ಹಾವೇರಿ: ಕಾರ್ತಿಕೋತ್ಸವ ಅಂಗವಾಗಿ ಇಲ್ಲಿಯ ಕಬ್ಬೂರು ಗ್ರಾಮದಲ್ಲಿ ಬುಧವಾರ ದನಬೆದರಿಸುವ ಸ್ಪರ್ಧೆ ಆಯೋಜಿಸಲಾಗಿತ್ತು. ಸ್ಪರ್ಧೆಗೆ ಹಾವೇರಿ ಜಿಲ್ಲೆಯ ವಿವಿಧ ಗ್ರಾಮಗಳಿಂದ ಐದು ನೂರಕ್ಕೂ ಅಧಿಕ ಹೋರಿಗಳನ್ನ ಕರೆತರಲಾಗಿತ್ತು. ಇದರಲ್ಲಿ ಭಾಗಿಯಾದ ಹೋರಿಗಳಿಗೆ ಬಲೂನ್, ಘಂಟೆ, ಕೊಬ್ಬರಿಗಳಿಂದ ಸಿಂಗರಿಸಲಾಗಿತ್ತು.
ಸ್ಪರ್ಧೆ ಆರಂಭಕ್ಕೂ ಮುನ್ನಾ ಹೋರಿಗಳನ್ನು ಸರತಿಯಲ್ಲಿ ನಿಲ್ಲಿಸಲಾಗಿತ್ತು. ಸ್ಪರ್ಧಾ ಅಖಾಡದ ಬಾಗಿಲು ತಗೆಯುತ್ತಿದ್ದಂತೆ ಹೋರಿಗಳ ಓಟ ಆರಂಭಗೊಂಡಿತ್ತು. ಇದರಲ್ಲಿ ಭಾಗಿಯಾಗಿದ್ದ ಫೈಲ್ವಾನರು ಎದೆಗುಂದದೆ ಹೋರಿ ಹಿಡಿಯಲು ಮುಂದಾಗುತ್ತಿದ್ದರು. ತಮ್ಮದೇ ಆದ ಪಟ್ಟುಗಳನ್ನು ಹಾಕಿ ಹೋರಿ ಹಿಡಿಯುವ ಪ್ರಯತ್ನ ಮಾಡಿದರು. ಕೆಲ ಹೋರಿಗಳನ್ನು ನೂರಾರು ಮೀಟರ್ ದೂರ ಓಡಿ ಯುವಕರ ಕೈಗೆ ಸಿಗದೆ ತಪ್ಪಿಸಿಕೊಂಡವು. ಈ ಸ್ಪರ್ಧೆ ನೋಡಲು ಸುತ್ತಮುತ್ತಲಿನ ಊರುಗಳಿಂದ ಹಲವಾರು ಜನರು ಆಗಮಿಸಿದ್ದರು.
ಸ್ಪರ್ಧೆ ಕುರಿತು ಮಾತನಾಡಿದ ಕಬ್ಬೂರು ಗ್ರಾಮಸ್ಥ ಶಿವಬಸಯ್ಯ, ಗ್ರಾಮದಲ್ಲಿ ಕಳೆದ 10 ವರ್ಷಗಳಿಂದ ದನ ಬೆದರಿಸುವ ಸ್ಪರ್ಧೆ ಆಯೋಜಿಸಲಾಗುತ್ತಿದೆ. ಗ್ರಾಮದ ಸಿದ್ದೇಶ್ವರ ದೇವಸ್ಥಾನದಲ್ಲಿ ನಡೆಯುವ ಕಾರ್ತಿಕೋತ್ಸವದ ಹಿನ್ನೆಲೆಯಲ್ಲಿ ಸ್ಪರ್ಧೆ ಆಯೋಜಿಸಲಾಗುತ್ತದೆ. ಈ ಸ್ಪರ್ಧೆಯಲ್ಲಿ ಕಬ್ಬೂರು ಸೇರಿದಂತೆ ಹಾವೇರಿ ಜಿಲ್ಲೆಯ ವಿವಿಧೆಡೆಯಿಂದ ಹೋರಿಗಳನ್ನ ಕರೆತರಲಾಗುತ್ತದೆ. ಪೀಪಿ(ಬಲೂನ್) ಹೋರಿ, ದಾಗೀನ ಹೋರಿ, ಹ್ಯಾಕ್ಸನ್ ಹೋರಿಗಳು ಬಂದಿರುತ್ತವೆ. ದನಬೆದರಿಸುವ ಸ್ಪರ್ಧೆಯಲ್ಲಿ ಗೆದ್ದಂತಹ ಫೈಲ್ವಾನರಿಗೆ ಬಹುಮಾನ ನೀಡಲಾಗುತ್ತದೆ. ಬೆಳ್ಳಿ ಕಡಗ ಸೇರಿದಂತೆ ವಿವಿಧ ಬಹುಮಾನಗಳನ್ನೂ ನೀಡಲಾಗುತ್ತದೆ ಎಂದು ಶಿವಬಸಯ್ಯ ತಿಳಿಸಿದರು.