ಹಾವೇರಿ:ಹಾವನೂರು ಏತ ನೀರಾವರಿ ಪಂಪ್‌ಸೆಟ್ ಆರಂಭಿಸಲು ಆಗ್ರಹಿಸಿ ಗುತ್ತಲ ಗ್ರಾಮದ ರೈತರು ರಾಣೆಬೆನ್ನೂರು ನಗರದ ಸಣ್ಣ ನೀರಾವರಿ ಇಲಾಖೆಯ ಉಪ - ವಿಭಾಗದ ಕಚೇರಿಗೆ ಸೋಮವಾರ ಬೀಗ ಜಡಿದು ಪ್ರತಿಭಟನೆ ನಡೆಸಿದರು.
ನಾಲ್ಕು ತಿಂಗಳ ಹಿಂದೆ ಹಾವನೂರ ಏತ ನೀರಾವರಿ ಪಂಪ್‌ಸೆಟ್ ಅನ್ನು ತುಂಗಭದ್ರಾ ನದಿಯಿಂದ ತೆಗೆದು ಇಡಲಾಗಿದೆ. ಈವರೆಗೂ ಅದನ್ನು ಮರಳಿ ಜೋಡಿಸುವ ಕಾರ್ಯಕ್ಕೆ ಅಧಿಕಾರಿಗಳು ಮುಂದಾಗಿಲ್ಲ. ಇದರಿಂದಾಗಿ ನೀರಾವರಿ ನಂಬಿಕೊಂಡು ಕೃಷಿ ಮಾಡುತ್ತಿದ್ದ ರೈತರು ಸಂಕಷ್ಟ ಎದುರಿಸುವಂತಾಗಿದೆ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿ ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಿದರು.
ಏತ ನೀರಾವರಿ ಪಂಪ್‌ಸೆಟ್ ಆರಂಭಿಸಿ ರೈತರಿಗೆ ನೀರು ಒದಗಿಸಿ: ರೈತರ ಆಗ್ರಹ! ರೈತ ಮುಖಂಡ ಪ್ರಕಾಶ ಗಂಗಣ್ಣನವರ ಮಾತನಾಡಿ, ಹಾವನೂರ ಏತ ನೀರಾವರಿಯಿಂದ ಸದ್ಯ 500 ಹೆಕ್ಟೇರ್‌ಗೂ ಅಧಿಕ ಪ್ರದೇಶದಲ್ಲಿ ನೀರಾವರಿ ಮಾಡಿಕೊಂಡು ಕೃಷಿ ಕಾರ್ಯ ಚಟುವಟಿಕೆ ಮಾಡುತ್ತೇವೆ. ಆದರೆ, ಈ ಬಾರಿ ಅಧಿಕಾರಿಗಳು ಪಂಪ್‌ಸೆಟ್ ಆರಂಭಿಸಿಲ್ಲ, ಕೇಳಿದರೆ ಇಂದು - ನಾಳೆ ಎಂದು ಕಾಲಹರಣ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಈ ಬಾರಿ ಅತಿವೃಷ್ಟಿಯಿಂದ ರೈತರು ಮುಂಗಾರು ಬೆಳೆಯನ್ನು ಸಂಪೂರ್ಣ ಕಳೆದುಕೊಂಡಿದ್ದಾರೆ. ಇದೀಗ ಹಿಂಗಾರು ಬಿತ್ತನೆ ಆರಂಭಿಸಬೇಕಿದೆ. ಆದರೆ, ನೀರಿನ ಕೊರತೆಯಿಂದ ಬಿತ್ತನೆ ಕಾರ್ಯ ತಡವಾಗುತ್ತಿದೆ. ಆದ್ದರಿಂದ ಅಧಿಕಾರಿಗಳು ಸ್ಥಳಕ್ಕೆ ಬಂದು ಕೂಡಲೇ ಪಂಪ್‌ಸೆಟ್ ಆರಂಭಿಸಬೇಕು. ಅಲ್ಲಿಯವರೆಗೆ ಕಚೇರಿ ಬಾಗಿಲು ತೆರೆಯುವುದಿಲ್ಲ ಎಂದು ಪಟ್ಟುಹಿಡಿದರು.
ಸ್ಥಳದಲ್ಲಿದ್ದ ಕಚೇರಿಯ ಸಿಬ್ಬಂದಿ ಮಾತನಾಡಿ, ಎಇಇ ಸದ್ಯ ಕಚೇರಿ ಕೆಲಸದ ಮೇಲೆ ಹಾವೇರಿಗೆ ಹೋಗಿದ್ದಾರೆ. ಇನ್ನೆರಡು ದಿನ ಕಾಲಾವಕಾಶ ನೀಡಿ ಸರಿಪಡಿಸಲಾಗುವುದು ಎಂದು ಭರವಸೆ ನೀಡಿದರು. ಇದಕ್ಕೆ ಒಪ್ಪಿಕೊಂಡ ರೈತರು ಇನ್ನೆರಡು ದಿನಗಳಲ್ಲಿ ಸರಿಪಡಿಸದಿದ್ದರೆ ಧಾರವಾಡ ಆಯುಕ್ತರ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಲಾಗುವುದು ಎಂದು ಎಚ್ಚರಿಸಿ ಪ್ರತಿಭಟನೆ ಹಿಂತೆಗೆದುಕೊಂಡರು.