ಹಾವೇರಿ:ಸರ್ಕಾರವು ಅಂಗನವಾಡಿ ಕೇಂದ್ರದ ಮಕ್ಕಳಿಗೆ ಮತ್ತು ಗರ್ಭಿಣಿಯರಿಗೆ ಪೌಷ್ಟಿಕಾಂಶ ಒದಗಿಸುವ ದೃಷ್ಟಿಯಿಂದ ವಾರದಲ್ಲಿ ಉಚಿತವಾಗಿ ಎರಡು ಮೊಟ್ಟೆ ವಿತರಿಸುವ ಯೋಜನೆ ಜಾರಿಗೆ ತಂದಿದೆ. ಆದರೆ ಪೌಷ್ಟಿಕಾಂಶ ಒದಗಿಸಬೇಕಾದ ಮೊಟ್ಟೆಗಳು ಕಳಪೆ ಆಗಿರುವ ಆರೋಪ ಹಾವೇರಿ ಜಿಲ್ಲೆಯ ಜನರಲ್ಲಿ ಕೇಳಿ ಬರುತ್ತಿದೆ.
ಹಾವೇರಿ ಜಿಲ್ಲೆಯಲ್ಲಿ ಮೊಟ್ಟೆ ವಿತರಿಸುವ ಗುತ್ತಿಗೆದಾರರು ಗರ್ಭಿಣಿಯರಿಗೆ ಮತ್ತು ಅಂಗನವಾಡಿ ಮಕ್ಕಳಿಗೆ ಪೂರೈಸಿರುವ ಮೊಟ್ಟೆಗಳು ಕುದಿಸಿದ ನಂತರ ಹಾಳಾಗಿರುವ ಅಂಶ ಬೆಳಕಿಗೆ ಬಂದಿದೆ. ಅಲ್ಲದೇ ಕೊಳೆತ ಮೊಟ್ಟೆಗಳು ಇವಾಗಿದ್ದು ಸಿಪ್ಪೆ ಸುಲಿಯುತ್ತಿದ್ದಂತೆ ಕೆಟ್ಟ ವಾಸನೆ ಬರುತ್ತಿದೆ. ಇನ್ನು ಗುತ್ತಿಗೆ ಪಡೆಯುವ ನಿಯಮಗಳನ್ನು ಗಾಳಿಗೆ ತೂರಲಾಗಿದೆ. ಕೆಟ್ಟ ಮೊಟ್ಟೆಗಳೆನ್ನದೇ ಗಾತ್ರದಲ್ಲಿ ಚಿಕ್ಕದಾದ ಮೊಟ್ಟೆಗಳನ್ನ ಸಹ ವಿತರಿಸಲಾಗಿದೆ ಎಂದು ಅಂಗನವಾಡಿ ಕಾರ್ಯಕರ್ತೆಯರ ಫೆಡರೇಷನ್ ಜಿಲ್ಲಾಧ್ಯಕ್ಷ ಹೊನ್ನಪ್ಪ ಮರೆಣ್ಣನವರ್ ಆರೋಪ ಮಾಡಿದ್ದಾರೆ.
ಈ ಯೋಜನೆಯನ್ನು ಹಿಂದೆ ಸಿದ್ದರಾಮಯ್ಯ ಮೊದಲ ಬಾರಿಗೆ ಮುಖ್ಯಮಂತ್ರಿಯಾದಾಗ, ಜಯಮಾಲಾ ಸಚಿವೆ ಆಗಿದ್ದ ವೇಳೆ ಜಾರಿಗೆ ತರಲಾಗಿತ್ತು. ಅಂಗನವಾಡಿ ಮತ್ತು ಗರ್ಭಿಣಿಯರಿಗೆ ಮೊಟ್ಟೆ ವಿತರಿಸುವ ಯೋಜನೆಯನ್ನು ಬಾಲ ವಿಕಾಸ ಸಮಿತಿಗೆ ವಹಿಸಲಾಗಿತ್ತು. ಬಾಲ ವಿಕಾಸ ಸಮಿತಿಯ ಫಲಾನುಭವಿ ಮತ್ತು ಅಂಗನವಾಡಿ ಕಾರ್ಯಕರ್ತೆಯ ಜಂಟಿ ಖಾತೆಯಲ್ಲಿ ಮೊಟ್ಟೆಯ ಹಣ ಬಿಡುಗಡೆ ಆಗುತ್ತಿತ್ತು.
ಬಾಲ ವಿಕಾಸ ಸಮಿತಿಯಲ್ಲಿ ಸಾಕಷ್ಟು ಹಣವಿದ್ದರೂ ಸಹ ಮೊಟ್ಟೆ ಯೋಜನೆಗೆ ಹಣ ಬಿಡುಗಡೆ ಮಾಡಲಿಲ್ಲ. ಇದರಿಂದಾಗಿ ಅಂಗನವಾಡಿ ಕಾರ್ಯಕರ್ತೆಯರು ತಮ್ಮ ಸ್ವಂತ ಹಣದಿಂದ ಮೊಟ್ಟೆ ತಂದು ವಿತರಿಸಿದ್ದರು. ಐದಾರು ತಿಂಗಳುಗಳ ಕಾಲ ಮೊಟ್ಟೆ ಬಿಲ್ ಬಾರದ ಕಾರಣ ಅಂಗನವಾಡಿ ಕಾರ್ಯಕರ್ತೆಯರು ಅಧಿಕಾರಿಗಳಿಗೆ ದೂರು ನೀಡಿದ್ದರು.