದಾಖಲಾಗಿದೆ.
ಆಸ್ತಿಗಾಗಿ ವೃದ್ಧೆ ಕಿಡ್ನಾಪ್ : ಇದೇ ತಿಂಗಳು ಡಿಸೆಂಬರ್ 14 ರಂದು ವೃದ್ಧೆ ದೇವಕ್ಕನನ್ನ ಕಿಡ್ನಾಪ್ ಮಾಡಲಾಗಿತ್ತು. ಏಳು ಎಕರೆ ಆಸ್ತಿಗಾಗಿ ಐವರು ಸೇರಿ ಅಪಹರಣ ಮಾಡಿದ್ದರು. ಘಟನೆಯ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿತ್ತು. ಸದ್ಯ ಪೊಲೀಸ್ ಠಾಣೆಗೆ ಸಂಬಂಧಿಕರು ಬಂದು ಮಾತನಾಡಿಸ್ತಿದ್ದಂತೆ ವೃದ್ಧೆ ಕಣ್ಣೀರು ಹಾಕಿದ್ದಾರೆ. ವೃದ್ಧೆಯನ್ನ ಕಂಡ ಸಂಬಂಧಿಕರು ಹರ್ಷಗೊಂಡು ಕಾಲಿಗೆ ಬಿದ್ದು ಆಶೀರ್ವಾದ ಪಡೆದುಕೊಂಡರು.
ಪ್ರಕರಣದ ಹಿನ್ನೆಲೆ :ವೃದ್ಧೆ ದೇವಕ್ಕನಿಗೆ ಸಂತಾನ ಇಲ್ಲದ್ದರಿಂದ ಮಾಣಿಕಪ್ಪ ದುಂಡಣ್ಣನವರ ಎಂಬುವರಿಗೆ ಆಸ್ತಿ ಬರೆದು ಕೊಟ್ಟಿದ್ದಳು. ಮಾಣಿಕಪ್ಪ ಕುಟುಂಬದ ಸದಸ್ಯರು ಹಲವು ವರ್ಷಗಳಿಂದ ವೃದ್ಧೆಯನ್ನ ಆರೈಕೆ ಮಾಡಿಕೊಂಡು ಬಂದಿದ್ದರು. ಆಸ್ತಿ ಕೊಟ್ಟಿದ್ದಕ್ಕೆ ದೇವಕ್ಕನ ಕುಟುಂಬದವರು ವಿರೋಧ ವ್ಯಕ್ತಪಡಿಸಿದ್ದರು. ವೃದ್ಧೆಯ ಸಂಬಂಧಿಕರಾದ ಸಂತೋಷ, ಈರಪ್ಪ, ಆದಪ್ಪ, ಪ್ರಕಾಶ ಮತ್ತು ಮಂಜಪ್ಪ ಎಂಬುವರ ವಿರುದ್ಧ ಆಡೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.