ಹಾವೇರಿ :ಜಿಲ್ಲೆಯಾದ್ಯಂತ ಧಾರಾಕಾರ ಮಳೆ ಮುಂದುವರೆದಿದ್ದು, ಈ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಶಾಲಾ ಕಾಲೇಜುಗಳಿಗೆ ಇನ್ನೆರಡು ದಿನ ರಜೆ ಘೋಷಿಸಿದೆ.
ಗುರುವಾರ ಮತ್ತು ಶುಕ್ರವಾರ ಸಹ ಶಾಲಾ ಕಾಲೇಜ್‌ಗಳಿಗೆ ಜಿಲ್ಲಾಧಿಕಾರಿ ರಜೆ ಘೋಷಿಸಿದ್ದಾರೆ. ಹಾವೇರಿ ಜಿಲ್ಲೆಯಾದ್ಯಂತ ವ್ಯಾಪಕ ಮಳೆಯಾಗುತ್ತಿದ್ದು ಹಲವು ಮನೆಗಳಿಗೆ ಹಾನಿ ಸಂಭವಿಸಿದೆ. ಬುಧವಾರ ಒಂದೇ ದಿನ ಜಿಲ್ಲೆಯಾದ್ಯಂತ 47.4 ಮಿಲಿಮೀಟರ್ ಮಳೆಯಾಗಿದೆ. ನಾಗನೂರು ಮತ್ತು ಕೂಡಲದಲ್ಲಿ ವರದಾ ನದಿಯ ನಡುವೆ ಪ್ರವಾಹ ಅಧಿಕವಾಗಿದ್ದು ರೈತರ ಜಮೀನುಗಳಿಗೆ ಮಳೆನೀರು ನುಗ್ಗಿದೆ. ಸೇತುವೆ ಮೇಲೆ ವರದೆ ತುಂಬಿ ಹರಿಯುತ್ತಿರುವುದರಿಂದ ಎರಡು ಗ್ರಾಮಗಳ ನಡುವೆ ಸಂಪರ್ಕ ಕಡಿತಗೊಂಡಿದೆ.
ಇನ್ನು ಕಳಸೂರು ಮತ್ತು ದೇವಗಿರಿ ಸಂಪರ್ಕಿಸುವ ಸೇತುವೆ ಮೇಲೆ ಸಹ ನೀರು ಹರಿಯಲಾರಂಭಿಸಿದ್ದು ಜನರು ಜಿಲ್ಲಾಕೇಂದ್ರಕ್ಕೆ ಬರಲು ಪರದಾಡುತ್ತಿದ್ದಾರೆ. ಬೆಣ್ಣಿಹಳ್ಳ ಮೈದುಂಬಿದ್ದು ಶಿಗ್ಗಾವಿ ತಾಲೂಕಿನ ಮುತ್ತಳ್ಳಿಯಲ್ಲಿ ಬೆಳೆಗಳಿಗೆ ಹಳ್ಳದ ನೀರು ನುಗ್ಗಿದೆ.
ಜಿಲ್ಲೆಯ ವಿವಿಧ ಕಡೆ ಅಧಿಕಾರಿಗಳು ಪರಿಶೀಲನೆ ನಡೆಸಿದ್ದು ಅವಶ್ಯವಿದ್ದಲ್ಲಿ ಪರಿಹಾರ ಕೇಂದ್ರಗಳನ್ನು ತೆರೆಯಲು ಆದೇಶಿಸಿದ್ದಾರೆ. ಜಿಲ್ಲಾಡಳಿತ ಸಕಲ ಸಿದ್ದತೆಯಲ್ಲಿದ್ದು ಯಾವುದೇ ಅವಘಡವಾಗದಂತೆ ಮುಂಜಾಗೃತಾ ಕ್ರಮ ಕೈಗೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಕೃಷ್ಣ ಭಾಜಪೇಯಿ ತಿಳಿಸಿದ್ದಾರೆ. ಈ ಮಧ್ಯೆ ಜಿಲ್ಲಾಸ್ಪತ್ರೆಯಲ್ಲಿ ರಾತ್ರಿ ಸಹ ವೈದ್ಯ ಸಿಬ್ಬಂದಿ ಸಿದ್ದತೆಯಲ್ಲಿರುವಂತೆ ಜಿಲ್ಲಾಧಿಕಾರಿ ಆದೇಶ ನೀಡಿದ್ದಾರೆ.
ಮತ್ತೆ ಎರಡು ಪರಿಹಾರ ಕೇಂದ್ರ ಪ್ರಾರಂಭ
ಜಿಲ್ಲಾಡಳಿತ ಇಂದು ಮತ್ತೆ ಎರಡು ಪರಿಹಾರ ಕೇಂದ್ರಗಳನ್ನು ತೆರೆದಿದೆ. ಹಾನಗಲ್ ತಾಲೂಕಿನ ಅಲಿಪುರ ಮತ್ತು ಹಾವೇರಿ ತಾಲೂಕಿನ ಕೊಡಬಾಳ ಗ್ರಾಮಗಳಲ್ಲಿ ಇಂದು ಪರಿಹಾರ ಕೇಂದ್ರ ತೆರೆಯಲಾಗಿದೆ. ಇದರಿಂದಾಗಿ ಜಿಲ್ಲೆಯಲ್ಲಿ ಒಟ್ಟು ಮೂರು ಪರಿಹಾರ ಕೇಂದ್ರಗಳನ್ನು ತೆರೆದಂತಾಗಿದೆ. ಹಾವೇರಿಯ ನಾಗೇಂದ್ರನಮಟ್ಟಿಯ ಕೇಂದ್ರವನ್ನ ಮಂಗಳವಾರವೇ ಆರಂಭಿಸಲಾಗಿದ್ದು 26 ಕುಟುಂಬಗಳು ಇಲ್ಲಿ ಆಶ್ರಯ ಪಡೆದಿವೆ. ಈ ಮಧ್ಯೆ ಜಿಲ್ಲಾಡಳಿತ ಸಕಲ ಸಿದ್ಧತೆ ಕೈಗೊಂಡಿದ್ದು ಅಗತ್ಯ ಬಿದ್ದರೆ ಪರಿಹಾರ ಕೇಂದ್ರಗಳನ್ನು ಹೆಚ್ಚಿಸುವುದಾಗಿ ಜಿಲ್ಲಾಧಿಕಾರಿ ತಿಳಿಸಿದ್ದಾರೆ.
ಸಂತ್ರಸ್ಥರನ್ನ ಭೇಟಿಯಾದ ಬಸವಶಾಂತಲಿಂಗ ಶ್ರೀ
ಇನ್ನು ಹಾವೇರಿ ನಗರದ ಶಾಂತಿನಗರ ಅಲೆಮಾರಿಗಳ ಮನೆಗೆ ನೀರು ನುಗ್ಗಿದೆ. ಈ ಹಿನ್ನೆಲೆಯಲ್ಲಿ 26 ಕುಟುಂಬಗಳನ್ನು ನಾಗೇಂದ್ರನಮಟ್ಟಿಯ ಪರಿಹಾರ ಕೇಂದ್ರದಲ್ಲಿಡಲಾಗಿದೆ. ಅವರಿಗೆ ಶಾಲೆಯಲ್ಲಿಯೇ ಮೂಲಭೂತ ಸೌಲಭ್ಯ ಅಹಾರದ ವ್ಯವಸ್ಥೆ ಮಾಡಲಾಗಿದೆ. ಈ ಮಧ್ಯೆ ಹಾವೇರಿ ಹೊಸಮಠದ ಬಸವಶಾಂತಲಿಂಗ ಶ್ರೀಗಳು ಇಂದು ಪರಿಹಾರ ಕೇಂದ್ರಕ್ಕೆ ಭೇಟಿ ನೀಡಿ ಸಂತ್ರಸ್ಥರಿಗೆ ಸಾಂತ್ವಾನ ಹೇಳಿದರು.
ಅಲ್ಲದೆ ಸಂತ್ರಸ್ಥರಿಗೆ ಬೆಡ್ಶೀಟ್ ಬ್ಲಾಂಕೇಟ್ ನೀಡಿ ಧೈರ್ಯ ತುಂಬಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಸಂತ್ರಸ್ಥರು ಯಾವುದೇ ಕಾರಣಕ್ಕೂ ಭಯಪಡಬೇಕಾಗಿಲ್ಲ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಸಂತ್ರಸ್ಥರು ಕಳೆದ ನಾಲ್ಕು ವರ್ಷಗಳಿಂದ ನಾವು ಮಳೆಗಾಲದಲ್ಲಿ ಸಮಸ್ಯೆ ಅನುಭವಿಸುತ್ತಿದ್ದೇವೆ. ಆದರೆ ಅಧಿಕಾರಿಗಳು ಜನಪ್ರತಿನಿಧಿಗಳು ನಮ್ಮ ಕಡೆ ಗಮನ ನೀಡಿಲ್ಲ. ಇದೇ ರೀತಿ ನಿರ್ಲಕ್ಷ್ಯ ಮುಂದುವರೆದರೆ ತಾವು ರಾಷ್ಟ್ಪಪತಿಗಳಿಗೆ ದಯಾಮರಣಕ್ಕಾಗಿ ಪತ್ರ ಬರೆಯುವುದಾಗಿ ತಿಳಿಸಿದರು.