ಕರ್ನಾಟಕ

karnataka

ETV Bharat / state

ಬಯಲು ಸೀಮೆಯಲ್ಲೂ ಶ್ರೀಗಂಧ, ಅಡಿಕೆ, ಸಾಗುವಾನಿ ಮರ: ನಳನಳಿಸುತ್ತಿವೆ ವಾಣಿಜ್ಯ ಬೆಳೆ

ಹಾವೇರಿ ಜಿಲ್ಲೆಯಲ್ಲಿ ರೈತರಿಬ್ಬರು ತಮ್ಮ ಸಾಂಪ್ರದಾಯಿಕ ಬೆಳೆಗಳನ್ನು ಬಿಟ್ಟು ಅಡಿಕೆ ಮತ್ತು ಶ್ರೀಗಂಧದ ಮರಗಳನ್ನು ಬೆಳೆಸುತ್ತಿದ್ದು, ಉತ್ತಮ ಲಾಭದ ನಿರೀಕ್ಷೆಯಲ್ಲಿದ್ದಾರೆ.

ಶ್ರೀಗಂಧ, ಅಡಿಕೆ, ಸಾಗುವಾನಿ ಮರ
ಶ್ರೀಗಂಧ, ಅಡಿಕೆ, ಸಾಗುವಾನಿ ಮರ

By ETV Bharat Karnataka Team

Published : Jan 1, 2024, 4:59 PM IST

Updated : Jan 1, 2024, 8:27 PM IST

ಬಯಲು ಸೀಮೆಯಲ್ಲೂ ಶ್ರೀಗಂಧ, ಅಡಿಕೆ, ಸಾಗುವಾನಿ ಮರ: ನಳನಳಿಸುತ್ತಿವೆ ವಾಣಿಜ್ಯ ಬೆಳೆ

ಹಾವೇರಿ: ಉಮೇಶ್ ಬಳ್ಳಾರಿ​ ಮತ್ತು ರಮೇಶ್​ ಬಳ್ಳಾರಿ​ ಹಾವೇರಿ ಜಿಲ್ಲೆ ಬ್ಯಾಡಗಿ ತಾಲೂಕಿನ ಮೋಟೆಬೆನ್ನೂರು ಗ್ರಾಮದ ರೈತರು. ಇವರು ಕಳೆದ ಹಲವು ವರ್ಷಗಳಿಂದ ಸಾಂಪ್ರದಾಯಿಕ ಬೆಳೆಗಳನ್ನು ಬೆಳೆಯುತ್ತಿದ್ದರು. ಅದರಲ್ಲಿ ರಾಸಾಯನಿಕ ಗೊಬ್ಬರ ಬಳಕೆ, ಕೂಲಿಯಾಳುಗಳ ಸಮಸ್ಯೆ ಸೇರಿದಂತೆ ಹಲವು ಅಡೆತಡೆಗಳಿದ್ದವು. ಸಾಕಷ್ಟು ಶ್ರಮವಹಿಸಿದರು ಸಹ ಅತಿವೃಷ್ಟಿ, ಅನಾವೃಷ್ಟಿಯಿಂದ ಇನ್ನಿಲ್ಲದ ಸಮಸ್ಯೆಗಳು ಎದುರಾಗುತ್ತಿದ್ದವು. ಈ ರೈತರು ಇದೀಗ ಸಾಂಪ್ರದಾಯಿಕ ಬೆಳೆಗಳಿಗೆ ತಿಲಾಂಜಲಿ ಇಟ್ಟು, ತೋಟಗಾರಿಕಾ ಬೆಳೆಗಳತ್ತ ಮುಖ ಮಾಡಿದ್ದಾರೆ. ತಮಗೆ ಇರುವ ಆರು ಎಕರೆ ಆರು ಗುಂಟೆ ಜಮೀನಿನಲ್ಲಿ ಕಳೆದ ಆರು ವರ್ಷಗಳ ಹಿಂದೆ ಶ್ರೀಗಂಧ ಮತ್ತು ಅಡಿಕೆ ಮರಗಳನ್ನು ನೆಟ್ಟಿದ್ದಾರೆ.

ರೈತ ಮಲ್ಲಿಕಾರ್ಜುನರಿಂದ ಮಾಹಿತಿ: ಈ ಜಮೀನಿನಲ್ಲಿ ಸುಮಾರು 3,000 ಶ್ರೀಗಂಧ ಮತ್ತು 2,000 ಅಡಿಕೆ ಹಾಗೂ 400 ಸಾಗುವಾನಿ ಸೇರಿದಂತೆ ವಿವಿಧ ಗಿಡಗಳನ್ನು ನೆಟ್ಟು ಪೋಷಣೆ ಮಾಡಲಾಗುತ್ತಿದೆ. ಸತತ ಪೋಷಣೆಯಿಂದಾಗಿ ಮರಗಳು ಹಸಿರು ಹೊದ್ದು ನಿಂತಿವೆ. 2000 ಅಡಿಕೆ ಗಿಡಗಳ ಪೈಕಿ ಸುಮಾರು 800 ಮರಗಳು ಅಡಿಕೆ ಬಿಡಲಾರಂಭಿಸಿವೆ. ಉಳಿದ 1,200 ಅಡಿಕೆ ಮರಗಳು ಇನ್ನೆರಡು ವರ್ಷಗಳಲ್ಲಿ ಫಸಲು ಬಿಡಲಾರಂಭಿಸುತ್ತವೆ. ವರ್ಷಕ್ಕೆ ಎರಡು ಬಾರಿ ಅಡಿಕೆ ಮರಗಳು ಫಸಲು ನೀಡುವುದರಿಂದ ಇನ್ಮುಂದೆ ನಮಗೆ ಆರು ಎಕರೆ ಆರು ಗುಂಟೆ ಜಮೀನು ನಿರ್ವಹಣೆ ಮಾಡಲು ನೆರವಾಗಲಿದೆ. ಇಲ್ಲಿ ಕೆಂಪು ಮಣ್ಣು ಇರುವುದರಿಂದ ವರ್ಷಕ್ಕೊಮ್ಮೆ ಕಪ್ಪು ಮಣ್ಣು ಹಾಕಲಾಗುತ್ತದೆ.

ಶ್ರೀಗಂಧ ಗಿಡ ನೆಟ್ಟು ಆರು ವರ್ಷಗಳಾಗಿದ್ದು, ಬಹುತೇಕ ಗಿಡಗಳು ಮರಗಳಾಗುತ್ತಿವೆ. ಮುಂದಿನ ನಾಲ್ಕು ವರ್ಷ ಇವುಗಳ ಭದ್ರತೆಗೆ ಸಮಸ್ಯೆಯಿಲ್ಲಾ. ಅರಣ್ಯ ಇಲಾಖೆ ಸಹಕಾರದಿಂದ ಕೋಲಾರದಿಂದ ಉತ್ತಮ ತಳಿಯ ಶ್ರೀಗಂಧದ ಸಸಿಗಳನ್ನು ತಂದು ನೆಡಲಾಗಿದೆ. ಶ್ರೀಗಂಧ ಗಿಡ ನೆಟ್ಟು 18 ವರ್ಷ ಬೆಳೆದ ನಂತರ ಕಟಾವು ಮಾಡಲು ಅನುಮತಿ ಇದೆ. ಮರವನ್ನು 20 ವರ್ಷದ ನಂತರವೂ ಕಟಾವು ಮಾಡಬಹುದು. ಆದರೆ ನಾವು 18 ವರ್ಷದ ಬದಲು 20 ವರ್ಷಕ್ಕೆ ಶ್ರೀಗಂಧಮರ ಕಟಾವಿಗೆ ವಿಚಾರ ಮಾಡಿದ್ದೇವೆ ಎನ್ನುತ್ತಾರೆ ರೈತ ಮಲ್ಲಿಕಾರ್ಜುನ.

ಸರ್ಕಾರದಿಂದ ಪ್ರತಿ ಮರಕ್ಕೆ 50 ರೂ. ನೆರವು; ಇನ್ನು ಪ್ರತಿ ಶ್ರೀಗಂಧ ಮರದ ಪೋಷಣೆಗೆ ಸರ್ಕಾರವೇ ಪ್ರತಿವರ್ಷ 50 ರೂಪಾಯಿ ಹಣ ನೀಡುತ್ತದೆ. ಸದ್ಯ ಶ್ರೀಗಂಧದ ಕಟ್ಟಿಗೆಗೆ ಕೆ.ಜಿಗೆ 2,250 ರೂಪಾಯಿ ಬೆಲೆ ಇದೆ. ಇದು 14 ವರ್ಷದ ನಂತರ ಎಷ್ಟಾಗುತ್ತೆ ಅನ್ನೋದನ್ನು ಕಾದು ನೋಡಬೇಕು. ಇದೇ ರೀತಿ ಬೆಲೆ ಇದ್ದರೆ 14 ವರ್ಷಕ್ಕೆ ತಮಗೆ 15 ಕೋಟಿಗೂ ಅಧಿಕ ಆದಾಯ ಸಿಗಲಿದೆ. ಸರ್ಕಾರವೇ ಶ್ರೀಗಂಧ ಮರಗಳನ್ನು ಖರೀದಿಸಲಿದೆ. ಶ್ರೀಗಂಧ ಮರದ ಬೇರು, ಮೂರು ಅಡಿಯವರೆಗಿನ ಕಾಂಡ ಮತ್ತು ನಂತರದ ಕಾಂಡಕ್ಕೆ ಅಂತಾ ಪ್ರತ್ಯೇಕ ದರವಿದೆ.

ಅದರಂತೆ ದರ ನೀಡಿ ಸರ್ಕಾರ ನಮ್ಮಿಂದ ಶ್ರೀಗಂಧ ಖರೀದಿಸುತ್ತೆ. ಒಂದು ವೇಳೆ ಸರ್ಕಾರದ ಬೆಲೆ ಕಡಿಮೆಯಾದರೆ ಖಾಸಗಿಯಾಗಿ ಮಾರಲು ಸಹ ನಮಗೆ ಅವಕಾಶವಿದೆ. ಹೀಗಾಗಿ ಶ್ರೀಗಂಧ ಬೆಳೆಯುವದು ಅಷ್ಟು ಕ್ಲಿಷ್ಟಕರವಲ್ಲ. ಇನ್ನು ಭದ್ರತೆ ಬೇಕು ಎಂದರೇ ಪೊಲೀಸ್​ ಇಲಾಖೆಯಿಂದಲೂ ಭದ್ರತೆ ಪಡೆಯಬಹುದು. ಬಹುತೇಕ ಶ್ರೀಗಂಧ ಗಿಡ ನೆಟ್ಟ 10 ವರ್ಷದ ನಂತರ ಭದ್ರತೆ ಬೇಕಾಗುತ್ತದೆ. ಇದುವರೆಗೆ ನಮ್ಮ ತೋಟದಲ್ಲಿ ಒಂದೇ ಒಂದು ಕಳ್ಳತನ ನಡೆದಿಲ್ಲಾ ಅದಕ್ಕಾಗಿ ನಾವು ವಿಶೇಷವಾದ ಕಾಳಜಿ ವಹಿಸಿದ್ದೇವೆ.

ಸಾವಯವ ಕೃಷಿ; ಈ ಬೆಳೆಗಳಿಗೆ ಈವರೆಗೆ ಯಾವುದೇ ರಾಸಾಯನಿಕ ಗೊಬ್ಬರ ಬಳಕೆ ಮಾಡಿಲ್ಲಾ. ಹಸಿರೆಲೆ ಗೊಬ್ಬರ, ಸೆಣಬು ಮಚ್ಲಿಂಗ್, ಕೋಳಿಗೊಬ್ಬರ ಸೇರಿದಂತೆ ಸಾವಯುವ ಗೊಬ್ಬರವನ್ನು ಬಳಕೆ ಮಾಡಲಾಗುತ್ತದೆ. ಅಡಿಕೆ ಮತ್ತು ಶ್ರೀಗಂಧ ಮರಗಳಿಗೆ ಜೀವಾಮೃತ ಸೇರಿದಂತೆ ಸಾವಯುವ ಜೀವಾಂಶವನ್ನು ನೀಡಲಾಗುತ್ತದೆ. ಆರು ಎಕರೆ ಆರು ಗುಂಟೆ ಜಮೀನಿಗಾಗಿ ಮೂರು ಕೊಳವೆ ಬಾವಿಗಳನ್ನು ಕೊರೆಸಲಾಗಿದೆ. ಅದರಲ್ಲಿ ಈಗ ಸದ್ಯ ಒಂದು ಕೊಳವೆ ಬಾವಿಯ ನೀರು ಬಳಕೆ ಮಾಡಿಕೊಳ್ಳಲಾಗುತ್ತದೆ. ಹನಿ ನೀರಾವರಿ ವ್ಯವಸ್ಥೆ ಮಾಡಿದ್ದು, ಮೂರು ವರ್ಷದ ನಂತರ ಶ್ರೀಗಂಧ ಮರಗಳಿಗೆ ನೀರು ಪೂರೈಕೆ ಮಾಡಲಾಗುತ್ತಿಲ್ಲಾ. ಅಡಿಕೆ ಬೆಳೆಗಳಿಗೆ ಪೂರೈಸುವ ನೀರು ಶ್ರೀಗಂಧ ಮರ ಹೀರಿಕೊಳ್ಳುತ್ತೆ ಎಂದು ರೈತ ಮಲ್ಲಿಕಾರ್ಜುನವಿವರಿಸಿದ್ದಾರೆ.

ಉಮೇಶ್​ ಮತ್ತು​ ರಮೇಶ್​ ಶ್ರೀಗಂಧ ಮರ ಹಚ್ಚಿದ ನಂತರ ಅಕ್ಕಪಕ್ಕದ ರೈತರು ಸಹ ಶ್ರೀಗಂಧ ಬೆಳೆಯಲು ಮುಂದಾಗಿದ್ದಾರೆ. ಇವರು ಗಿಡ ಹಚ್ಚಿದ ನಂತರ ಸುತ್ತಮುತ್ತಲ ಸುಮಾರು 10 ಸಾವಿರ ಗಿಡಗಳನ್ನು ರೈತರು ಬೆಳೆಸಿದ್ದಾರೆ. ತೋಟದಲ್ಲಿ ಹಸಿರು ನಳನಳಿಸುತ್ತಿದ್ದು, ಶ್ರೀಗಂಧ ಮತ್ತು ಅಡಿಕೆ ಮರಗಳು ಸೋಂಪಾಗಿ ಬೆಳೆದಿವೆ. ಇದರಿಂದ ನಾವೂ ಸಹ ಸ್ಫೂರ್ತಿ ಪಡೆದಿದ್ದು, ಸಾಂಪ್ರದಾಯಿಕ ಬೆಳೆಯಿಂದ ಹೊರಬಂದು, ಇಂತಹ ವಾಣಿಜ್ಯ ಬೆಳೆ ಬೆಳೆಯಲು ಮುಂದಾಗುತ್ತೇವೆ ಎನ್ನುತ್ತಾರೆ ರೈತರಾದ ಶಿವಾನಂದ ಮೈಲಾರ ಮತ್ತು ನಂದೀಶ್​ ಬೇವಿನಮರದ.

ಈ ಮರಗಳು ಇನ್ನು ಉತ್ತಮವಾಗಿ ಬೆಳೆದು ರೈತರಿಗೆ ಅಧಿಕ ಲಾಭತರಲಿ, ಬೇರೆ ರೈತರು ಸಹ ಇಂತಹ ಸಾವಯವ ಕೃಷಿ ಆರಂಭಿಸಿ ಉತ್ತಮ ಆದಾಯ ಗಳಿಸಲಿ ಎನ್ನುವುದು ನಮ್ಮ ಆಶಯ.

ಇದನ್ನೂ ಓದಿ:ಬೆಂಕಿ ತಗುಲಿ 300ಕ್ಕೂ ಅಧಿಕ ಅಡಿಕೆ ಮರಗಳು ನಾಶ

Last Updated : Jan 1, 2024, 8:27 PM IST

ABOUT THE AUTHOR

...view details