ಹಾವೇರಿ:ಅದು ತಮಿಳುನಾಡಿನಲ್ಲಿ ನಡೆಯುವ ಹೋರಿ ಬೆದರಿಸುವ ಸ್ಪರ್ಧೆಗಳಲ್ಲಿ ಹೆಸರು ಮಾಡಿದ ಹೋರಿ. ಈ ಹೋರಿ ಹಲವು ಸ್ಪರ್ಧೆಗಳಲ್ಲಿ ತನ್ನದೇ ಆದ ಛಾಪು ಮೂಡಿಸಿತ್ತು. ಹೀಗಾಗಿ ಹೋರಿಗೆ ಸಂಪಂಗೆರೆ ರಣಬೇಟೆಗಾರ ಎಂದು ಹೆಸರಿಡಲಾಗಿತ್ತು. ತಮಿಳುನಾಡಿನಲ್ಲಿ ಹೆಸರವಾಸಿಯಾಗಿದ್ದ ಸಂಪಂಗೆರೆ ರಣಬೇಟೆಗಾರನನ್ನು ಹಾವೇರಿಯ ದನ ಬೆದರಿಸುವ ಸ್ಪರ್ಧೆಗೆ ಕರೆತರಲಾಗಿತ್ತು. ಹಾವೇರಿಯ ಶಿವು ಎಂಬುವವರು ತಮಿಳುನಾಡಿನ ಸಂಪಂಗೆರೆ ರಣಬೇಟೆಗಾರ ಹೋರಿಯ ಮಾಲೀಕ ಶಶಿ ಅವರ ಮನವೊಲಿಸಿ ಹಾವೇರಿಗೆ ಕರೆತಂದಿದ್ದರು.
ಅಖಾಡದಲ್ಲಿ ಧೂಳೆಬ್ಬಿಸಬೇಕಿದ್ದ ರಣಬೇಟೆಗಾರ ಅನಾರೋಗ್ಯಕ್ಕೆ ತುತ್ತಾದಿಗಿದ್ದ. ಶಿವು ಮತ್ತು ತಮಿಳುನಾಡಿನ ಶಶಿ ಹಾವೇರಿ ಜಿಲ್ಲೆ ಸೇರಿದಂತೆ ವಿವಿಧ ಪಶು ಆಸ್ಪತ್ರೆಗಳಿಗೆ ತೋರಿಸಿದರು ರಣಬೇಟೆಗಾರನನ್ನು ಬದುಕಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಅಗಲಿದ ಹೋರಿಯ ಪಾರ್ಥಿವ ಶರೀರವನ್ನು ತಗೆದುಕೊಂಡು ಹೋಗಿ ತಮಿಳುನಾಡಿನಲ್ಲಿ ಅಂತ್ಯಕ್ರಿಯೆ ಮಾಡಲಾಗಿತ್ತು. ಈ ರಣಬೇಟೆಗಾರ ಅಗಲಿ ಇಂದಿಗೆ ಒಂದು ವರ್ಷ. ಈ ಹಿನ್ನೆಲೆಯಲ್ಲಿ ಹೋರಿಯ ಮಾಲೀಕರಾದ ಶಶಿ ಮತ್ತು ಶಿವು ಹಾವೇರಿಯಲ್ಲಿ ಮೊದಲ ವರ್ಷದ ಪುಣ್ಯತಿಥಿ ಆಚರಿಸಿದರು.
ಶಿವಾಜಿನಗರದಲ್ಲಿರುವ ಶಿವು ಅವರ ಮನೆ ಮುಂದೆ ರಣಬೇಟೆಗಾರನ ಆಳೆತ್ತರದ ಭಾವಚಿತ್ರ ಹಾಕಿ ಪೂಜೆ ಸಲ್ಲಿಸಲಾಯಿತು. ಹಾವೇರಿ ಜಿಲ್ಲೆ ಶಿಗ್ಗಾಂವಿ ತಾಲೂಕಿನ ಗಂಜಿಗಟ್ಟಿ ಚರಮೂರ್ತಿಗಳ ನೇತೃತ್ವದಲ್ಲಿ ಪೂಜೆ ನೆರವೇರಿತು. ಶಿವಾಜಿನಗರದ ಮಹಿಳೆಯರು ಶಿವು ಸಂಬಂಧಿಕರು ಪುಣ್ಯತಿಥಿಯಲ್ಲಿ ಪಾಲ್ಗೊಂಡು ಅಗಲಿದ ರಣಬೇಟೆಗಾರನಿಗೆ ನಮನ ಸಲ್ಲಿಸಿದರು. ಇದೇ ವೇಳೆ ತಮಿಳುನಾಡಿನಿಂದ ಹೋರಿ ಅಭಿಮಾನಿಗಳು ಆಗಮಿಸಿದ್ದರು.