ರಾಣೆಬೆನ್ನೂರು: ನಗರಸಭಾ ಪೌರಕಾರ್ಮಿಕರ ವಸತಿಗಾಗಿ ನಿರ್ಮಿಸಿದ ಮನೆಗಳು ಉದ್ಘಾಟನೆಯಾಗದೆ ಬಾಗಿಲಿಗೆ ಬೀಗ ಹಾಕಲಾಗಿದೆ.
ಹೌದು, ಕರ್ನಾಟಕ ಗೃಹ ಮಂಡಳಿ ಸಹಾಯಧನದ ಅಡಿಯಲ್ಲಿ ಇಲ್ಲಿನ ಜೆ.ಹೆಚ್.ಪಟೇಲ್ ನಗರದಲ್ಲಿ ಜಿ-1 ಮಾದರಿಯಲ್ಲಿ ಸುಮಾರು 30 ಮನೆಗಳನ್ನು ಕಟ್ಟಲಾಗಿದೆ. ಪ್ರತಿ ಮನೆಗೆ ಸುಮಾರು 18 ಲಕ್ಷದಂತೆ ಸುಮಾರು 2 ಕೋಟಿ 70 ಲಕ್ಷ ವ್ಯಯಿಸಲಾಗಿದೆ. ಆದರೆ ಈಗಾಗಲೇ ಮನೆಗಳ ಕಾಮಗಾರಿ ಸಂಪೂರ್ಣ ಮುಗಿದಿದ್ದು, ಇನ್ನೂ ಉದ್ಘಾಟನೆಯಾಗಿಲ್ಲ. ಸರ್ಕಾರ ದಿನನಿತ್ಯ ನಗರ ಸ್ವಚ್ಛತೆಗೆ ಶ್ರಮಿಸುತ್ತಿರುವ ಪೌರಕಾರ್ಮಿಕರ ಕುಟುಂಬಗಳಿಗೆ ವಸತಿ ನಿರ್ಮಿಸಿಕೊಟ್ಟಿದೆ. ಆದರೆ ಈವರೆಗೂ ಪೌರಕಾರ್ಮಿಕರಿಗೆ ಮನೆಗಳನ್ನು ಹಸ್ತಾಂತರ ಮಾಡಲು ನಗರಸಭೆ ಆಗಲಿ ಅಥವಾ ಗೃಹ ಮಂಡಳಿಯಾಗಲಿ ಮುಂದಾಗಿಲ್ಲ ಎಂಬುದು ಬೇಸರದ ಸಂಗತಿ ಎಂದು ಪೌರಕಾರ್ಮಿಕರು ಹೇಳಿದ್ದಾರೆ.