ಹಾವೇರಿ:ಈ ದಂಪತಿಯ ಐದು ತಿಂಗಳ ಹೆಣ್ಣು ಮಗು ಅಪರೂಪದ ಕಾಯಿಲೆಯಿಂದ ಬಳಲುತ್ತಿದೆ. ಇದರ ಚಿಕಿತ್ಸೆಗೆ ಲಕ್ಷಗಟ್ಟಲೆ ಹಣದ ಅವಶ್ಯಕತೆ ಇದ್ದು, ಬಡ ದಂಪತಿ ಅಷ್ಟೊಂದು ಹಣ ಹೊಂದಿಸಲು ಶಕ್ತರಾಗಿಲ್ಲ. ಇದರಿಂದ 'ಈಟಿವಿ ಭಾರತ' ಮೂಲಕ ಮಗುವಿನ ಪೋಷಕರು ಆರ್ಥಿಕ ಸಹಾಯ ನೀಡುವಂತೆ ಕೋರಿದ್ದಾರೆ.
ಹೌದು, ನಗರದ ನಿವಾಸಿಗಳಾದ ಅನಿಲ ಬೆಟಗೇರಿ ಮತ್ತು ಪ್ರತಿಮಾ ಬೆಟಗೇರಿ ದಂಪತಿಯ ಕಂದಮ್ಮ ಯುವಿಕಾ, ಸ್ಪೈನಲ್ ಮಸ್ಕ್ಯೂಲರ್ ಆಟ್ರೋಪಿ ಎಂಬ ಕಾಯಿಲೆಯಿಂದ ಬಳಲುತ್ತಿದೆ. ಇದೀಗ ಮಗು ತನ್ನ ಅಂಗಾಂಗಗಳ ಮೇಲಿನ ಸ್ವಾಧೀನ ಕಳೆದುಕೊಳ್ಳುತ್ತಿದೆ. ಮಗು ಒಂದು ತಿಂಗಳಿದ್ದಾಗ ಪೋಷಕರು ವೈದ್ಯರ ಬಳಿ ಕರೆದುಕೊಂಡು ಹೋಗಿದ್ದ ವೇಳೆ ಈ ಕಾಯಿಲೆ ಇರುವುದು ತಿಳಿದಿದೆ.
ಬಳಿಕ ವೈದ್ಯರ ಶಿಫಾರಸ್ಸಿನ ಮೇಲೆ ಪೋಷಕರು, ಬೆಂಗಳೂರಿನ ಬ್ಯಾಪಿಸ್ಟ್ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದರು. ಆಗ ಕಾಯಿಲೆಗೆ ಚುಚ್ಚುಮದ್ದು ಹಾಕಬೇಕು. ಚುಚ್ಚುಮದ್ದಿಗೆ 16 ಕೋಟಿ ರೂ. ಬೆಲೆ ಇದೆ. ಅದು ಸಹ ಅಮೆರಿಕದಲ್ಲಿ ಉತ್ಪಾದನೆಯಾಗುತ್ತದೆ. ಅದನ್ನು ಹಾಕಿದರೆ ಮಗು ಗುಣಮುಖವಾಗುತ್ತದೆ ಎಂದು ವೈದ್ಯರು ಮಾಹಿತಿ ನೀಡಿದ್ದರು.
ಸದ್ಯ ಅನಿಲ ಬೆಟಗೇರಿಯವರು ನಗರದಲ್ಲಿ ಚಿಕ್ಕದಾದ ಪಾದರಕ್ಷೆ ರಿಪೇರಿ ಮತ್ತು ಮಾರುವ ಅಂಗಡಿ ಇಟ್ಟುಕೊಂಡು ಜೀವನ ಕಟ್ಟಿಕೊಂಡಿದ್ದಾರೆ. ದಿನಕ್ಕೆ 200-300 ರೂ. ಗಳನ್ನು ಸಂಪಾದನೆ ಮಾಡುವುದೇ ದೊಡ್ಡ ಮಾತಾಗಿದ್ದು, ಇನ್ನು ಕೋಟಿಗಟ್ಟಲೆ ಹಣ ಒದಗಿಸುವುದು ಊಹೆಗೂ ನಿಲುಕದ್ದಾಗಿತ್ತು.
ನಂತರ ವೈದ್ಯರು ಮಗುವಿನ ಹೆಸರಿನಲ್ಲಿ ಲಾಟರಿ ಹಾಕಿದ್ದರು. ಆಗ ಅದೃಷ್ಟವೆಂಬಂತೆ ಕಂದಮ್ಮನ ಹೆಸರು ಲಾಟರಿಯಲ್ಲಿ ಬಂದಿದ್ದು, ಅಮೆರಿಕದಿಂದ 16 ಕೋಟಿ ರೂ. ವೆಚ್ಚದ ಚುಚ್ಚುಮದ್ದು ಉಚಿತವಾಗಿ ಲಭ್ಯವಾಗಿದೆ. ಆದರೆ, ಅದರ ಚಿಕಿತ್ಸೆಗೆ 8 ರಿಂದ 10 ಲಕ್ಷ ರೂ.ಹಣದ ಅವಶ್ಯಕತೆ ಇದೆ. ಹೀಗಾಗಿ 'ಈಟಿವಿ ಭಾರತ'ದ ಮೂಲಕ ದಂಪತಿ ಆರ್ಥಿಕ ಸಹಾಯಕ್ಕಾಗಿ ಸಹೃದಯಿಗಳಿಗೆ ಮೊರೆಯಿಟ್ಟಿದ್ದಾರೆ.
ತಮಗೆ ಈ ಮೊದಲು ಒಂದು ಹೆಣ್ಣುಮಗು ಜನಿಸಿ ಸಾವನ್ನಪ್ಪಿದೆ. ಇದೀಗ ಎರಡನೇ ಹೆಣ್ಣುಮಗು ಸಹ ಸಾವಿನದವಡೆಯಲ್ಲಿದೆ. ಬಡತನದಲ್ಲಿರುವ ನಮಗೆ ಮಗುವಿನ ಚಿಕಿತ್ಸೆಗೆ ಬೇಕಾದ ಹಣ ಹೊಂದಿಸಲು ಸಾಧ್ಯವಿಲ್ಲ. ದಯವಿಟ್ಟು ನಮ್ಮ ಮಗುವಿನ ಚಿಕಿತ್ಸೆಗೆ ಸಾರ್ವಜನಿಕರು, ಸಂಘ-ಸಂಸ್ಥೆಗಳು ಆರ್ಥಿಕ ನೆರವು ನೀಡುವಂತೆ ಪೋಷಕರು ಮನವಿ ಮಾಡಿದ್ದಾರೆ.