ಹಾವೇರಿ:ಜಿಲ್ಲೆಯ 6 ವಿಧಾನಸಭಾ ಕ್ಷೇತ್ರಗಳಲ್ಲಿ ಮೊದಲ ಹೈವೋಲ್ಟೇಜ್ ಕ್ಷೇತ್ರ ಶಿಗ್ಗಾಂವಿ ಸವಣೂರು ಆಗಿದ್ದರೆ, ಎರಡನೇಯದು ಹಿರೇಕೆರೂರು. ಹಿರೇಕೆರೂರು ಮತ್ತು ರಟ್ಟಿಹಳ್ಳಿ ತಾಲೂಕುಗಳಿರುವ ಈ ಕ್ಷೇತ್ರದಲ್ಲಿ ಪ್ರಸ್ತುತ ಕೃಷಿ ಸಚಿವ ಬಿ.ಸಿ.ಪಾಟೀಲ್ ಹಾಲಿ ಶಾಸಕರು. ಇವರಿಗೆ ಬಿಜೆಪಿ ಟಿಕೆಟ್ ಪಕ್ಕಾ ಆಗಿದ್ದು, ಇವರ ವಿರುದ್ದ ಮಾಜಿ ಶಾಸಕ ಯು.ಬಿ.ಬಣಕಾರ್ ತೊಡೆ ತಟ್ಟಿದ್ದಾರೆ.
ಕಳೆದ ಬಾರಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮಾತಿನಂತೆ ಬಿ.ಸಿ.ಪಾಟೀಲ್ ಅವರಿಗೆ ನೆರವಾಗಿದ್ದ ಯು.ಬಿ.ಬಣಕಾರ್ ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದ್ದಾರೆ. ಪ್ರಸ್ತುತ 2023ರ ವಿಧಾನಸಭೆ ಚುನಾವಣೆಯಲ್ಲಿ ಹಿರೇಕೆರೂರು ಕಾಂಗ್ರೆಸ್ ಅಭ್ಯರ್ಥಿಯಾಗಿ ಅವರ ಹೆಸರನ್ನು ಘೋಷಿಸಲಾಗಿದೆ. ಕಳೆದ ಉಪ ಚುನಾವಣೆಯಲ್ಲಿ ಜೋಡಿ ಎತ್ತಿನಂತೆ ದುಡಿದಿದ್ದ ಪಾಟೀಲ್ ಮತ್ತು ಬಣಕಾರ್ ಇದೀಗ ಎದುರಾಳಿಗಳು.
ಹಿರೇಕೆರೂರು ವಿಧಾನಸಭಾ ಕ್ಷೇತ್ರದ ಮಾಹಿತಿ ಕ್ಷೇತ್ರದ ರಾಜಕೀಯ ಇತಿಹಾಸ: ಹಿರೇಕೆರೂರು ವಿಧಾನಸಭಾ ಕ್ಷೇತ್ರವು 1957ರಿಂದ ಇಲ್ಲಿಯವರೆಗೆ 2019ರ ಉಪಚುನಾವಣೆಗಳೂ ಸೇರಿ ಒಟ್ಟು 15 ಚುನಾವಣೆಗಳನ್ನು ಕಂಡಿದೆ. ಇದರಲ್ಲಿ ಕಾಂಗ್ರೆಸ್ ಒಟ್ಟು ಆರು ಬಾರಿ ಗೆಲುವು ಸಾಧಿಸಿದೆ. ಮೂರು ಸಲ ಪಕ್ಷೇತರರು, ಎರಡು ಬಾರಿ ಬಿಜೆಪಿ ಅಭ್ಯರ್ಥಿಗಳು ಜಯ ಗಳಿಸಿದ್ದಾರೆ. ಜೆಡಿಎಸ್, ಕೆಜೆಪಿ, ಜೆಎನ್ಪಿ ಮತ್ತು ಜನತಾ ದಳ ತಲಾ ಒಂದೊಂದು ಬಾರಿ ಗೆದ್ದಿವೆ.
1957ರಿಂದ 1968ರವರೆಗೆ ಕಾಂಗ್ರೆಸ್‌ನ ಶಂಕರರಾವ್ ಗುಬ್ಬಿ ಶಾಸಕರಾಗಿ ಆಯ್ಕೆಯಾಗಿದ್ದರು. 1972ರಲ್ಲಿ ಪ್ರಥಮ ಬಾರಿಗೆ ಬಿ.ಜಿ.ಬಣಕಾರ ಕಾಂಗ್ರೆಸ್‌ನಿಂದ ಶಾಸಕರಾಗಿದ್ದರು. ಇದಾದ ನಂತರ 1978ರಲ್ಲಿ ಶಂಕರರಾವ್ ಬಿ.ಜೆ.ಬಣಕಾರ್ ಅವರಿಗೆ ಸೋಲಿನ ರುಚಿ ತೋರಿಸಿ ಮತ್ತೆ ಶಾಸಕರಾದರು. ನಂತರ 1983 (ಪಕ್ಷೇತರ) ಮತ್ತು 1985 (ಜನತಾದಳ)ದಲ್ಲಿ ಬಣಕಾರ ಶಾಸಕರಾಗಿ ಆಯ್ಕೆಯಾಗಿದ್ದರು. 1989ರಲ್ಲಿ ಬಿ.ಹೆಚ್.ಬನ್ನಿಕೋಡ್ ಜನತಾ ದಳದಿಂದ ಶಾಸಕರಾಗಿದ್ದರು.
1957ರಿಂದ 2018ರವರೆಗೆ ಪಕ್ಷಗಳು ಪಡೆದ ಶೇಕಡಾವಾರು ಮತಗಳ ವಿವರ 1994ರಲ್ಲಿ ಬಿ.ಜೆ.ಬಣಕಾರ್ ಪುತ್ರ ಯು.ಬಿ.ಬಣಕಾರ್ ಪ್ರಥಮ ಬಾರಿಗೆ ಬಿಜೆಪಿ ಶಾಸಕರಾಗಿ ಆಯ್ಕೆಗೊಂಡರು. 1999ರಲ್ಲಿ ಬಿ.ಹೆಚ್.ಬನ್ನಿಕೋಡ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆಲುವು ಸಾಧಿಸಿದ್ದರು. 2004ರಲ್ಲಿ ಬಿ.ಸಿ.ಪಾಟೀಲ್ ಜೆಡಿಎಸ್‌ನಿಂದ ಮತ್ತು 2008ರಲ್ಲಿ ಕಾಂಗ್ರೆಸ್‌ನಿಂದ ಶಾಸಕರಾಗಿದ್ದರು. 2013ರಲ್ಲಿ ಕೆಜೆಪಿಯಿಂದ ಯು.ಬಿ.ಬಣಕಾರ್ ಗೆದ್ದಿದ್ದರು. 2018ರಲ್ಲಿ ಕಾಂಗ್ರೆಸ್‌ನಿಂದ ಬಿ.ಸಿ.ಪಾಟೀಲ್ ಮತ್ತೆ ಆಯ್ಕೆಯಾಗಿದ್ದರು. ಆದರೆ, ಇದರ ನಡುವೆ ಬದಲಾದ ರಾಜಕೀಯ ವಿದ್ಯಮಾನದಿಂದ ಇವರು ಕಾಂಗ್ರೆಸ್ ರಾಜೀನಾಮೆ ನೀಡಿದ್ದರು. 2019ರಲ್ಲಿ ನಡೆದ ಉಪ ಚುನಾವಣೆಯಲ್ಲಿ ಬಿಜೆಪಿಯಿಂದ ಬಿ.ಸಿ.ಪಾಟೀಲ್ ಕಣಕ್ಕಿಳಿದು ಶಾಸಕರಾಗಿ ಆಯ್ಕೆಯಾಗಿ ಕೃಷಿ ಸಚಿವರಾದರು.
ಬಿ.ಸಿ.ಪಾಟೀಲ್-ಬಣಕಾರ್ಗೆ ಪ್ರತಿಷ್ಠೆಯ ಕಣ:2004ರಲ್ಲಿ ಹಿರೇಕೆರೂರು ಕ್ಷೇತ್ರಕ್ಕೆ ಎಂಟ್ರಿ ಕೊಟ್ಟ ನಟ ಬಿ.ಸಿ.ಪಾಟೀಲ್ ಇದುವರೆಗೆ ನಾಲ್ಕು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಆದರೆ, ಎರಡು ಬಾರಿ ಕಾಂಗ್ರೆಸ್ ಮತ್ತು ತಲಾ ಒಂದೊಂದು ಬಾರಿ ಜೆಡಿಎಸ್ ಮತ್ತು ಬಿಜೆಪಿಯಿಂದ ಗೆದ್ದಿದ್ದಾರೆ. ಈಗ ಮತ್ತೆ ಬಿಜೆಪಿಯಿಂದ ಸ್ಪರ್ಧೆಗೆ ಸನ್ನದ್ಧರಾಗಿದ್ದಾರೆ. ಈ ಬಾರಿ ಇವರ ಎದುರಾಳಿಯಾದ ಯು.ಬಿ.ಬಣಕಾರ್ ಕೂಡ ಎರಡು ಬಾರಿ ಆಯ್ಕೆಯಾಗಿದ್ದಾರೆ. ಬಿ.ಸಿ.ಪಾಟೀಲರಿಗಿಂತ 10 ವರ್ಷ ಮೊದಲೇ ಕ್ಷೇತ್ರದಲ್ಲಿ ಯು.ಬಿ.ಬಣಕಾರ್ ಶಾಸಕರಾಗಿ ಆಯ್ಕೆಯಾಗಿ ಕಾರ್ಯನಿರ್ವಹಿಸಿದ್ದಾರೆ.
ಕಳೆದ ಐದು ಚುನಾವಣೆಗಳಲ್ಲಿ ಪಕ್ಷಗಳ ಬಲಾಬಲ ಮತ್ತೊಂದೆಡೆ ಜೆಡಿಎಸ್‌ನಿಂದ ಜೆ.ಕೆ.ಜಾವಜ್ಜನವರ್ ಸ್ಪರ್ಧಿಸುತ್ತಿದ್ದಾರೆ. ಮೇಲ್ನೋಟಕ್ಕೆ ತ್ರಿಕೋನ ಸ್ಪರ್ಧೆ ಕ್ಷೇತ್ರದಲ್ಲಿ ಕಂಡು ಬಂದರೂ ಈ ಸಲ ಚುನಾವಣಾ ಕಣವು ಬಿ.ಸಿ.ಪಾಟೀಲ್ ಹಾಗೂ ಬಣಕಾರ್ ನಡುವೆ ಜಿದ್ದಾಜಿದ್ದು ಖಾತ್ರಿಯಾಗಿದೆ. ಉಭಯ ನಾಯಕರು ಮತದಾರರ ಸೆಳೆಯಲು ಇನ್ನಿಲ್ಲದ ಕಸರತ್ತು ನಡೆಸಿದ್ದಾರೆ. ಇದರಲ್ಲೂ ಬಿ.ಸಿ.ಪಾಟೀಲ್ ಪ್ರಸ್ತುತ ಚುನಾವಣೆಯನ್ನು ಪ್ರತಿಷ್ಠೆಯಾಗಿ ತಗೆದುಕೊಂಡಿದ್ದಾರೆ. ಹೀಗಾಗಿ ಕಾಂಗ್ರೆಸ್ ಹಿರಿಯ ಮುಖಂಡ ಬಿ.ಹೆಚ್.ಬನ್ನಿಕೋಡ್ ಬೆಂಬಲ ಕೇಳಿದ್ದಾರೆ. ಈ ಮೂಲಕ ಕ್ಷೇತ್ರದಲ್ಲಿ ರಾಜಕೀಯ ಪಟ್ಟುಗಳು ಬಿಗಿಯಾಗಿವೆ.
ಕ್ಷೇತ್ರದ ಮತದಾರರ ಮಾಹಿತಿ:ಹಿರೇಕೆರೂರು ಕ್ಷೇತ್ರದಲ್ಲಿ ಒಟ್ಟು 1,79,278 ಮತದಾರರಿದ್ದಾರೆ. 92,924 ಪುರುಷ ಮತದಾರರು ಮತ್ತು 86,350 ಮಹಿಳಾ ಮತದಾರರು ಹಾಗೂ ನಾಲ್ವರು ಇತರ ಮತದಾರರು ಇದ್ದು, ಇದರಲ್ಲಿ ಲಿಂಗಾಯತ ಮತದಾರರೇ ನಿರ್ಣಾಯಕರಾಗಿದ್ದಾರೆ. ಪರಿಶಿಷ್ಟ ಜಾತಿ ಮತ್ತು ಪಂಗಡ ಹಾಗೂ ಬ್ರಾಹ್ಮಣ, ಕ್ರೈಸ್ತ ಮತದಾರರ ಕೂಡ ಚುನಾವಣಾ ಫಲಿತಾಂಶದಲ್ಲಿ ಪ್ರಮುಖ ಪಾತ್ರ ವಹಿಸುತ್ತಾರೆ.
ಇದನ್ನೂ ಓದಿ:ಕನಕಪುರ ವಿಧಾನಸಭಾ ಮತಕ್ಷೇತ್ರದಲ್ಲಿ ಡಿಕೆಶಿ ಪಾರುಪತ್ಯ: ಜೆಡಿಎಸ್ - ಬಿಜೆಪಿಯಿಂದ ಕಾದು ನೋಡುವ ತಂತ್ರ