20 ಗುಂಟೆ ಜಮೀನಲ್ಲಿ ಡ್ರಾಗನ್ ಫ್ರೂಟ್ ಬೆಳೆದ ರೈತ ಹಾವೇರಿ: ಜಿಲ್ಲೆಯಲ್ಲಿ ಇದೀಗ ಡ್ರಾಗನ್ ಫ್ರೂಟ್ ಬೆಳೆಗಾರರ ಸಂಖ್ಯೆ ಬೆಳೆಯಲಾರಂಭಿಸಿದೆ. ವರ್ಷದಿಂದ ವರ್ಷಕ್ಕೆ ಈ ಬೆಳೆಯ ಆಕರ್ಷಣೆಗೆ ಒಳಗಾಗುತ್ತಿರುವ ರೈತರು ವಿದೇಶಿ ಹಣ್ಣಿನ ಬೇಸಾಯಕ್ಕೆ ಮಾರು ಹೋಗುತ್ತಿದ್ದಾರೆ. ಆರಂಭದಲ್ಲಿ ಜಿಲ್ಲೆಯಲ್ಲಿ ಒಬ್ಬರಿಂದ ಆರಂಭವಾದ ಡ್ರಾಗನ್ ಫ್ರೂಟ್ ಬೆಳೆಗಾರರ ಸಂಖ್ಯೆ ಇದೀಗ ಐದಕ್ಕೆ ಏರಿಕೆಯಾಗಿದೆ.
ಹಾವೇರಿ ತಾಲೂಕು ಕಬ್ಬೂರು ಗ್ರಾಮದ ಈರಪ್ಪ ದಿಡ್ಡಿ ಸುಮಾರು 20 ಗುಂಟೆ ಜಾಗದಲ್ಲಿ ಡ್ರಾಗನ್ ಫ್ರೂಟ್ ಬೆಳೆದಿದ್ದಾರೆ. ಸಸಿಗಳ ನೆಟ್ಟ 13 ತಿಂಗಳಿಗೆ ಹಣ್ಣು ಬಿಡಲಾರಂಭಿಸಿದೆ. ನಿತ್ಯ ಕ್ವಿಂಟಲ್‌ಗಟ್ಟಲೆ ಹಣ್ಣು ಕಟಾವ್ ಮಾಡಿ ಈರಪ್ಪ ದೂರದ ಮಾರುಕಟ್ಟೆಗೆ ಕಳುಹಿಸುತ್ತಿದ್ದಾರೆ. ಕೆಜಿಗೆ 130 ರೂ ನಿಂದ 150 ರೂ.ವರೆಗೆ ಡ್ರಾಗನ್ ಫ್ರೂಟ್ ಮಾರಾಟವಾಗಲಾರಂಭಿಸಿದೆ.
ಈ ಬಗ್ಗೆ ಈರಪ್ಪ ಮಾಧ್ಯಮದೊಂದಿಗೆ ಮಾತನಾಡಿ, ಕಳೆದ ಹಲವು ವರ್ಷಗಳಿಂದ ಸಾಂಪ್ರದಾಯಿಕ ಬೆಳೆಗಳಾದ ಹತ್ತಿ, ಮೆಕ್ಕೆಜೋಳ ಮತ್ತು ಮೆಣಸಿನಕಾಯಿ ಸೇರಿದಂತೆ ವಿವಿಧ ಬೆಳೆಗಳನ್ನ ಬೆಳೆಯುತ್ತಿದ್ದೆ. ಇದರಿಂದ ಸಾಕಷ್ಟು ನಷ್ಟ ಅನುಭವಿಸಿ ಇದೀಗ ಡ್ರಾಗನ್ ಫ್ರೂಟ್ ಬೆಳೆಗೆ ಮಾರುಹೋಗಿದ್ದೇನೆ. ಇದರಿಂದ ಅದಾಯ ಬರಲಾರಂಭಿಸಿದೆ. ಒಮ್ಮೆ ಹಚ್ಚಿದ ಡ್ರಾಗನ್ ಫ್ರೂಟ್ ಸಸಿ ಸುಮಾರು 30 ವರ್ಷ ಹಣ್ಣು ಬಿಡುತ್ತೆ. ಅಲ್ಲಿಯವರಗೆ ವರ್ಷದಲ್ಲಿ ಮೂರು ತಿಂಗಳು ಪ್ರತಿನಿತ್ಯ ಹಣ್ಣು ಮಾರುವ ಮೂಲಕ ಅದಾಯಗಳಿಸಬಹುದು. ಸದ್ಯ ಒಂದು ತಿಂಗಳಲ್ಲಿ 40 ಸಾವಿರ ರೂ ಆದಾಯ ಗಳಿಸಿರುವುದಾಗಿ ಹೇಳಿದ್ದಾರೆ.
ರಾಜ್ಯದಲ್ಲಿ ಮುಂಗಾರು ಮಳೆ ನಿರೀಕ್ಷೆ ಪ್ರಮಾಣದಲ್ಲಿ ಬಂದಿಲ್ಲ. ಇನ್ನು ಮುಂಗಾರು ಪೂರ್ವ ಮಳೆ ಸಹ ಕೈಕೊಟ್ಟಿದೆ. ಇದರಿಂದಾಗಿ ಡ್ರಾಗನ್ ಫ್ರೂಟ್ ಇಳುವರಿಯಲ್ಲಿ ಕುಂಠಿತವಾಗಿದ್ದು, ಡ್ರಾಗನ್ ಫ್ರೂಟ್ ಸಸ್ಯ ಎಸಳುಗಳು ಹಳದಿಯಾಗಲಾರಂಭಿಸಿವೆ ಎಂಬ ಆತಂಕ ವ್ಯಕ್ತಪಡಿಸುತ್ತಾರೆ ಈರಪ್ಪ. ಮುಂಗಾರು ಮಳೆ ಉತ್ತಮವಾಗಿ ಬಿದ್ದಿದ್ದರೇ ತಮ್ಮ ಇಳುವರಿ ಅಧಿಕವಾಗುತ್ತಿತ್ತು. ಡ್ರಾಗನ್ ಫ್ರೂಟ್ ಪ್ರತಿ ಸಸ್ಯ ಈ ವರ್ಷ 20 ರಿಂದ 30 ಕೆಜಿ ಹಣ್ಣು ಬಿಡುವ ನಿರೀಕ್ಷೆ ಇದೆ. ಮುಂಗಾರು ಮಳೆ ಸರಿಯಾದ ವೇಳೆಗೆ ಬಂದಿದ್ದರೆ ಈ ಪ್ರಮಾಣ ಎರಡರಷ್ಟಾಗುತ್ತಿತ್ತು ಅನ್ನುವುದು ಈರಪ್ಪ ಅನಿಸಿಕೆ.
ಕೊಳವೆ ಬಾವಿಯಲ್ಲಿ ನೀರು ಇರುವ ಕಾರಣ ಇಷ್ಟಾದರೂ ಫಸಲು ಬಂದಿದೆ. ಒಂದು ವೇಳೆ ಕೊಳವೆ ಬಾವಿ ಕೈಕೊಟ್ಟಿದ್ದರೆ ಡ್ರಾಗನ್ ಫ್ರೂಟ್ ಕೃಷಿಯಿಂದ ಏನು ನಿರೀಕ್ಷೆ ಮಾಡಲು ಆಗುತ್ತಿರಲಿಲ್ಲ. ಸಾಂಪ್ರದಾಯಿಕ ಬೆಳೆಗಳನ್ನ ಬೆಳೆದು ಕೈಸುಟ್ಟುಕೊಂಡಿದ್ದ ತನಗೆ ಡ್ರಾಗನ್ ಪ್ರುಟ್ ಲಾಭತಂದಿದೆ. ಈ ವರ್ಷ ಮುಂಗಾರು ವಿಳಂಬವಾಗಿರುವುದು ಲಾಭದ ಪ್ರಮಾಣ ಕಡಿಮೆ ಮಾಡಿದೆ. ಮುಂದಿನ ದಿನಗಳಲ್ಲಿಯಾದರೂ ಉತ್ತಮ ಮಳೆಯಾದರೆ ಇನ್ನು ಹೆಚ್ಚು ಲಾಭಪಡೆಯುವ ಸಾಧ್ಯತೆ ಇದೆ.
ನೀರಿನ ಪ್ರಮಾಣ ಕಡಿಮೆ ಇರುವ ಕಾರಣ ಡ್ರಾಗನ್ ಫ್ರೂಟ್ ಸಸಿಗಳನ್ನ ಮರಿಮಾಡಿ ಬೇರೆ ರೈತರಿಗೆ ಮಾರಾಟ ಮಾಡಲು ಸಾಧ್ಯವಾಗುತ್ತಿಲ್ಲ. ಒಂದು ವೇಳೆ ಮುಂಗಾರು ಉತ್ತಮವಾಗಿದ್ದರೆ ಮರಿಮಾಡಲು ಸಹಾಯವಾಗುತ್ತಿತ್ತು. ಇದರಿಂದ ಸಹ ರೈತರು ಆದಾಯಗಳಿಸಬಹುದು ಎಂದು ಈರಪ್ಪ ಹೇಳಿದ್ದಾರೆ.
ಇದನ್ನೂ ಓದಿ:ಬೆಂಗಳೂರಲ್ಲಿ ಗಗನಕ್ಕೇರಿದ ಟೊಮೆಟೊ ಬೆಲೆ..ಅಬ್ಬಬ್ಬಾ 1 ಕೆಜಿಗೆ 100 ರೂ!