ಹಾವೇರಿ: ತಾಲೂಕಿನ ಅಕ್ಕೂರು ಗ್ರಾಮದ 71 ಬಗರ್ ಹುಕುಂ ಸಾಗುವಳಿದಾರರು ಇದೀಗ ರಾಷ್ಟ್ರಪತಿಗಳಿಗೆ ದಯಾಮರಣಕ್ಕಾಗಿ ಪತ್ರ ಬರೆದಿದ್ದಾರೆ. ಹೌದು, ಇವರು ಸಾಗುವಳಿ ಮಾಡಿಕೊಂಡು ಬಂದಿದ್ದ ಜಮೀನಿನಲ್ಲಿ ಸರ್ಕಾರ 11 ಯೋಜನೆಗಳ ಕಾಮಗಾರಿ ನಡೆಸಲು ಮುಂದಾಗಿರುವದು ಇದಕ್ಕೆ ಕಾರಣ.
ಗ್ರಾಮದ 71 ಸಾಗುವಳಿದಾರರು 151 ಎಕರೆ ಪ್ರದೇಶದಲ್ಲಿ ಕಳೆದ ಹಲವಾರು ವರ್ಷಗಳಿಂದ ಸಾಗುವಳಿ ಮಾಡಿಕೊಂಡು ಬಂದಿದ್ದೇವೆ. ಈಗ ನಮ್ಮನ್ನು ಒಕ್ಕಲೆಬ್ಬಿಸುತ್ತಿರುವುದು ಸರಿಯಲ್ಲ. ನಮಗೆ ಮೊದಲು ದಯಾಮರಣ ನೀಡಿ, ನಂತರ ಯೋಜನೆ ಕಾಮಗಾರಿ ಕೈಗೊಳ್ಳಿ ಅಂತಿದ್ದಾರೆ ಈ ರೈತರು.
ಬಗರ್ ಹುಕುಂ ಜಮೀನಿನಲ್ಲಿ ಸರ್ಕಾರದ ಕಾಮಗಾರಿ: ದಯಾಮರಣ ಕೋರಿ ರಾಷ್ಟ್ರಪತಿಗೆ ರೈತರ ಪತ್ರ ಅಕ್ಕೂರು ಗ್ರಾಮದ 71 ರೈತರು ಸರ್ವೇ ನಂಬರ್ 98-02-ಇ ನಲ್ಲಿ ಬಗರ್ ಹುಕ್ಕುಂ ಸಾಗುವಳಿ ಮಾಡಿಕೊಂಡು ಬಂದಿದ್ದಾರೆ. ಆದರೆ ಸರ್ಕಾರದ ಹಲವು ಯೋಜನೆಗಳ ಅನುಷ್ಠಾನಕ್ಕಾಗಿ ಈ 71 ರೈತರನ್ನು ಒಕ್ಕಲೆಬ್ಬಿಸಲಾಗುತ್ತಿದೆ ಎಂಬ ಆರೋಪಗಳು ಕೇಳಿಬಂದಿವೆ.
ಕಳೆದ ಹಲವು ವರ್ಷಗಳಿಂದ 151 ಎಕರೆ ಪ್ರದೇಶದಲ್ಲಿ ಅಕ್ಕೂರು ಗ್ರಾಮದ ಹಿಂದುಳಿದ ಪಂಗಡದವರು ಇಲ್ಲಿ ಕೃಷಿ ಮಾಡಿಕೊಂಡು ಬಂದಿದ್ದೇವೆ. ಅಲ್ಲದೇ ಈ ಭೂಮಿಯಲ್ಲಿ ಕೊಳವೆ ಬಾವಿ ಹಾಕಿಸಿ ಗೋವಿನೋಳ, ಜೋಳ, ಸೋಯಾಬಿನ್ ಪೇರಲ ಸೇರಿದಂತೆ ವಿವಿಧ ಬೆಳೆಗಳನ್ನು ಬೆಳೆದಿದ್ದೇವೆ. ಇದೀಗ ಸರ್ಕಾರ ಇಲ್ಲಿ ಯೋಜನೆ ಅನುಷ್ಠಾನಕ್ಕೆ ಮುಂದಾಗಿರುವುದರಿಂದ ದಯಾಮರಣಕ್ಕೆ ಅರ್ಜಿ ಸಲ್ಲಿಸಿರುವುದಾಗಿ ತಿಳಿಸುತ್ತಾರೆ ಸ್ಥಳೀಯ ರೈತರು.
ಸ್ಥಳೀಯವಾಗಿ ಸರ್ಕಾರದ ನೂರಾರು ಎಕರೆ ಜಾಗ ಖಾಲಿ ಇದೆ. ಅದನ್ನೆಲ್ಲ ಬಿಟ್ಟು ತಮ್ಮ ಬಗರ್ ಹುಕುಂ ಸಾಗುವಳಿ ಮಾಡುವ ಜಮೀನಿನ ಮೇಲೆ ಕಣ್ಣು ಹಾಕಿದ್ದಾರೆಂದು ಸಾಗುವಳಿದಾರರು ತೀವ್ರ ಆತಂಕ ವ್ಯಕ್ತಪಡಿಸಿದ್ದಾರೆ. ಈ ಹಿಂದೆ ಸಹ ಈ ರೀತಿಯ ಘಟನೆಗಳು ನಡೆದಿದ್ದು, ಅದರ ವಿರುದ್ಧ ಸಾಗುವಳಿದಾರರು ಹೋರಾಟ ಮಾಡಿ ಯಶಸ್ವಿಯಾಗಿದ್ದರು. ಆದರೆ ಪ್ರಸ್ತುತ ಸರ್ಕಾರದ ಯೋಜನೆಗಳಿಗಾಗಿ ತಮ್ಮ ಜಮೀನು ಸ್ವಾಧೀನ ಪಡಿಸಿಕೊಳ್ಳುತ್ತಿರುವುದಕ್ಕೆ ಸ್ಥಳೀಯರು ದಯಾಮರಣ ಕೋರಿದ್ದಾರೆ.
ಇದನ್ನೂ ಓದಿ:ಹಳ್ಳದ ನೀರಿನಲ್ಲಿ ಕೊಚ್ಚಿ ಹೋದ ಹೊಸಪೇಟೆಯ ದಂಪತಿ: ಪತಿ ಮೃತದೇಹ ಪತ್ತೆ, ಪತ್ನಿಗಾಗಿ ಶೋಧ
ಈಗಾಗಲೇ ಇಲ್ಲಿಯ ಹಲವು ರೈತರಿಗೆ ಸರ್ಕಾರ ಬಗರ್ ಹುಕುಂ ಸಾಗುವಳಿಯ ಪಟ್ಟಾ ನೀಡಿದೆ. ಇನ್ನೂ ಕೆಲವರಿಗೆ ಪಟ್ಟಾ ನೀಡುವ ಹಂತದಲ್ಲಿದೆ. ಕಳೆದ ಹಲವು ವರ್ಷಗಳಿಂದ ಜಮೀನು ಇಲ್ಲದೇ ತಮಗೆ ಬಗರ್ ಹುಕುಂ ಸಾಗುವಳಿ ಜೀವನದ ದಾರಿಯಾಗಿತ್ತು. ಅದಕ್ಕಾಗಿ ಈ ವರ್ಷ ಮುಂಗಾರಿನಲ್ಲಿ ತಾವು ಬಿತ್ತನೆ ಮಾಡಿದ್ದು ಬೆಳೆಗಳು ಸಹ ಹುಲುಸಾಗಿ ಬೆಳೆಯಲಾರಂಭಿಸಿವೆ. ಈ ಸಂದರ್ಭದಲ್ಲಿ ವಿವಿಧ ಯೋಜನೆಗಳಿಗೆ ಬಗರ್ ಹುಕುಂ ಸಾಗುವಳಿಯ ಜಮೀನಿನ ಬಳಕೆಗೆ ಮುಂದಾಗಿರುವುದು ಸ್ಥಳೀಯರಿಗೆ ದಿಕ್ಕು ದೋಚದಂತಾಗಿದೆ.