ಹಾವೇರಿ:ವೀರಶೈವ ಪರಂಪರೆಯಲ್ಲಿ ಭಕ್ತರು ಸ್ವಾಮೀಜಿಗಳನ್ನು ಮನೆಗೆ ಕರೆದು ಪ್ರಸಾದ (ಭಿನ್ನ) ಮಾಡಿಸುತ್ತಾರೆ. ಆದರೆ ಮಠದ ಸ್ವಾಮೀಜಿಗಳೇ ಭಕ್ತರನ್ನ ಮಠಕ್ಕೆ ಕರೆದು ಪ್ರಸಾದ ನೀಡುವ ಸಂಪ್ರದಾಯ ಹಾವೇರಿಯ ಸಿಂದಗಿ ಮಠದಲ್ಲಿದೆ.
ಸಿಂದಗಿ ಮಠ ಮಠಾಧೀಶರನ್ನು ತಯಾರಿಸುವ ಪಾಠ ಶಾಲೆ. ಶಾಂತವಿರೇಶ್ವರ ಶ್ರೀಗಳು ಕೆಲ ದಶಕಗಳ ಹಿಂದೆ ಇಲ್ಲಿ ಪಾಠ ಶಾಲೆ ಆರಂಭಿಸಿದ್ದರು. ಇಲ್ಲಿ ವ್ಯಾಸಂಗ ಮಾಡುವವರು ದಿನನಿತ್ಯ ನಗರದಲ್ಲಿ ನಡೆಯುವ ಹಲವು ಸಂಸ್ಕಾರಗಳಿಗೆ ಹೋಗಿ ಅಲ್ಲಿ ಭಿನ್ನ ಸ್ವೀಕರಿಸಿ ಬರುತ್ತಾರೆ. ಈ ರೀತಿ ಭಕ್ತರಿಂದ ಭಿನ್ನ ಸ್ವೀಕರಿಸಿ ಬರುವ ಸ್ವಾಮೀಜಿಗಳು ನಗರದ ಭಕ್ತರನ್ನು ಮಠಕ್ಕೆ ಊಟಕ್ಕೆ ಬರುವಂತೆ ಯಾಕೆ ಅಹ್ವಾನಿಸಬಾರದು ಎಂಬ ಚಿಂತನೆಶಾಂತವಿರೇಶ್ವರರು ನಡೆಸಿದ್ದರಂತೆ. ಅದರಂತೆ ವರ್ಷದ ಒಂದು ದಿನ ನಗರದ ಭಕ್ತರನ್ನ ಸಿಂದಗಿ ಮಠದ ಭಕ್ತರು ಮಠಕ್ಕೆ ಅಹ್ವಾನಿಸಿ ಅವರಿಗೆ ಊಟ ನೀಡುತ್ತಾರೆ. ಇದಕ್ಕೆ ಸ್ಥಳೀಯವಾಗಿ ಊರೋಟಾ ಎಂದೇ ಕರೆಯಲಾಗುತ್ತದೆ.
ಸ್ವಾಮೀಜಿಗಳಿಂದ ಮಠದ ಭಕ್ತರಿಗೆ ಊರೋಟಾ ಮನೆ ಮನೆಗೆ ತೆರಳುವ ಸ್ವಾಮೀಜಿಗಳು ಮಠದಲ್ಲಿ ಇಂತಹ ದಿನ ಊರೋಟಾ ಇದೆ ಎಂದು ತಿಳಿಸಿ ಮಠಕ್ಕೆ ಬರುವಂತೆ ಮನವಿ ಮಾಡುತ್ತಾರೆ. ಮಠಕ್ಕೆ ಅಹ್ವಾನಿಸಿದ ಸ್ವಾಮೀಜಿ ತಾವೇ ಅಹಾರ ತಯಾರಿಸಿ ತಾವೇ ಭಕ್ತರಿಗೆ ಉಣಬಡಿಸುತ್ತಾರೆ. ಅಷ್ಟೇ ಅಲ್ಲದೇ, ಭಕ್ತರು ಉಂಡ ತಟ್ಟೆಗಳನ್ನು ಸಹ ಸ್ವಾಮೀಜಿಗಳೇ ತೊಳೆಯುತ್ತಾರೆ. ಈ ಕಾರ್ಯಕ್ಕೆ ಪಾಠ ಶಾಲೆಯ ಹಿಂದಿನ ವಿದ್ಯಾರ್ಥಿಗಳು ಸಾಥ್ ನೀಡುತ್ತಾರೆ. ಹಾವೇರಿ ನಗರವಾಸಿಗಳು ವಟುಗಳನ್ನು ವರ್ಷಪೂರ್ತಿ ಸ್ವಾಮೀಜಿಗಳನ್ನಾಗಿ ನೋಡಿದರೆ, ಈ ದಿನ ಮಠದ ಸ್ವಾಮೀಜಿಗಳು ನಗರದ ಭಕ್ತರಲ್ಲಿ ಸ್ವಾಮೀಜಿಯನ್ನು ಕಾಣುತ್ತಾರೆ. ಇಂತಹ ಸಂಪ್ರದಾಯ ರಾಜ್ಯದಲ್ಲಿ ಎಲ್ಲಿಯೂ ಇಲ್ಲ ಎಂಬ ಅಭಿಪ್ರಾಯವನ್ನು ಸ್ವಾಮಿಜಿಗಳು ವ್ಯಕ್ತಪಡಿಸುತ್ತಾರೆ. ಕಲ್ಯಾಣದಲ್ಲಿನ ಮಹಾದಾಸೋಹ ಪ್ರತಿರೂಪದಂತಿರುವ ಈ ಊರೋಟದಲ್ಲಿ ಸಹಸ್ರಾರು ಸಂಖ್ಯೆಯ ಭಕ್ತರು ಪಾಲ್ಗೊಳ್ಳುವುದು ವಿಶೇಷ. ಮಠದ ಶಾಂತವಿರೇಶ್ವರ ಶ್ರೀಗಳ ಪುಣ್ಯ ಸ್ಮರಣೋತ್ಸವ ಆಚರಿಸುವ ದಿನಗಳಲ್ಲಿ ಈ ಸಂಪ್ರದಾಯ ಆಚರಿಸಿಕೊಂಡು ಬರಲಾಗುತ್ತಿದೆ.