ರಾಣೆಬೆನ್ನೂರು:ಕಳೆದ ಒಂದು ವಾರದಿಂದ ಸುರಿದ ಮಳೆಗೆ ಬೆಳೆ ನಾಶವಾದ್ದರಿಂದ ರೈತನೋರ್ವ ಆತ್ಮಹತ್ಯೆ ಮಾಡಿಕೊಂಡ ಘಟನೆ ರಾಣೆಬೆನ್ನೂರ ತಾಲೂಕಿನ ವೈ.ಟಿ. ಹೊನ್ನತ್ತಿ ಗ್ರಾಮದಲ್ಲಿ ನಡೆದಿದೆ.
ಅಧಿಕ ಮಳೆಯಿಂದ ಬೆಳೆ ನಾಶ: ರೈತ ಆತ್ಮಹತ್ಯೆ
ಮಳೆಯಿಂದಾಗಿ ಬೆಳೆದಿದ್ದ ಬೆಳೆ ನಾಶವಾದ್ದರಿಂದ ರೈತನೋರ್ವ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ವೈ.ಟಿ. ಹೊನ್ನತ್ತಿ ಗ್ರಾಮದಲ್ಲಿ ನಡೆದಿದೆ.
ನಾಗಪ್ಪ ದುರ್ಗಪ್ಪ ಕಿಚಡಿ (25) ಎಂಬ ರೈತ ಗುಡಗೂರ ಅರಣ್ಯ ಪ್ರದೇಶದಲ್ಲಿ ವಿಷ ಸೇವಿಸಿ ಆತ್ಮಹತ್ಯೆಗೆ ಅ.14 ರಂದು ಯತ್ನಿಸಿದ್ದರು. ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗೆ ದಾವಣಗೆರೆ ಬಾಪೂಜಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಅ.15 ರಂದು ಸಾವನ್ನಪ್ಪಿದ್ದಾರೆ.
ದುರ್ಗಪ್ಪ ಕೈಗಡ ಸಾಲ ಮಾಡಿ 15 ಕುರಿಗಳನ್ನು ಮಾರಾಟಕ್ಕೆ ತೆಗೆದುಕೊಂಡು ಸಾಕಿದ್ದರು. ಅದರಲ್ಲಿ 8 ಕುರಿಗಳು ಅತಿಯಾದ ಮಳೆ ಅಥವಾ ಯಾವುದೋ ಕಾರಣಕ್ಕೆ ಸಾವನ್ನಪಿದ್ದವು. ಅಲ್ಲದೇ ಮಳೆಯಿಂದ ಸಹ ಮೆಕ್ಕೆ ಜೋಳ ಬೆಳೆ ನಾಶವಾದ್ದರಿಂದ ಸಾಲ ತೀರಿಸುವುದು ಹೇಗೆ ಎಂದು ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ರಾಣೆಬೆನ್ನೂರ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.