ಹಾವೇರಿ: ಜಿಲ್ಲೆಯಲ್ಲಿ ಹಾದುಹೋಗಿರುವ ರಾಷ್ಟ್ರೀಯ ಹೆದ್ದಾರಿ 48 ಜಿಲ್ಲೆಯ ಪ್ರಮುಖ ರಸ್ತೆಯಾಗಿದ್ದು, ಈ ರಾಷ್ಟ್ರೀಯ ಹೆದ್ದಾರಿ 48 ಬೆಂಗಳೂರಿನಿಂದ ಮುಂಬೈ ನಡುವೆ ಸಂಪರ್ಕ ಕಲ್ಪಿಸುತ್ತದೆ. ರಾಷ್ಟ್ರೀಯ ಹೆದ್ದಾರಿ 48 ಕಳೆದ ಆರು ವರ್ಷಗಳ ಹಿಂದೆ ಚತುಷ್ಪಥದಿಂದ ಷಟ್ಪಥವಾಗಿದೆ. ಅದಕ್ಕಾಗಿ ಜಿಲ್ಲೆಯಲ್ಲಿ ಹಲವು ಗ್ರಾಮ ನಗರಗಳಿಗೆ ಬೈಪಾಸ್ ರಸ್ತೆ ನಿರ್ಮಿಸಲಾಗಿದೆ. ಅಲ್ಲದೇ ಪ್ರಮುಖ ಗ್ರಾಮಗಳಲ್ಲಿ ಸೇತುವೆ ನಿರ್ಮಿಸಿ ವಾಹನಗಳ ಸಂಚಾರ ಸುಗಮಗೊಳಿಸಲಾಗಿದೆ.
ಆದರೇ, ಜಿಲ್ಲೆಯ ಬ್ಯಾಡಗಿ ತಾಲೂಕಿನ ಮೋಟೆಬೆನ್ನೂರು ಮತ್ತು ರಾಣೆಬೆನ್ನೂರು ತಾಲೂಕಿನ ಛತ್ರದ ಬಳಿ ಸೇತುವೆ ಕಾಮಗಾರಿ ಮಾತ್ರ ಪೂರ್ಣಗೊಂಡಿಲ್ಲ. ಇದರಿಂದಾಗಿ ರಸ್ತೆ ಅಕ್ಕಪಕ್ಕ ಸರ್ವಿಸ್ ರಸ್ತೆ ನಿರ್ಮಿಸಲಾಗಿದೆ. ಈ ರೀತಿ ನಿರ್ಮಿಸಿರುವ ಸರ್ವಿಸ್ ರಸ್ತೆಗಳು ಈಗಾಗಲೇ ಹಲವಾರು ಜೀವಗಳನ್ನ ಬಲಿತಗೆದುಕೊಂಡಿದ್ದು, ಈ ಸರ್ವಿಸ್ ರಸ್ತೆಗಳಲ್ಲಿ ದ್ವಿಚಕ್ರವಾಹನ ಸವಾರರು ಪ್ರಾಣ ಕೈಯಲ್ಲಿ ಹಿಡಿದು ಸಂಚರಿಸುವ ಅನಿವಾರ್ಯತೆ ಎದುರಾಗಿದೆ.
ಸರ್ವಿಸ್ ರಸ್ತೆಗಳು ಸಂಪೂರ್ಣ ಹಾಳಾಗಿದ್ದು, ವಾಹನಗಳು ತಗ್ಗು ಗುಂಡಿಗಳಲ್ಲಿ ಸಂಚರಿಸುತ್ತೀವೆ. ಮೋಟೆಬೆನ್ನೂರು ಬ್ಯಾಡಗಿ ಸೇರಿಸುವ ಪ್ರಮುಖ ರಸ್ತೆಯಾಗಿದ್ದು, ಬ್ಯಾಡಗಿ ಮೆಣಸಿನಕಾಯಿ ಮಾರುಕಟ್ಟೆಗೆ ಬರುವ ರೈತರು ಈ ಸಮಸ್ಯೆಯಿಂದ ಹೈರಾಣಾಗಿದ್ದಾರೆ. ರೈತರ ಮನೆಗಳು ರಸ್ತೆ ಈ ಕಡೆ ಇದ್ದರೆ ಜಮೀನುಗಳು ರಸ್ತೆಯ ಇನ್ನೊಂದು ಬದಿಯಲ್ಲಿವೆ. ಜಾನುವಾರು ಚಕ್ಕಡಿಗಳಲ್ಲಿ ರೈತರು ಸಾಗುತ್ತಿದ್ದ ವೇಳೆ ಹಲವು ಅಪಘಾತಗಳಾಗಿವೆ.