ಹಾವೇರಿ: ನವೆಂಬರ್ 1ರಂದು ಜಿಲ್ಲೆಯ ರಾಣೆಬೆನ್ನೂರು ತಾಲೂಕು ಕ್ರೀಡಾಂಗಣದಲ್ಲಿ ಗರಡಿ ಸಿನಿಮಾದ ಟ್ರೇಲರ್ ಬಿಡುಗಡೆ ಮಾಡಲಾಗುವುದು ಎಂದು ಸಿನಿಮಾ ನಿರ್ಮಾಪಕ ಬಿ.ಸಿ.ಪಾಟೀಲ್ ಮಾಹಿತಿ ನೀಡಿದ್ದಾರೆ. ಹಾವೇರಿಯಲ್ಲಿ ಇಂದು ಮಾತನಾಡಿದ ಅವರು, ನಟ ದರ್ಶನ್ ಟ್ರೇಲರ್ ಬಿಡುಗಡೆ ಮಾಡಲಿದ್ದಾರೆ ಎಂದರು.
ತಾಲೂಕು ಕ್ರೀಡಾಂಗಣದಲ್ಲಿ ಬೃಹತ್ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ. ಉತ್ತರ ಕರ್ನಾಟಕದ ಹೆಬ್ಬಾಗಿಲು ರಾಣೆಬೆನ್ನೂರು, ಇಲ್ಲಿಂದ ಗರಡಿ ಮನೆ ಬಾಗಿಲು ಓಪನ್ ಮಾಡುತ್ತಿದ್ದೇವೆ. ಉತ್ತರ ಕರ್ನಾಟಕದಲ್ಲಿ ಶೇ 50ರಷ್ಟು ಚಿತ್ರೀಕರಣ ಮಾಡಲಾಗಿದೆ ಎಂದು ಪಾಟೀಲ್ ತಿಳಿಸಿದರು.
ನಿರ್ದೇಶಕ ಯೋಗರಾಜ್ ಭಟ್ ಮಾತನಾಡಿ, ದೊಡ್ಡ ದೊಡ್ಡ ನಾಯಕರನ್ನು ತಯಾರು ಮಾಡಿದ್ದು ಬಯಲು ಸೀಮೆ. ಈಗ ರಿಯಾಲಿಟಿ ಶೋ ಗ್ರ್ಯಾಂಡ್ ಫಿನಾಲೆ ಈ ಭಾಗದಲ್ಲೇ ನಡೀತಾ ಇವೆ. ಮನೆಗೆ ಬಂದಷ್ಟೇ ಖುಷಿ ಆಗೈತಿ ಎಂದು ಸಂತಸ ವ್ಯಕ್ತಪಡಿಸಿದರು. ಬಾದಾಮಿಯಲ್ಲೇ ಗರಡಿ ಸಿನಿಮಾ ಹುಟ್ಟಿದ್ದು, ಗರಡಿ ಸಿನಿಮಾ ದೇಸಿ ಕಲೆ ಇರುವಂಥದ್ದು ಎಂದರು.
ಬದುಕಲ್ಲಿ ಯಾರಿಗಾದರೂ ಗರಡಿಯ ಹಿನ್ನಲೆಯ ಕಥೆ ಇರುತ್ತದೆ. ಚಾಲೆಂಜಿಂಗ್ ಸ್ಟಾರ್ ಆ ಎತ್ತರದ ಡೈಲಾಗ್ ನೋಡಿದ್ರೆ ಖಂಡಿತಾ ಕರೆಂಟ್ ಪಾಸ್ ಆಗುತ್ತದೆ. ನಾನು ಕ್ಯಾಮರಾ ಇಟ್ಟರೆ ಕ್ಯಾಮರಾನೇ ಸಾಲೋದಿಲ್ಲ ಅಂತಹ ಇಮೇಜ್ ದರ್ಶನ್ ಮೇಲಿದೆ. ಸ್ನೇಹಿತರ ಬಗ್ಗೆ ಮೊದಲಿಂದಲೂ ಅವರಿಗೆ ಒಳ್ಳೆಯ ಗುಣ ಇದೆ. ಅದಕ್ಕೆ ಅವರು ಅಷ್ಟೊಂದು ದೊಡ್ಡ ಮಟ್ಟಕ್ಕೆ ಬೆಳೆದಿದ್ದಾರೆ. ಗರಡಿ ಸಿನಿಮಾ ಕಥೆ ಹಳೆ ಮೈಸೂರು ಭಾಗದಲ್ಲಿ ನಡೆದಿರುವಂತದ್ದು ಎಂದು ಮಾಹಿತಿ ನೀಡಿದರು.
ದೋಸ್ತಿ ದೋಸ್ತಿಗಳೇ ಸೇರಿಕೊಂಡು ಒಂದೂವರೆ ವರ್ಷದ ನಂತರ ಚಿತ್ರದ ಟ್ರೇಲರ್ ಬಿಡುಗಡೆ ಮಾಡುತ್ತಿದ್ದೇವೆ. ಸಿನಿಮಾಗಳನ್ನು ದೊಡ್ಡ ಲೆವಲ್‌ಗೆ ಕಾಪಾಡುವುದೇ ಬಯಲು ಸೀಮೆ ಎಂದು ಅಭಿಪ್ರಾಯಪಟ್ಟರು. ದೊಡ್ಡ ದೊಡ್ಡ ನಾಯಕರನ್ನು ತಯಾರು ಮಾಡಿದ ಭೂಮಿ ಬಯಲುಸೀಮೆ ಎಂದು ಭಟ್ ಶ್ಲಾಘಿಸಿದರು.
ಚಿತ್ರ ನಿರ್ಮಾಪಕಿ ಸೃಷ್ಟಿ ಪಾಟೀಲ್ ಒರಿಜಿನಲ್ ನಿರ್ಮಾಪಕರು ಇಲ್ಲಿಯವರು, ದುಡ್ಡುಕೊಟ್ಟರೆ ಅಲ್ಲಿ ನಮಗೆ ದುಡ್ಡು ಬರುತ್ತೆ. ಹೀಗಾಗಿ ರಿಯಾಲಿಟಿ ಪ್ರದರ್ಶನಗಳ ಗ್ರ್ಯಾಂಡ್ ಫಿನಾಲೆಯನ್ನು ಬಯಲು ಸೀಮೆಯಲ್ಲಿ ಮಾಡಲಾಗುತ್ತಿದೆ. ಸಿನಿಮಾ ಮಂದಿರಗಳು ಅಧಿಕವಾಗಿರುವುದು ಬಯಲುಸೀಮೆಯಲ್ಲೇ. ಮೊದಲು ಒಂದು ಕಥೆ ಇಟ್ಟುಕೊಂಡು ಸಿನಿಮಾ ಮಾಡಲು ತಯಾರಿ ನಡೆಸಲಾಗಿತ್ತು. ಬಾದಾಮಿಗೆ ಹೋದ ನಂತರ ಅಲ್ಲಿಯ ಕಥೆ ಕೇಳಿ ಅದನ್ನೇ ಅಂತಿಮ ಮಾಡಲಾಯಿತು ಎಂದು ಯೋಗರಾಜ್ ಭಟ್ ತಿಳಿಸಿದರು.
ನಾನು ಚಿಕ್ಕವನಾಗಿದ್ದಾಗ ಕುಸ್ತಿ ನೋಡಿಕೊಂಡು ಬೆಳೆದವನು. ಕುಸ್ತಿ ಆಡುವುದನ್ನು ನೋಡಿದರೆ ಖುಷಿ, ಮಜಾ ಸಿಗುತ್ತದೆ. ನಿರ್ಮಾಪಕ ಬಿ.ಸಿ.ಪಾಟೀಲ್ ಆ್ಯಕ್ಷನ್ ಪಿಕ್ಚರ್ ಪ್ರಿಯರು. ದರ್ಶನ್ ಕೂಡಾ ಆ್ಯಕ್ಷನ್ ಪ್ರಿಯರು. ನನಗೂ ಸಹ ಆ್ಯಕ್ಷನ್ ಇಷ್ಟ. ನಾವೆಲ್ಲಾ ಸೇರಿಕೊಂಡು ಗರಡಿ ನಿರ್ಮಿಸಿದ್ದೇವೆ. ನಮ್ಮ ಗರಡಿ ಮನೆಗಳು ಮೊದಲು ಕಾವಲು ಮನೆಗಳಾಗಿದ್ದವು. ಗ್ರಾಮದ ಗರಡಿಮನೆಯಲ್ಲಿದ್ದ ಫೈಲ್ವಾನರು ಗ್ರಾಮಗಳನ್ನು ಕಾಪಾಡುತ್ತಿದ್ದರು.
ನಾವು ಈ ಹಿಂದೆ ಕೆಲಸ ಮಾಡಿ ಈಗ ಒಂದು ಹಂತಕ್ಕೆ ಬಂದಿದ್ದೇವೆ. ಈ ಹಿಂದೆ ಮಾಡಿದ ಕೆಲಸ ಗರಡಿ. ಪ್ರತಿಯೊಬ್ಬರೂ ಈ ಗರಡಿಯನ್ನೇ ದಾಟಿ ಬಂದಿರುತ್ತಾರೆ. ಬದುಕಲ್ಲಿ ಪ್ರತಿಯೊಬ್ಬರೂ ಗರಡಿ ಹಾಯ್ದೇ ಬರುವುದು ಎಂದು ಭಟ್ ತಿಳಿಸಿದರು. ಗರಡಿ ಚಿತ್ರದಲ್ಲಿ ಪಟ್ಟು ಸೇರಿದಂತೆ ವಿವಿಧ ಹಂತಗಳನ್ನು ಅಧ್ಯಯನ ಮಾಡಿ ಚಿತ್ರ ನಿರ್ಮಿಸಿದ್ದೇವೆ. ಮನುಷ್ಯ ಕಂಡುಕೊಂಡ ವಿದ್ಯೆಗಳು ಲೋಕ ಬಿಟ್ಟು ಹೋಗುವುದಿಲ್ಲ ಎಂದರು.
ಗರಡಿ ಸಿನಿಮಾ ಬಿಡುಗಡೆಯಾದ ನಂತರ ಗರಡಿ ಮನೆಗಳು ಹಿಂದಿನ ವೈಭವ ಕಾಣಬಹುದು. ನಾವು ಪ್ರೇಕ್ಷಕರ ತರಹನೇ ಇದ್ದುಕೊಂಡು ಸಿನಿಮಾ ಮಾಡಿದ್ದೇವೆ. ಪ್ರೇಕ್ಷಕನಿಗೆ ಅವನದೇ ಆದ ಅಧಿಕಾರವಿರುತ್ತೆ. ಅದನ್ನು ಪರದೆಯಲ್ಲಿ ನೋಡಿ. 180 ರಿಂದ 320 ಚಿತ್ರಮಂದಿರಗಳಲ್ಲಿ ಚಿತ್ರ ತೆರೆಕಾಣಲಿದೆ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಮಾತನಾಡಿದ ಚಿತ್ರ ನಿರ್ಮಾಪಕರಲ್ಲಿ ಒಬ್ಬರಾಗಿರುವ ಸೃಷ್ಠಿ ಪಾಟೀಲ್, ತಮ್ಮ ಸಂಸ್ಥೆ ಇದುವರೆಗೂ 17 ಚಿತ್ರ ತಯಾರಿಸಿದೆ. ಗರಡಿ 18ನೇ ಚಿತ್ರ. ಈ ಹಿಂದೆ ನಮ್ಮ ಚಿತ್ರಗಳಿಗೆ ನೀಡಿದ ಪ್ರೋತ್ಸಾಹವನ್ನು ಇದಕ್ಕೂ ನೀಡುವಂತೆ ಮನವಿ ಮಾಡಿದರು. ಚಿತ್ರದಲ್ಲಿ ತಮ್ಮ ಪತಿ ಸುಜಯ ಸಹ ಅತ್ಯುತ್ತಮವಾಗಿ ನಟಿಸಿದ್ದಾರೆ ಎಂದರು.
ಇದನ್ನೂ ಓದಿ:ಮಾಸ್ ಅವತಾರದಲ್ಲಿ ಕೆರೆಬೇಟೆಗೆ ಇಳಿದ ರಾಜಹಂಸ ಗೌರಿಶಂಕರ್