ಕರ್ನಾಟಕ

karnataka

ETV Bharat / state

ಆಲದಕಟ್ಟಿ ಅಗ್ನಿ ಅವಘಡಕ್ಕೆ ವೆಲ್ಡಿಂಗ್ ಕಿಡಿ ಕಾರಣ: 27 ಪಟಾಕಿ ಅಂಗಡಿಗಳಿಗೆ ಬೀಗ ಜಡಿದ ಹಾವೇರಿ ಜಿಲ್ಲಾಡಳಿತ - ಪಟಾಕಿ ಗೋದಾಮಿನಲ್ಲಿ ಅಗ್ನಿ ಅವಘಡ

ಪಟಾಕಿ ಗೋದಾಮಿನಲ್ಲಿ ನಡೆದ ಅಗ್ನಿ ಅವಘಡಕ್ಕೆ ವೆಲ್ಡಿಂಗ್ ಕಿಡಿ ಕಾರಣ ಎಂದು ಡಿಸಿ ರಘುನಂದನಮೂರ್ತಿ ಹೇಳಿದ್ದಾರೆ. ಅನಾಹುತದ ಬೆನ್ನಲ್ಲೇ ಜಿಲ್ಲೆಯ 27 ಪಟಾಕಿ ಅಂಗಡಿಗಳಿಗೆ ಬೀಗ ಬಿದ್ದಿದೆ.

firecrackers shop fire
ಪಟಾಕಿ ಅಂಗಡಿ ಅಗ್ನಿ ಅವಘಡ

By ETV Bharat Karnataka Team

Published : Sep 3, 2023, 7:17 AM IST

ಹಾವೇರಿ:ಜಿಲ್ಲೆಯ ಆಲದಕಟ್ಟಿ ಗ್ರಾಮದಲ್ಲಿ ನಡೆದ ಪಟಾಕಿ ದುರಂತಕ್ಕೆ ವೆಲ್ಡಿಂಗ್ ಕಿಡಿ ಕಾರಣ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ ಎಂದು ಹಾವೇರಿ ಜಿಲ್ಲಾಧಿಕಾರಿ
ರಘುನಂದನಮೂರ್ತಿ ಹೇಳಿದ್ದಾರೆ. ಶನಿವಾರ ಹಾವೇರಿಯಲ್ಲಿ ಮಾತನಾಡಿದ ಅವರು, ಈ ಕುರಿತಂತೆ ಅಪರ ಜಿಲ್ಲಾಧಿಕಾರಿ ನೇತೃತ್ವದಲ್ಲಿ ತಂಡ ರಚಿಸಿದ್ದು, ಅವರು ವಾರದಲ್ಲಿ ತನಿಖಾ ವರದಿ ಸಲ್ಲಿಸಲಿದ್ದಾರೆ. ತನಿಖಾ ವರದಿಯ ನಂತರ ಮುಂದಿನ ಕ್ರಮ ಕೈಗೊಳ್ಳುವುದಾಗಿ ಮಾಹಿತಿ ನೀಡಿದರು.

ಆಲದಕಟ್ಟಿ ಗ್ರಾಮದ ದುರಂತದ ನಂತರ ಜಿಲ್ಲಾಡಳಿತ ಸಾಕಷ್ಟು ಮುನ್ನೆಚ್ಚರಿಕೆ ವಹಿಸಿದೆ. ಜಿಲ್ಲೆಯಲ್ಲಿ ಅನುಮತಿ ಪಡೆದ ಪಟಾಕಿ ಅಂಗಡಿಗಳ ಪರಿಶೀಲನೆ ನಡೆಸಿದ್ದೇವೆ. ಅನುಮತಿ ಪಡೆದ ಸುಮಾರು 27 ಪಟಾಕಿ ಅಂಗಡಿಗಳಿಗೆ ಬೀಗ ಹಾಕಿ, ದಾಖಲಾತಿಗಳ ಪರಿಶೀಲನೆ ನಡೆಸುತ್ತಿದ್ದೇವೆ. ಎಲ್ಲ ದಾಖಲಾತಿಗಳು ಸರಿ ಇದ್ದರೆ ಮಾತ್ರ ಅವರಿಗೆ ಮತ್ತೆ ಅಂಗಡಿ ತೆರೆಯಲು ಅವಕಾಶ ನೀಡುತ್ತೇವೆ. ಅನುಮತಿಯಿಲ್ಲದೆ ಕೆಲ ಸಣ್ಣಪುಟ್ಟ ಅಂಗಡಿಗಳಲ್ಲಿದ್ದ ಪಟಾಕಿಗಳನ್ನು ನಾಶಪಡಿಸಲಾಗಿದೆ. 27 ಅಂಗಡಿಗಳಲ್ಲಿ ಸುಮಾರು 2 ಸಾವಿರ ತೂಕದ ಪಟಾಕಿ ಪತ್ತೆಯಾಗಿದೆ. ಇವುಗಳೆನ್ನೆಲ್ಲಾ ಸೀಲ್ ಮಾಡಿ, ಅಂಗಡಿಗಳ ವಿದ್ಯುತ್ ಸಂಪರ್ಕ ಕಡಿತಗೊಳಿಸಿರುವುದಾಗಿ ಜಿಲ್ಲಾಧಿಕಾರಿ ತಿಳಿಸಿದರು.

ಆಲದಕಟ್ಟಿ ಅಗ್ನಿ ಅವಘಡ

27 ಅಂಗಡಿಗಳ ಮಾಲಿಕರಿಗೆ ನೊಟೀಸ್ ನೀಡಿ, ದಾಖಲಾತಿಗಳನ್ನು ಸಲ್ಲಿಸುವಂತೆ ಸೂಚನೆ ನೀಡಿದ್ದೇವೆ. ದಾಖಲಾತಿ ಪರಿಶೀಲನೆಯ ಬಳಿಕ ಮುಂದಿನ ಕ್ರಮ ಕೈಗೊಳ್ಳುತ್ತೇವೆ. ಜಿಲ್ಲೆಯಲ್ಲಿ ಪಟಾಕಿ ಮಾರಾಟ ಕುರಿತಂತೆ ನಗರಪ್ರದೇಶಗಳಲ್ಲಿ ಸ್ಥಳ ನಿಗದಿ ಮಾಡುತ್ತೇವೆ. ನಿಗದಿತ ಸ್ಥಳದಲ್ಲಿ ನಿಗದಿತ ಸಮಯದಲ್ಲಿ ಪಟಾಕಿ ಮಾರಾಟ ಮಾಡಲು ಅವಕಾಶ ಕಲ್ಪಿಸಲಾಗುವುದು. ತೆರೆದ ಸ್ಥಳಗಳಲ್ಲಿ ಮಾತ್ರ ಮಾರಾಟಕ್ಕೆ ಅವಕಾಶ ಕಲ್ಪಿಸುತ್ತೇವೆ. ಅಂಗಡಿಗಳಲ್ಲಿ ಮಾರಾಟಕ್ಕೆ ಅವಕಾಶ ನೀಡುವುದಿಲ್ಲ ಎಂದು ಜಿಲ್ಲಾಧಿಕಾರಿ ಸ್ಪಷ್ಟಪಡಿಸಿದರು. ಆಲದಕಟ್ಟಿ ಪಟಾಕಿ ಗೋದಾಮಿನಲ್ಲಿ ನಡೆದ ಅವಘಡದಲ್ಲಿ ನಾಲ್ಕು ಮಂದಿ ಅಮಾಯಕರು ಪ್ರಾಣ ಕಳೆದುಕೊಂಡಿದ್ದು ಬೇಸರ ತರಿಸಿದೆ ಎಂದು ಜಿಲ್ಲಾಧಿಕಾರಿ ಇದೇ ವೇಳೆ ಹೇಳಿದರು.

ಹಾವೇರಿ ಎಸ್ಪಿ ಶಿವಕುಮಾರ್ ಗುಣಾರೆ ಮಾತನಾಡಿ, ಆರೋಪಿಗಳ ಬಂಧನಕ್ಕೆ ಜಾಲ ಬೀಸಲಾಗಿದೆ. ಪ್ರಕರಣದಲ್ಲಿ ತಪ್ಪಿತಸ್ಥರ ಮೇಲೆ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖಾಧಿಕಾರಿ ನೇಮಿಸಲಾಗಿದೆ. ಆದಷ್ಟು ಬೇಗ ತಪ್ಪಿತಸ್ಥರು ಯಾರೆಂಬುದು ತಿಳಿಯಲಿದೆ ಎಂದರು.

ಆಗಸ್ಟ್ 29ರಂದು ಆಲದಕಟ್ಟಿ ಗ್ರಾಮದ ಪಟಾಕಿ ಅಂಗಡಿ ಮತ್ತು ಗೋದಾಮಿನಲ್ಲಿ ಬೆಂಕಿ ಹೊತ್ತಿಕೊಂಡು ನಾಲ್ವರು ಮೃತಪಟ್ಟಿದ್ದು, ಕೆಲವರು ಗಾಯಗೊಂಡಿದ್ದರು. ಸಿಎಂ ಸಿದ್ದರಾಮಯ್ಯ ಸರ್ಕಾರದಿಂದ ಮೃತರ ಕುಟುಂಬಗಳಿಗೆ ತಲಾ 5 ಲಕ್ಷ ರೂ ಪರಿಹಾರ ಘೋಷಿಸಿದ್ದರು.

ಇದನ್ನೂ ಓದಿ: ಹಾವೇರಿ: ಪಟಾಕಿ ದಾಸ್ತಾನು ಗೋದಾಮಿಗೆ ಬೆಂಕಿ... ಸಾವಿನ ಸಂಖ್ಯೆ 4ಕ್ಕೆ ಏರಿಕೆ... ಮೃತರ ಕುಟುಂಬಗಳಿಗೆ ತಲಾ 5 ಲಕ್ಷ ರೂ ಪರಿಹಾರ ಘೋಷಿಸಿದ ಸಿಎಂ

ABOUT THE AUTHOR

...view details